‘ಬ್ರ್ಯಾಂಡ್‌ ಬೆಂಗಳೂರು’ಗಾಗಿಯೇ ಪಾಲಿಕೆ ಬಜೆಟ್‌

KannadaprabhaNewsNetwork |  
Published : Mar 01, 2024, 02:15 AM ISTUpdated : Mar 01, 2024, 07:48 AM IST
ಬಜೆಟ್‌ | Kannada Prabha

ಸಾರಾಂಶ

ಬಿಬಿಎಂಪಿ ಗುರುವಾರ ತನ್ನ 2024-25ನೇ ಸಾಲಿನ ಬಜೆಟ್‌ ಮಂಡಿಸಿದೆ. ಎಲ್ಲಿಯೂ ನಾಗರಿಕರಿಗೆ ನೇರವಾಗಿ ಹೊರೆ ಉಂಟಾಗುವ ಆರ್ಥಿಕ ಭಾರ ಹೇರಿಲ್ಲ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ ಸರ್ಕಾರ ತೇಲಿಬಿಡುತ್ತಿರುವ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ ಸಾಕಾರಕ್ಕಾಗಿಯೇ ಬಿಬಿಎಂಪಿ 2024-25ನೇ ಸಾಲಿನ ಆಯವ್ಯಯ ರೂಪಿಸಿದಂತಿದ್ದು, ಮಹಾತ್ವಾಕಾಂಕ್ಷೀಯ ಸುರಂಗ ಮಾರ್ಗ ಯೋಜನೆಗೆ ಶ್ರೀಕಾರ, ಡಬಲ್‌ ಡೆಕ್ಕರ್ ರಸ್ತೆ, ಪರಿಸರ ಸ್ನೇಹಿ ನಡಿಗೆ ಪಥ, ಅಂಡರ್‌ ಗ್ರೌಂಡ್‌ ಪಾರ್ಕಿಂಗ್‌ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಘೋಷಿಸಲಾಗಿದೆ. ಜತೆಗೆ, ಯಾವುದೇ ತೆರಿಗೆ ಭಾರವಿಲ್ಲ. ₹12,369.46 ಕೋಟಿ ಗಾತ್ರದ ಬಜೆಟ್‌ ಮಂಡಿಸಲಾಗಿದೆ.

ಬಿಬಿಎಂಪಿ ಗುರುವಾರ ತನ್ನ 2024-25ನೇ ಸಾಲಿನ ಬಜೆಟ್‌ ಮಂಡಿಸಿದೆ. ಎಲ್ಲಿಯೂ ನಾಗರಿಕರಿಗೆ ನೇರವಾಗಿ ಹೊರೆ ಉಂಟಾಗುವ ಆರ್ಥಿಕ ಭಾರ ಹೇರಿಲ್ಲ. ಆದರೆ, ತೆರಿಗೇತರ ಆದಾಯ ಸಂಗ್ರಹಕ್ಕೆ ಹೆಚ್ಚಿನ ಒಲವು ನೀಡಿದೆ. ಈ ನಿಟ್ಟಿನಲ್ಲಿ ಹಲವು ಮಹತ್ವದ ನೀತಿ ನಿರೂಪಣೆಗಳನ್ನು ಪ್ರಸಕ್ತ ಸಾಲಿನಲ್ಲಿ ರಚಿಸಿ ಜಾರಿಗೊಳಿಸುವುದಕ್ಕೆ ಸಕಲ ತಯಾರಿ ಮಾಡಿಕೊಡಿರುವುದಾಗಿ ಬಜೆಟ್‌ನಲ್ಲಿ ಪರೋಕ್ಷವಾಗಿ ತಿಳಿಸಿದೆ.

ಈ ಹಿಂದಿನ ಸಾಲಿನಲ್ಲಿ ಬಹುತೇಕ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುದಾನ ನೆಚ್ಚಿಕೊಂಡು ಬಜೆಟ್‌ ಮಂಡಿಸುವುದು ನೇರವಾಗಿ ತಿಳಿಯುತ್ತಿತ್ತು. ಆದರೆ, ಈ ಬಾರಿಯ ಪಾಲಿಕೆ ಬಜೆಟ್‌ನಲ್ಲಿ ಬಿಬಿಎಂಪಿ ಸ್ವಂತ ಸಂಪನ್ಮೂಲ ಕ್ರೂಢೀಕರಣಕ್ಕೆ ಒತ್ತು ನೀಡಲಾಗಿದೆ.

