ನಾಮಫಲಕದಲ್ಲಿದ್ದ ಕನ್ನಡ ತಪ್ಪುಅಕ್ಷರ ಸರಿಪಡಿಸಿದ ಬಿಬಿಎಂಪಿ

KannadaprabhaNewsNetwork |  
Published : Oct 20, 2024, 01:56 AM IST
KANNADA 2 | Kannada Prabha

ಸಾರಾಂಶ

ನಾಮಫಲಕಗಳಲ್ಲಿ ಕನ್ನಡ ಅಕ್ಷರ ತಪ್ಪಾಗಿ ಬರೆದಿದ್ದ ಬಿಬಿಎಂಪಿ ಈಗ ಅದನ್ನು ಸರಿಪಡಿಸಿದೆ. ಆದರೆ ಇನ್ನೂ ಹಲವೆಡೆ ತಪ್ಪು ಅಕ್ಷರ ಕಾಣಿಸಿಕೊಂಡಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಹಲಸೂರಿನ ಆಂಡಾಳಮ್ಮ ದೇವಸ್ಥಾನ ಬೀದಿಯ ನಾಮಫಲಕದಲ್ಲಿ ಕನ್ನಡವನ್ನು ತಪ್ಪಾಗಿ ಬಳಕೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಕನ್ನಡಪ್ರಭ ಪ್ರಕಟಿಸಿದ ವರದಿಯಿಂದ ಎಚ್ಚೆತ್ತುಕೊಂಡು ಬಿಬಿಎಂಪಿ ತಪ್ಪಾಗಿ ಬಳಸಿದ್ದ ಕನ್ನಡದ ಪದವನ್ನು ಸರಿಪಡಿಸಿದೆ.

ನಗರದ ವಿವಿಧ ರಸ್ತೆಯಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಕನ್ನಡವನ್ನು ತಪ್ಪಾಗಿ ಬರೆದು ಕನ್ನಡಕ್ಕೆ ಅಪಮಾನ ಮಾಡುತ್ತಿರುವ ಕುರಿತು ಕರ್ನಾಟಕ ವಿಕಾಸ ರಂಗ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕುರಿತು ಕನ್ನಡಪ್ರಭ ಸುದ್ದಿಯೊಂದನ್ನು ಪ್ರಕಟಿಸಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಬಿಎಂಪಿ ಹಲಸೂರಿನ ಆಂಡಾಳಮ್ಮ ದೇವಸ್ಥಾನ ಬೀದಿಯ ನಾಮಫಲಕದ ಕನ್ನಡಪದವನ್ನೇನೋ ಸರಿಪಡಿಸಿರುವುದು ಸ್ವಾಗತಾರ್ಹ.

ಆದರೆ, ನಗರದ ಇತರೆ ರಸ್ತೆಗಳ ನಾಮಫಲಕಗಳಲ್ಲೂ ಕೂಡ ಕನ್ನಡವನ್ನು ತಪ್ಪಾಗಿ ಬರೆದಿರುವುದು ಕಂಡುಬಂದಿದೆ. ಕೇವಲ ಒಂದು ನಾಮಫಲಕವನ್ನು ಸರಿಪಡಿಸಿದರೆ ಸಾಲದು, ನ.1ರೊಳಗೆ ಎಲ್ಲ ನಾಮಫಲಕಗಳಲ್ಲಿ ತಪ್ಪಾಗಿರುವ ಕನ್ನಡ ಅಕ್ಷರಗಳನ್ನು ಸರಿಪಡಿಸದಿದ್ದರೆ ಕನ್ನಡಪರ ಸಂಘಟನೆಗಳೊಂದಿಗೆ ಬಿಬಿಎಂಪಿ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ವಿಕಾಸರಂಗ ಎಚ್ಚರಿಸಿದೆ.ಕನ್ನಡ ಅಭಿಮಾನವುಳ್ಳ ಅಧಿಕಾರಿ ನೇಮಿಸಲಿ: ಕನ್ನಡ ಪ್ರಾಧಿಕಾರಕನ್ನಡಪ್ರಭ ವಾರ್ತೆ, ಬೆಂಗಳೂರು

