₹8 ಸಾವಿರ ಕೋಟಿಗಾಗಿ ಬಿಬಿಎಂಪಿ ಪ್ರಸ್ತಾವನೆ

KannadaprabhaNewsNetwork |  
Published : Feb 06, 2024, 01:31 AM IST
ಬಿಬಿಎಂಪಿ | Kannada Prabha

ಸಾರಾಂಶ

ವಿವಿಧ ಕಾಮಗಾರಿ, ಯೋಜನೆ, ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಗಾಗಿ 8 ಸಾವಿರ ಕೋಟಿ ನೀಡುವಂತೆ ಬಿಬಿಎಂಪಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂದಿನ ವಾರ ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ಬಿಬಿಎಂಪಿಗೆ ₹8 ಸಾವಿರ ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಪ್ರತಿ ವರ್ಷ ರಾಜ್ಯ ಬಜೆಟ್‌ ಮಂಡನೆಗೂ ಮುನ್ನ ಬಿಬಿಎಂಪಿಯಿಂದ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಪ್ರಮುಖವಾಗಿ ಬಾಕಿ ಬಿಲ್‌ ಪಾವತಿ ಸೇರಿದಂತೆ ಹೊಸ ಯೋಜನೆಗಳಿಗೆ ಅಗತ್ಯವಿರುವ ಅನುದಾನವನ್ನು ಉಲ್ಲೇಖಿಸಿ ಪ್ರಸ್ತಾವನೆ ಕಳುಹಿಸಲಾಗುತ್ತದೆ. ಅದರಂತೆ ಫೆ.16ರಂದು ಮಂಡನೆ ಆಗಲಿರುವ ರಾಜ್ಯ ಬಜೆಟ್‌ನಲ್ಲಿ ಬಿಬಿಎಂಪಿಗಾಗಿಯೇ ₹8 ಸಾವಿರ ಕೋಟಿ ಅನುದಾನ ನೀಡುವಂತೆ ಕೋರಲಾಗಿದೆ. ಅದರಲ್ಲಿ ಪ್ರಮುಖವಾಗಿ ಹಾಲಿ ಬಾಕಿ ಇರುವ ಹಾಗೂ ಚಾಲ್ತಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ₹2,700 ಕೋಟಿ ಮೊತ್ತದ ಬಿಲ್‌ ಪಾವತಿಗೆ ಮೀಸಲಿಡಲಾಗುತ್ತದೆ ಎಂದೂ ತಿಳಿಸಲಾಗಿದೆ. ಉಳಿದ ಅನುದಾನವನ್ನು 2024-25ನೇ ಸಾಲಿನಲ್ಲಿ ಕೈಗೊಳ್ಳಲಿರುವ ಹೊಸ ಕಾಮಗಾರಿಗಳಿಗೆ ಬಳಸಿಕೊಳ್ಳುವುದಾಗಿಯೂ ಬಿಬಿಎಂಪಿ ತಿಳಿಸಿದೆ.

ಬ್ರ್ಯಾಂಡ್‌ ಬೆಂಗಳೂರಿಗೆ ಹೆಚ್ಚಿನ ಒತ್ತು:

ರಾಜ್ಯ ಬಜೆಟ್‌ನಲ್ಲಿ ಮಂಡನೆ ನಂತರ ಮಾರ್ಚ್‌ ಮೊದಲ ವಾರದಲ್ಲಿ ಬಿಬಿಎಂಪಿ ಬಜೆಟ್‌ ಮಂಡನೆ ಮಾಡಲು ಹಣಕಾಸು ವಿಭಾಗದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ವಿಭಾಗವಾರು ಯೋಜನೆಗಳು, ಬಾಕಿ ಬಿಲ್‌, ಚಾಲ್ತಿ ಕಾಮಗಾರಿಗಳ ವಿವರವನ್ನು ಪಡೆಯಲಾಗುತ್ತಿದೆ. ಅದರ ಜತೆಗೆ ಉಪ ಮುಖ್ಯಮಂತ್ರಿಗಳ ನಿರ್ದೇಶನದಂತೆ ಸಿದ್ಧಪಡಿಸಲಾಗುತ್ತಿರುವ ಬ್ರ್ಯಾಂಡ್‌ ಬೆಂಗಳೂರು ವರದಿಯಲ್ಲಿನ ಅಂಶಗಳನ್ನು ಈ ಬಾರಿ ಬಜೆಟ್‌ನಲ್ಲಿ ಸೇರಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿಯೇ ಅಂದಾಜು ₹3 ಸಾವಿರ ಕೋಟಿಗೂ ಹೆಚ್ಚಿನ ಮೊತ್ತ ನಿಗದಿ ಮಾಡುವ ಸಾಧ್ಯತೆಗಳಿವೆ.

ಸದ್ಯ ಬ್ರ್ಯಾಂಡ್‌ ಬೆಂಗಳೂರು ವರದಿಯಲ್ಲಿ ಸಂಚಾರ ದಟ್ಟಣೆ ನಿವಾರಣೆ, ತ್ಯಾಜ್ಯ ಸಮಸ್ಯೆಗೆ ಪರಿಹಾರ ಹೀಗೆ ಹಲವು ಉಪಕ್ರಮಗಳ ಬಗ್ಗೆ ಉಲ್ಲೇಖವಿದೆ. ಅದನ್ನು ಶೀಘ್ರದಲ್ಲಿ ಡಿಸಿಎಂ ಮೂಲಕ ಸರ್ಕಾರಕ್ಕೆ ಸಲ್ಲಿಸಲು ಬಿಬಿಎಂಪಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಆ ವರದಿ ಸಲ್ಲಿಕೆ ನಂತರ ಅದರಲ್ಲಿನ ಅಂಶಗಳನ್ನು ಬಿಬಿಎಂಪಿ ಬಜೆಟ್‌ನಲ್ಲಿ ಸೇರಿಸಲೂ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಬಜೆಟ್ ಗಾತ್ರ ಇಳಿಕೆ?

ಕಳೆದ ಬಾರಿ ₹11 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಬಜೆಟ್‌ ಮಂಡಿಸಲಾಗಿತ್ತು. ಆದರೆ, ತೆರಿಗೆ ವಸೂಲಿ ಗುರಿ ಮುಟ್ಟಲು ಸಾಧ್ಯ ಆಗದಿರುವುದು ಸೇರಿ ಇನ್ನಿತರ ಕಾರಣಗಳಿಂದಾಗಿ 2023-24ನೇ ಸಾಲಿನ ಬಜೆಟ್‌ ಶೇಕಡ 100ರಷ್ಟು ಅನುಷ್ಠಾನ ಸಾಧ್ಯವಾಗಿಲ್ಲ. ಹೀಗಾಗಿ 2023-24ನೇ ಸಾಲಿನ ಬಜೆಟನ್ನು ಪರಿಷ್ಕರಿಸಲಾಗುತ್ತಿದೆ. ಹೀಗಾಗಿಯೇ 2024-25ನೇ ಸಾಲಿನ ಬಜೆಟ್‌ನ ಮೊತ್ತವನ್ನು ಕಡಿಮೆ ಮಾಡಲೂ ಬಿಬಿಎಂಪಿ ಹಣಕಾಸು ವಿಭಾಗದ ಅಧಿಕಾರಿಗಳು ಚರ್ಚೆ ನಡೆಸಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೂ ಈ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ. ಒಂದು ವೇಳೆ ಬಜೆಟ್‌ ಗಾತ್ರ ಕುಗ್ಗಿಸುವುದಕ್ಕೆ ನಿರ್ಧಾರವಾದರೆ ₹10 ಸಾವಿರ ಕೋಟಿಗೂ ಕಡಿಮೆ ಮೊತ್ತದ ಆಯವ್ಯಯ ಮಂಡಣೆಯಾಗಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''