ಈ ನಿಟ್ಟಿನಲ್ಲಿ ಮಾರ್ಗಸೂಚಿ ದರ ಆಧಾರಿತ ಆಸ್ತಿ ತೆರಿಗೆ ಜಾರಿ, ಒಟಿಎಸ್‌ ಯೋಜನೆ ಜಾರಿಗೊಳಿಸಿದೆ. ಆದರೂ ಕಳೆದ ಬಾರಿಗಿಂತ ಈ ವರ್ಷ ₹367 ಕೋಟಿ ಮಾತ್ರ ಹೆಚ್ಚಿನ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದೆ. ಆದರೆ, ಕಳೆದ ವರ್ಷಕ್ಕಿಂತ ₹795 ಕೋಟಿ ಹೆಚ್ಚುವರಿ ತೆರಿಗೇತರ ಆದಾಯ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ಹೊಸ ಜಾಹೀರಾತು ನೀತಿ, ಪ್ರೀಮಿಯಂ ಎಫ್‌ಎಆರ್‌ ಸೇರಿದಂತೆ ಮೊದಲಾದ ಕ್ರಮಗಳನ್ನು ಕೈಗೊಂಡಿದೆ. ಇಲ್ಲದೇ, ತ್ಯಾಜ್ಯ ಶುಲ್ಕ ವಿಧಿಸುವುದಕ್ಕೆ ತೆರೆ ಮರೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇನ್ನು ಪ್ರಾಯೋಗಿಕ ಸುರಂಗ ರಸ್ತೆ ನಿರ್ಮಾಣ ಯೋಜನೆ, ರಸ್ತೆ ಅಗಲೀಕರಣ, ಪರಿಸರ ಸ್ನೇಹಿ ನಡಿಗೆ ಪಥ, ರೋಟರಿ ಮೇಲ್ಸೇತುವೆ, ಡಬಲ್‌ ಡೆಕ್ಕರ್ ರಸ್ತೆ, ಅಂಡರ್‌ ಗ್ರೌಂಡ್‌ ಪಾರ್ಕಿಂಗ್‌ ಸೇರಿದಂತೆ ನಗರಕ್ಕೆ ನೀಡಲಾದ ಅಭಿವೃದ್ಧಿ ಯೋಜನೆಗಳಾಗಿದೆ. ಒಟ್ಟಾರೆ ಬಜೆಟ್‌ನಲ್ಲಿ ಬಿಬಿಎಂಪಿ ಅಬಿವೃದ್ಧಿ ಕಾಮಗಾರಿಗೆ ₹3,173.10 ಕೋಟಿ ಸರ್ಕಾರದ ಅನುದಾನದಲ್ಲಿ ₹3,488 ಕೋಟಿ ಸೇರಿದಂತೆ ಒಟ್ಟಾರೆ ₹6,661 ಕೋಟಿ ವಿನಿಯೋಗಿಸಲಾಗುತ್ತಿದೆ.

ಉಳಿದಂತೆ ಹಿಂದುಳಿದ, ಅಲ್ಪಸಂಖ್ಯಾತ, ಮಹಿಳೆ, ಮಂಗಳ ಮುಖಿಯರಿಗೆ ಇ-ಸಾರಥಿ ಅಂತಹ ವೈಯಕ್ತಿಕ ಸೌಲಭ್ಯ ಒದಗಿಸುವ ಯೋಜನೆ, ಜಂಟಿ ಮನೆ ಯೋಜನೆ, ಪೌರಕಾರ್ಮಿಕರಿಗೆ ಶರಣೆ ಸತ್ಯಕ್ಕ ಪ್ರಶಸ್ತಿ ನೀಡುವುದು, ಬೀದಿ ಬದಿ ವ್ಯಾಪಾರಿಗಳಿಗೆ ವೆಂಡಿಗ್‌ ರಿಕ್ಷಾ ನೀಡುವುದು ಸೇರಿದಂತೆ ಮೊದಲಾದ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.

ಒಟ್ಟಾರೆ, ಬಿಬಿಎಂಪಿಯು ಆಸ್ತಿ ತೆರಿಗೆ ಮತ್ತು ಕರದಿಂದ ₹4470 ಕೋಟಿ, ತೆರಿಗೇತರ ಆದಾಯದಿಂದ ₹3097 ಕೋಟಿ, 15ನೇ ಹಣಕಾಸು ಆಯೋಗದಿಂದ ₹589 ಕೋಟಿ, ರಾಜ್ಯ ಸರ್ಕಾರದಿಂದ ₹3 ಸಾವಿರ ಕೋಟಿ, ಕೇಂದ್ರ ಸರ್ಕಾರದಿಂದ ₹488.01 ಕೋಟಿ ಸೇರಿದಂತೆ ಒಟ್ಟಾರೆ ₹12,371 ಕೋಟಿ ಆದಾಯ ನಿರೀಕ್ಷಿಸಿ ₹2.17 ಕೋಟಿ ಉಳಿತಾಯ ಬಜೆಟ್‌ ಮಂಡನೆ ಮಾಡಿದೆ.