ಬಿಬಿಎಂಪಿ ಸಾರ್ವಜನಿಕ ಸೇವಾ ವಿಭಾಗಗಳಿಗೆ ಕನ್ನಡ ಭಾಷೆ ಅರಿವು, ಅಭಿಮಾನವುಳ್ಳ ಅಧಿಕಾರಿಗಳನ್ನು ನೇಮಿಸಬೇಕೆಂದು ಪಾಲಿಕೆ ಮುಖ್ಯ ಆಯುಕ್ತರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚನೆ ನೀಡಿದೆ.ಶನಿವಾರ ಈ ಕುರಿತು ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಪ್ರಾಧಿಕಾರದ ಅಧ್ಯಕ್ಷ ಡಾ। ಪುರುಷೋತ್ತಮ ಬಿಳಿಮಲೆ ಅವರು, ಕನ್ನಡಿಗರ ಅಸ್ಮಿತೆಯ ಪ್ರತೀಕವಾಗಬೇಕಾದ ಬಿಬಿಎಂಪಿ ಹಲವು ಕಾರಣಗಳಿಂದ ಕನ್ನಡ ವಿರೋಧಿಯೆಂದು ಸಾರ್ವಜನಿಕ ವಲಯದಲ್ಲಿ ನಕಾರಾತ್ಮಕವಾಗಿ ಪ್ರತಿಬಿಂಬಗೊಳ್ಳುತ್ತಿರುವುದು ವಿಷಾದನೀಯ ಸಂಗತಿ. ಕೂಡಲೇ ಇದನ್ನು ಸರಿಪಡಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ರಸ್ತೆ ನಾಮಫಲಕಗಳಲ್ಲಿ ತಪ್ಪು ತಪ್ಪಾದ ಕನ್ನಡ ಪದಗಳನ್ನು ಬಳಸಲಾಗುತ್ತಿದೆ. ಇದು ಕೇವಲ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂತಹ ಪ್ರಮಾದಗಳು ಮುಂದುವರೆಯುತ್ತಿವೆ. ಪಾಲಿಕೆಯೇ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಕನ್ನಡದ ಶೀರ್ಷಿಕೆಗಳು ಕಾಣೆಯಾಗುತ್ತಿರುವುದು ಕನ್ನಡದ ಹಿತ ಕಾಯಬೇಕಾದ ಸಂಸ್ಥೆಯಿಂದ ಆಗಬೇಕಾದ ಕೆಲಸಗಳಲ್ಲ ಎಂದಿದ್ದಾರೆ.ಪಾಲಿಕೆಯಿಂದ ಬೀದಿ ನಾಯಿಗಳಿಗೆ ಆಹಾರ ನೀಡುವ ಕುಕುರ್ ತಿಹಾರ್ ಎನ್ನುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಕನ್ನಡ ಸಂಸ್ಕೃತಿಯ ಕುರಿತಾದ ಯಾವುದೇ ಆಲೋಚನೆಗಳು ಪಾಲಿಕೆ ಅಧಿಕಾರಿಗಳಲ್ಲಿ ಸುಳಿಯದೇ ಇರುವುದು ದುರ್ದೈವದ ಸಂಗತಿ. ಇಂತಹ ಪ್ರಮಾದಗಳಿಗೆ ಕಾರಣರಾಗಿರುವ ಅಧಿಕಾರಿಗಳಿಗೆ ಸೂಕ್ತ ಎಚ್ಚರಿಕೆ ನೀಡಬೇಕು. ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಪ್ರಾಧಿಕಾರಕ್ಕೆ ವರದಿಸಬೇಕೆಂದು ಪಾಲಿಕೆ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.ಕನ್ನಡ ಪರ ಕೆಲಸಗಳಿಗೆ ಅಧಿಕಾರಿಗಳ ಪಾತ್ರ ಪ್ರಮುಖವಾಗಿದ್ದು, ಪಾಲಿಕೆಯ ಸಾರ್ವಜನಿಕ ಸೇವಾ ವಿಭಾಗಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಕನ್ನಡ ಭಾಷೆ, ಸಾಹಿತ್ಯದ ಜ್ಞಾನ ಮತ್ತು ಅಭಿಮಾನಗಳನ್ನು ಹೊಂದಿರಬೇಕಾಗುತ್ತದೆ. ಇಂತಹ ವಿಭಾಗಗಳಿಗೆ ಕಡ್ಡಾಯವಾಗಿ ಕನ್ನಡದ ಒಲವುಳ್ಳ ಅಧಿಕಾರಿಗಳನ್ನು ನೇಮಿಸಿ.-ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''