ಕುಮಟಾ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಸುಸಜ್ಜಿತ ಮೆಡಿಕಲ್ ಕಾಲೇಜು ಹಾಗೂ ಉದ್ಯೋಗ ಸೃಷ್ಟಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಶಿರಸಿಯ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಸೋಮವಾರ ಪಟ್ಟಣದ ಮಹಾಸತಿ ಮಂದಿರದಿಂದ ಭಟ್ಕಳಕ್ಕೆ ಪಾದಯಾತ್ರೆ ಆರಂಭಗೊಂಡಿದೆ.ಮಾಸ್ತಿಕಟ್ಟೆಯ ಮಹಾಸತಿ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಆರಂಭಗೊಂಡ ಪಾದಯಾತ್ರೆ ಮುಂದಿನ ಮೂರು ದಿನದಲ್ಲಿ ಭಟ್ಕಳ ತಲುಪಿ, ಸಚಿವ ಮಂಕಾಳ ವೈದ್ಯರಿಗೆ ಮನವಿ ನೀಡಲಾಗುತ್ತಿದೆ.
ಈ ವೇಳೆ ಮಾತನಾಡಿದ ಅನಂತಮೂರ್ತಿ ಹೆಗಡೆ, ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆ ಇರುವುದರಿಂದ ಬಹುಕಾಲದ ಜನಾಗ್ರಹದ ಮೇರೆಗೆ, ಈ ಹಿಂದಿನ ಬಿಜೆಪಿ ಸರ್ಕಾರ ಸ್ಥಳವನ್ನು ಆಸ್ಪತ್ರೆಗಾಗಿ ಗುರುತಿಸಿತ್ತು. ಈಗಿನ ಸಿದ್ದರಾಮಯ್ಯ ಸರ್ಕಾರ ಕೂಡಲೇ ಹಣ ಮಂಜೂರು ಮಾಡಿ ಆಸ್ಪತ್ರೆ ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ಸಚಿವ ಮಂಕಾಳು ವೈದ್ಯ ಅವರ ಕಚೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ತಿಳಿಸಿದರು.ಜಿಲ್ಲೆಯಲ್ಲಿ ಘಟ್ಟದ ಮೇಲೆ ಮತ್ತು ಕೆಳಗೆ ಪ್ರತ್ಯೇಕವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ ನಿರ್ಮಾಣವಾಗಬೇಕು. ಜಿಲ್ಲೆಯಲ್ಲಿ ನ್ಯುರೋ ಸರ್ಜನ್ ಇಲ್ಲ, ನಾವೆಲ್ಲ ಅನ್ಯ ಜಿಲ್ಲೆ ಅವಲಂಬಿಸಬೇಕಾಗಿದೆ. ನಮ್ಮ ಜಿಲ್ಲೆಯನ್ನು ಯಾಕೆ ನಿರ್ಲಕ್ಷಿಸಲಾಗುತ್ತಿದೆ ಎಂದು ಪ್ರಶ್ನಿಸಿದರು. ಹಾಗೆಯೇ ಮಹಿಳೆಯರಿಗೆ ಉದ್ಯೋಗ ನೀಡುವಂಥ ಗಾರ್ಮೆಂಟ್ಸ್ ಫ್ಯಾಕ್ಟರಿ ಸ್ಥಾಪಿಸಬೇಕು. ಸರ್ಕಾರವೇ ವಿವಿಧ ಉದ್ದಿಮೆಗಳಿಗಾಗಿ ಜಾಗ ನೀಡುವ ಮೂಲಕ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು. ಹಿರೇಗುತ್ತಿ ಬಳಿ ೧೮೦೦ ಎಕರೆ ಜಾಗ ಸರ್ಕಾರದ ವಶದಲ್ಲಿದೆ. ಈ ಜಾಗದಲ್ಲಿಯೇ ೫೦೦ ಎಕರೆ ಸಾಫ್ಟ್‌ವೇರ್ ಪಾರ್ಕ್ ಮಾಡಬಹುದು, ೩೦೦ ಎಕರೆಯನ್ನು ಗಾರ್ಮೆಂಟ್ಸ್ ಹಬ್ ಮಾಡಬಹುದು. ಉಳಿದ ಜಾಗದಲ್ಲಿ ಮೆಕ್ಯಾನಿಕಲ್ ಇನ್ನಿತರ ಕಾರ್ಖಾನೆಗಳಿಗೆ ಅವಕಾಶ ಮಾಡಿಕೊಡಬಹುದು. ಜಿಲ್ಲೆಯಲ್ಲಿ ಸಾಕಷ್ಟು ಜಾಗವಿದ್ದು ಈ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿ ಎಂದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಾನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ನಿರಂತರ ಧ್ವನಿ ಎತ್ತಿದೇನೆ. ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಲೇಬೇಕು ಎಂದು ಹೇಳಿದರು.ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಅನಂತಮೂರ್ತಿ ಹೆಗಡೆ ಅವರು ಅತ್ಯುತ್ತಮ ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಇವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದರು. ವಕೀಲ ಆರ್.ಜಿ. ನಾಯ್ಕ ಮಾತನಾಡಿ, ಜಿಲ್ಲೆಯ ಶಾಸಕರೆಲ್ಲರೂ ಒಂದಾಗಿ ಈ ಬಗ್ಗೆ ಧ್ವನಿ ಎತ್ತಬೇಕು. ಶಾಸಕ ದಿನಕರ ಶೆಟ್ಟಿ ಅವರ ಜತೆಗೆ ಯುವ ಸಮುದಾಯ ಇದೆ ಎಂದರು. ಪಾದಯಾತ್ರೆಯಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಜನರೊಟ್ಟಿಗೆ ವಿ.ಐ. ಹೆಗಡೆ, ಮಹೇಶ ಗುನಗಾ, ವಿನಾಯಕ ಭಟ್, ಪಾಪು ಭಟ್, ಮಹೇಶ ಇದ್ದರು.