ಅನಿಶ್ಚಿತ ಆದಾಯ ನೆಚ್ಚಿಕೊಂಡ ಪಾಲಿಕೆ

ಬಜೆಟ್‌ನಲ್ಲಿ ಕಂದಾಯ ವಿಭಾಗದಿಂದ ₹6 ಸಾವಿರ ಕೋಟಿ ಆದಾಯ ನಿರೀಕ್ಷೆ ಹೊಂದಿರುವುದಾಗಿ ತಿಳಿಸಲಾಗಿದೆ. ಅದರಲ್ಲಿ ಆಸ್ತಿ ತೆರಿಗೆಯಿಂದ ₹4,470 ಕೋಟಿ ಸಂಗ್ರಹಿಸಲಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಇಳಿದ ₹1,530 ಕೋಟಿಗಳನ್ನು, ಜಾಹೀರಾತು ನೀತಿ ಅನುಷ್ಠಾನ, ಡಿಆರ್‌ಸಿ ಮತ್ತು ಟಿಡಿಆರ್‌ ಸೇರಿದಂತೆ ಇನ್ನಿತರ ಮೂಲಗಳಿಂದ ಸಂಗ್ರಹಿಸುತ್ತೇವೆ ಎಂದು ತಿಳಿಸಲಾಗಿದೆ.

 ಆದರೆ, ಡಿಆರ್‌ಸಿ/ಟಿಡಿಆರ್‌ಗಳ ಬಗ್ಗೆ ಜನರು ನಿರಾಸಕ್ತಿ ಹೊಂದಿದ್ದಾರೆ. ಅಲ್ಲದೆ ಬಿಬಿಎಂಪಿ ರೂಪಿಸುತ್ತಿರುವ ನೂತನ ಜಾಹೀರಾತು ನೀತಿಗೆ ಹೈಕೋರ್ಟ್‌ ಮತ್ತು ಸರ್ಕಾರ ಅನುಮೋದನೆ ನೀಡಬೇಕು. ಹೀಗಾಗಿ ಅದು ಸದ್ಯಕ್ಕೆ ಅನುಷ್ಠಾನಗೊಳ್ಳುವುದಿಲ್ಲ. ಹೀಗಾಗಿ ಆ ಮೂಲಗಳಿಂದ ಆದಾಯ ಬರುವುದು ಅನುಮಾನ.ಪ್ರೀಮಿಯಂ ಎಫ್‌ಎಆರ್‌ನಿಂದ ₹1 ಸಾವಿರ ಕೋಟಿ ಸಂಗ್ರಹ

ಬೆಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಗಾಗಿ ಪ್ರೀಮಿಯಂ ನೆಲ ವಿಸ್ತೀರ್ಣ ಅನುಪಾತ (ಎಫ್‌ಎಆರ್‌) ವ್ಯವಸ್ಥೆ ಜಾರಿ ಮಾಡುವ ಘೋಷಣೆ ಮಾಡಲಾಗಿದೆ. ಈ ಮೂಲದಿಂದ ₹1 ಸಾವಿರ ಕೋಟಿ ಆದಾಯ ನಿರೀಕ್ಷೆ ಹೊಂದಲಾಗಿದೆ. ಆದರೆ, ಪ್ರೀಮಿಯಂ ಎಫ್‌ಎಆರ್‌ಗೆ ಸಂಬಂಧಿಸಿದಂತೆ ಇನ್ನೂ ಸಮರ್ಪಕ ರೂಪುರೇಷೆ ಸಿದ್ಧವಾಗಿಲ್ಲ. ಹೀಗಿರುವಾಗ ಅದರಿಂದ ಆದಾಯ ನಿರೀಕ್ಷೆ ಮಾಡುವ ಮೂಲಕ ಬಿಬಿಎಂಪಿ ಅಧಿಕಾರಿಗಳು ಆದಾಯ ನಿರೀಕ್ಷೆ ಅಂದಾಜಿಸುವಲ್ಲಿ ಎಡವಿದ್ದಾರೆ.

