ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಾಗರಿಕರಿಗೆ ಸಂಬಂಧಿಸಿದ ಸಮಸ್ಯೆಗಳ ತ್ವರಿತ ಪತ್ತೆ ಮತ್ತು ಪರಿಹಾರಕ್ಕಾಗಿ ಬಿಬಿಎಂಪಿಯು ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್’ (ಎಐ) ತಂತ್ರಜ್ಞಾನ ಮೊರೆ ಹೋಗಲು ತಯಾರಿ ಮಾಡುತ್ತಿದೆ.
ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಪ್ರತಿ ದಿನ ಸಾವಿರಾರು ಸಂಖ್ಯೆ ದೂರುಗಳನ್ನು ಬಿಬಿಎಂಪಿಯ ಸಹಾಯವಾಣಿ ಸಂಖ್ಯೆ ಹಾಗೂ ಇತರೆ ಮಾರ್ಗದ ಮೂಲಕ ಸಲ್ಲಿಸುತ್ತಿದ್ದಾರೆ. ಆ ಬಳಿಕವಷ್ಟೇ ಬಿಬಿಎಂಪಿಯು ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿದೆ. ಸಾರ್ವಜನಿಕರಿಂದ ದೂರು ಸಲ್ಲಿಕೆಯಾಗದಿದ್ದರೆ ಸಮಸ್ಯೆ ಪರಿಹಾರವಾಗುವುದೇ ಅನುಮಾನ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯು ಎಐ ತಂತ್ರಜ್ಞಾನ ಬಳಕೆ ಮಾಡಿಕೊಂಡು ಸ್ವಯಂ ನಾಗರಿಕರ ಸಮಸ್ಯೆ ಪತ್ತೆ ಮಾಡಿ ಪರಿಹಾರ ಕಂಡುಕೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಪೊಲೀಸ್ ಕ್ಯಾಮೆರಾ ಬಳಕೆ:
ನಗರ ಪೊಲೀಸ್ ಇಲಾಖೆಯಿಂದ ಬೆಂಗಳೂರಿನ ಬೀದಿ ಬೀದಿ, ಜಂಕ್ಷನ್ ಸೇರಿದಂತೆ ಮೊದಲಾದ ಸ್ಥಳದಲ್ಲಿ ನಿರ್ಭಯ ಯೋಜನೆಯಡಿ ಸುಮಾರು 6 ಸಾವಿರಕ್ಕೂ ಅಧಿಕ ಕ್ಯಾಮೆರಾ ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ಸದ್ಯ ಅಪರಾಧ ಚಟುವಟಿಕೆ ಮೇಲೆ ನಿಗಾ ವಹಿಸುವುದಕ್ಕೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಇದೀಗ ಬಿಬಿಎಂಪಿ ಈ ಕ್ಯಾಮೆರಾಗಳನ್ನು ಸಾರ್ವಜನಿಕರ ಸಮಸ್ಯೆಗಳ ಪತ್ತೆ ಪರಿಹಾರಕ್ಕೂ ಬಳಕೆ ಮಾಡುವುದಕ್ಕೆ ಮುಂದಾಗಿದೆ.
ಎಐ ತಂತ್ರಜ್ಞಾನ ಬಳಕೆ ಹೇಗೆ?
6 ಸಾವಿರ ಕ್ಯಾಮೆರಾಗಳು ಪ್ರತಿದಿನ ಫೋಟೋಗಳನ್ನು ಸೆರೆ ಹಿಡಿಯುತ್ತವೆ. ಆ ಫೋಟೋಗಳ ಪೈಕಿ ಬಿಬಿಎಂಪಿಯು ಕಸ ವಿಲೇವಾರಿ ಸಮಸ್ಯೆ, ರಸ್ತೆ ಗುಂಡಿ, ವಿದ್ಯುತ್ ದೀಪ ಸಮಸ್ಯೆ ಸೇರಿದಂತೆ ಮೊದಲಾದ ಸಮಸ್ಯೆಗಳಿಗೆ ಸಂಬಂಧಿಸಿದ ಫೋಟೋಗಳನ್ನು ಎಐ ತಂತ್ರಜ್ಞಾನ ಬಳಕೆ ಮಾಡಿಕೊಂಡು ಪ್ರತ್ಯೇಕಗೊಳಿಸಿ ಬಿಬಿಎಂಪಿಯ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಳಾಸ ಸಹಿತ ರವಾನೆ ಮಾಡಲಿದೆ. ಆ ಅಧಿಕಾರಿಯು ಸೊಮೋಟೋ ದೂರು ದಾಖಲಿಸಿಕೊಂಡು ಪರಿಹಾರ ಮಾಡಲಿದ್ದಾರೆ.
ಕ್ಯಾಮೆರಾ ನಿಗಾ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿಯೂ ನಗರದ ಸಮಸ್ಯೆಗಳ ಕುರಿತು ದಾಖಲಾಗುವ ದೂರುಗಳನ್ನು ಶೋಧ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೂ ನೀಡುವ ವ್ಯವಸ್ತೆಯನ್ನು ಎಐ ತಂತ್ರಜ್ಞಾನ ಮೂಲಕ ಮಾಡಲು ನಿರ್ಧರಿಸಲಾಗಿದೆ.
ಬಿಬಿಎಂಪಿ ವಾಹನಗಳಿಗೆ ಕ್ಯಾಮೆರಾ
ಪೊಲೀಸ್ ಇಲಾಖೆಯ ಕ್ಯಾಮೆರಾಗಳ ಜತೆಗೆ ಬಿಬಿಎಂಪಿಯು ತನ್ನ ಅಧಿಕಾರಿಗಳು ಬಳಕೆ ಮಾಡುವ ಕಾರು ಸೇರಿದಂತೆ ಇತರೆ ವಾಹನಗಳಿಗೂ ಸುಮಾರು 250 ಕ್ಯಾಮೆರಾಗಳನ್ನು ಅಳವಡಿಕೆ ಮಾಡುವುದಕ್ಕೆ ತೀರ್ಮಾನಿಸಿದೆ. ಈ ಕ್ಯಾಮೆರಾಗಳಲ್ಲಿ ಸೆರೆಯಾಗುವ ಸಾರ್ವಜನಿಕ ಸಮಸ್ಯೆಗಳನ್ನು ಎಐ ತಂತ್ರಜ್ಞಾನದ ಮೂಲಕ ಪತ್ತೆ ಮಾಡಲು ಯೋಜನೆ ರೂಪಿಸಿದೆ.
₹3 ಕೋಟಿ ವೆಚ್ಚ
ಎಐ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕ್ಯಾಮೆರಾದಲ್ಲಿ ಸೆರೆಯಾಗುವ ಪ್ರತಿಯೊಂದು ಸಮಸ್ಯೆಗಳನ್ನು ಗುರುತಿಸಿ ಬಿಬಿಎಂಪಿಗೆ ನೀಡುವುದಕ್ಕೆ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಮೂರು ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಗುತ್ತಿಗೆ ಪಡೆದ ಸಂಸ್ಥೆಯು ಮೂರು ವರ್ಷ ಎಐ ತಂತ್ರಜ್ಞಾನ ಬಳಕೆ ಮಾಡಿಕೊಂಡು ಸಮಸ್ಯೆ ಗುರುತಿಸಿ ಬಿಬಿಎಂಪಿಗೆ ಅಧಿಕಾರಿಗಳಿಗೆ ರವಾನೆ ಮಾಡಿವ ಕಾರ್ಯ ಮಾಡಬೇಕಿದೆ.