ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿರುವ ನಮ್ಮ ಕ್ಲಿನಿಕ್‌ಗಳಲ್ಲಿ ಶೀಘ್ರದಲ್ಲಿ ಕಣ್ಣಿನ ಪರೀಕ್ಷೆ ಮತ್ತು ಚಿಕಿತ್ಸೆ, ಮಕ್ಕಳಿಗೆ ಲಸಿಕೀಕರಣ, ನಾಯಿ ಕಡಿತಕ್ಕೆ ಚುಚ್ಚುಮದ್ದು ಸೇರಿದಂತೆ ಮೊದಲಾದ ಸೇವೆಗಳನ್ನು ಆರಂಭಿಸುವ ಮೂಲಕ ಮೇಲ್ದರ್ಜೆಗೇರಿಸಲು ಬಿಬಿಎಂಪಿ ಮುಂದಾಗಿದೆ.
ಕಳೆದ ಎರಡು ವರ್ಷದ ಹಿಂದೆ ನಗರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ದೆಹಲಿಯ ಮೊಹಲ್ಲಾ ಕ್ಲಿನಿಕ್ ಮಾದರಿಯಲ್ಲಿ ಆರಂಭಿಸಲಾದ ನಮ್ಮ ಕ್ಲಿನಿಕ್‌ಗಳನ್ನು ಇನ್ನಷ್ಟು ಜನಸ್ನೇಹಿಗೊಳಿಸುವುದಕ್ಕೆ ತಯಾರಿ ನಡೆಸಲಾಗಿದೆ.
ಸದ್ಯ ನಮ್ಮ ಕ್ಲಿನಿಕ್‌ಗಳಲ್ಲಿ 12 ವಿಧದ ಆರೋಗ್ಯ ಸೇವೆ ಹಾಗೂ 14ಕ್ಕೂ ಅಧಿಕ ರೋಗ ಪರೀಕ್ಷೆ ನಡೆಸಿ ಚಿಕಿತ್ಸೆ ಕೊಡುವ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ನವಜಾತ ಶಿಶುಗಳಿಗೆ ನಿಯಮಿತವಾಗಿ ನೀಡಲಾಗುವ ಲಸಿಕೆ ಹಾಕುವುದು. ನಾಯಿ ಕಡಿತಕ್ಕೆ ನೀಡಲಾಗುವ ಆ್ಯಂಟಿ ರೇಬಿಸ್ ಚುಚ್ಚುಮದ್ದು ಸೇರಿದಂತೆ ಮೊದಲಾದ ಸೇವೆಗಳನ್ನು ನೀಡುವುದಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್‌ನಲ್ಲಿರುವ ಮೂಲಸೌಕರ್ಯ ಹಾಗೂ ಉಪಕರಣಗಳ ಖರೀದಿಗೆ ಬಿಬಿಎಂಪಿ ಆರೋಗ್ಯ ವಿಭಾಗ ಮುಂದಾಗಿದೆ.
ಕಣ್ಣಿನ ಚಿಕಿತ್ಸೆ ಆರಂಭ:
ಈಗಾಗಲೇ ವಿಧಾನಸಭಾ ಕ್ಷೇತ್ರವಾರು ಒಂದೊಂದು ನಮ್ಮ ಕ್ಲಿನಿಕ್‌ಗಳಲ್ಲಿ ಡೆಂಟಲ್ ಕ್ಲಿನಿಕ್ ಆರಂಭಿಸುವುದಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಅಗತ್ಯವಿರುವ ಡೆಂಟಲ್ ಚೇರ್ ಖರೀದಿ ಮಾಡಲಾಗುತ್ತಿದೆ. ಅದರೊಂದಿಗೆ ಇದೀಗ ಕಣ್ಣಿನ ಪರೀಕ್ಷೆ ಮಾಡಿ ಚಿಕಿತ್ಸೆ ನೀಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯಕ್ಕೆ 54 ನಮ್ಮ ಕ್ಲಿನಿಕ್‌ಗಳಲ್ಲಿ ಮಾತ್ರ ಕಣ್ಣಿನ ಚಿಕಿತ್ಸೆ ಮತ್ತು ಪರೀಕ್ಷೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ. ಅದಕ್ಕೆ ಅಗತ್ಯವಿರುವ 54 ಹ್ಯಾಂಡ್ ರಿಫ್ಲೆಕ್ಟರ್ ಸ್ಕೋಪ್ ಖರೀದಿಸಲಾಗುತ್ತಿದೆ.
ಜತೆಗೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮಧುಮೇಹ ಸಮಸ್ಯೆ ಹೆಚ್ಚಾಗಿರುವುದರಿಂದ ತ್ವರಿತವಾಗಿ ರಕ್ತ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲು ಪ್ರತಿ ನಮ್ಮ ಕ್ಲಿನಿಕ್‌ಗೆ ಒಂದರಂತೆ 230 ಗ್ಲೂಕೋ ಮೀಟರ್ ಖರೀದಿ ಮಾಡಲಾಗುತ್ತಿದೆ.
ಫ್ರಿಜ್ ಖರೀದಿ:
ಆ್ಯಂಟಿ ರೇಬಿಸ್ ಚುಚ್ಚುಮದ್ದು, ಮಕ್ಕಳ ಲಸಿಕೆಗಳನ್ನು ಸಂಗ್ರಹಿಸುವುದಕ್ಕೆ ಹವಾನಿಯಂತ್ರಣ ವ್ಯವಸ್ಥೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 230 ನಮ್ಮ ಕ್ಲಿನಿಕ್‌ಗಳಿಗೆ ತಲಾ ಒಂದರಂತೆ ಡಬ್ಬಲ್ ಡೋರ್ ಇರುವ ಹಾಗೂ 330 ಲೀಟರ್ ಸಾಮರ್ಥ್ಯದ ಫ್ರಿಜ್ ಖರೀದಿ ಮಾಡಲಾಗುತ್ತಿದೆ. .
ಟೀವಿಗಳಲ್ಲಿ ಆರೋಗ್ಯ ಸೇವೆಯ ಮಾಹಿತಿ
100 ನಮ್ಮ ಕ್ಲಿನಿಕ್‌ಗಳಲ್ಲಿ ಬಿಬಿಎಂಪಿಯ ಆರೋಗ್ಯ ವಿಭಾಗದಿಂದ ನೀಡುವ ಮತ್ತು ನಮ್ಮ ಕ್ಲಿನಿಕ್‌ಗಳಲ್ಲಿ ನೀಡಲಾಗುವ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ನೀಡುವುದಕ್ಕೆ ಟೀವಿ ಅಳವಡಿಕೆ ಮಾಡುವುದಕ್ಕೆ ಮುಂದಾಗಿದೆ. ಜತೆಗೆ, ಆಗಮಿಸುವ ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕಾಗಿ ತಲಾ ಒಂದು ಆರ್‌ಒ ಪ್ಲಾಂಟ್ ಅಳವಡಿಕೆ ಮಾಡಲಾಗುತ್ತಿದೆ. ನಮ್ಮ ಕ್ಲಿನಿಕ್‌ನ ಆರೋಗ್ಯ ವ್ಯವಸ್ಥೆಯ ಮೇಲೆ ನಿಗಾ ವಹಿಸುವುದಕ್ಕೆ ಎಲ್ಲಾ ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ.
ಎನ್‌ಯುಎಚ್‌ಎಂ ಅನುದಾನ ಬಳಕೆ
ನಮ್ಮ ಕ್ಲಿನಿಕ್‌ನ ಮೇಲ್ದರ್ಜೆಗೆ ಏರಿಸುವುದಕ್ಕೆ ಹಲವು ಕ್ರಮ ಕೈಗೊಂಡಿರುವ ಬಿಬಿಎಂಪಿಯ ಅನುದಾನ ಬಳಕೆ ಮಾಡುತ್ತಿಲ್ಲ. ಬದಲಾಗಿ ರಾಷ್ಟ್ರೀಯ ನಗರ ಆರೋಗ್ಯ ಮಿಷನ್ ಯೋಜನೆಯಿಂದ ಬಂದಿರುವ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.