ಸರ್ಕಾರಗಳ ಅನುದಾನ ಶೇ.33

ಬಿಬಿಎಂಪಿ ಬಜೆಟ್‌ ಅನುಷ್ಠಾನಕ್ಕೆ ನಿಗದಿ ಮಾಡಿರುವ ಆದಾಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನದ ಪಾಲು ಶೇ.33ರಷ್ಟಿದೆ. ಅದರಲ್ಲಿ ರಾಜ್ಯ ಸರ್ಕಾರದ ಪಾಲು ಶೇ.29ರಷ್ಟಿದ್ದರೆ, ಕೇಂದ್ರ ಸರ್ಕಾರದ ಅನುದಾನದ ಪಾಲು ಶೇ.4ರಷ್ಟಿದೆ. ಅಂದರೆ ರಾಜ್ಯ ಸರ್ಕಾರದಿಂದ ₹3589 ಕೋಟಿ ಹಾಗೂ ಕೇಂದ್ರ ಸರ್ಕಾರದಿಂದ ₹488 ಕೋಟಿ ಬರಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರಗಳ ಅನುದಾನವನ್ನೇ ಕಾಯಬೇಕಿದೆ.

ಬೃಹತ್‌ ಯೋಜನೆಗಳ ಅನುಷ್ಠಾನ ಕಷ್ಟಾಕಷ್ಟ

ಬಿಬಿಎಂಪಿ ಅಧಿಕಾರಿಗಳು ನಿರೀಕ್ಷೆಯಂತೆ ಆದಾಯಗಳಿಸಿದರೂ, ಬಜೆಟ್‌ನಲ್ಲಿ ಘೋಷಿಸಲಾಗಿರುವ ಸಾಕಷ್ಟು ಯೋಜನೆಗಳ ಅನುಷ್ಠಾನ ಕಠಿಣವಾಗಿದೆ. ಪ್ರಮುಖವಾಗಿ ಸುರಂಗ ರಸ್ತೆ ನಿರ್ಮಾಣ, ಸ್ಕೈಡೆಕ್‌, ಖಾಲಿ ಹುದ್ದೆಗಳ ನೇರ ನೇಮಕಾತಿ, ವೈದ್ಯಕೀಯ ಕಾಲೇಜು ಆರಂಭ ಹೀಗೆ ಹಲವು ಯೋಜನೆಗಳು 2024-25ರಲ್ಲೇ ಅನುಷ್ಠಾನಗೊಳಿಸುವುದು ಸಾಧ್ಯವಿಲ್ಲ. ಹೀಗಾಗಿ ಪ್ರಸಕ್ತ ಬಜೆಟ್‌ನ ಕಾರ್ಯಕ್ರಮಗಳು ಮುಂದಿನ ನಾಲ್ಕೈದು ವರ್ಷಗಳಿಗೆ ಮುಂದೂಲ್ಪಡಲಿದೆ. ಅದು ಬಜೆಟ್‌ ಅನುಷ್ಠಾನದ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.ಹಿಂದಿನ ಬಜೆಟ್‌ ಕಡಿತ

2023-24ನೇ ಸಾಲಿನಲ್ಲಿ ₹11,157.83 ಕೋಟಿ ಮೊತ್ತದ ಬಜೆಟ್‌ ಮಂಡಿಸಲಾಗಿತ್ತು. ಆದರೆ, ₹9,599.89 ಕೋಟಿ ಮೊತ್ತದ ಆಯವ್ಯಯ ಅನುಷ್ಠಾನಗೊಳಿಸಲಷ್ಟೇ ಬಿಬಿಎಂಪಿ ಅಧಿಕಾರಿಗಳು ಶಕ್ತರಾಗಿದ್ದಾರೆ. ಹೀಗಾಗಿ 2024-25ನೇ ಸಾಲಿನ ಬಜೆಟ್‌ ಗಾತ್ರದಲ್ಲಿ ₹1,557.94 ಕೋಟಿ ಕಡಿತಗೊಳಿಸಿ, ಬಜೆಟ್‌ ಗಾತ್ರವನ್ನು ₹9,599.89 ಕೋಟಿಗೆ ನಿಗದಿ ಮಾಡಲಾಗಿದೆ. ಇಷ್ಟಾದರೂ ಕಡಿತಗೊಂಡ ಬಜೆಟ್‌ ಗಾತ್ರಕ್ಕಿಂತ ₹2,769.57 ಕೋಟಿ ಹೆಚ್ಚಿನ ಮೊತ್ತದ ಬಜೆಟ್‌ ಸಿದ್ಧಪಡಿಸಿ ಈ ಬಾರಿ ಮಂಡಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!