ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಬಿಬಿಎಂಪಿಯ ಎಡವಟ್ಟು : ಇ - ಖಾತಾ ಪಡೆಯಲು ಆಸ್ತಿ ಮಾಲೀಕರ ಹರಸಾಹಸ

KannadaprabhaNewsNetwork |  
Published : Feb 07, 2025, 02:02 AM ISTUpdated : Feb 07, 2025, 08:24 AM IST
ಬಿಬಿಎಂಪಿ | Kannada Prabha

ಸಾರಾಂಶ

ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಬಿಬಿಎಂಪಿ ಇ-ಖಾತಾ ವಿತರಣೆಗೆ ಮುಂದಾಗಿದ್ದು, ಬಹುತೇಕರ ಇ-ಖಾತಾ ಸಿಗುತ್ತಿಲ್ಲ. ಕೋರ್ಟ್‌ನಿಂದ ಆದೇಶ ಬಂದರೂ ಇ-ಖಾತಾ ಸಿಗಲು ಪರದಾಡುವಂತಾಗಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಆಸ್ತಿಯ ಖಾತಾಗಳನ್ನು ಸಂಪೂರ್ಣ ಪ್ರಮಾಣದಲ್ಲಿ ಡಿಜಿಟಲೀಕರಣ ಆಗದಿರುವುದರಿಂದ ಅಂತಿಮ ಇ-ಖಾತಾ ಸಿಗದೇ ಆಸ್ತಿ ಮಾಲೀಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ವಿಚಿತ್ರ ಎಂದರೆ, ಇ-ಖಾತಾಕ್ಕಾಗಿ ಕೋರ್ಟ್‌ಗೆ ನಾಗರಿಕರು ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಬಿಎಂಪಿಯು ಪೂರ್ಣ ಪ್ರಮಾಣದ ಸಿದ್ಧತೆ ಇಲ್ಲದೇ ಕಳೆದ ಅಕ್ಟೋಬರ್‌ನಲ್ಲಿ ಅಂತಿಮ ಇ-ಖಾತಾ ವಿತರಣೆ ಆರಂಭಿಸಿತ್ತು. ಈಗಾಗಲೇ ನಾಲ್ಕೈದು ತಿಂಗಳು ಕಳೆದರೂ ನಿರೀಕ್ಷಿತ ಮಟ್ಟದಲ್ಲಿ ಅಂತಿಮ ಇ-ಖಾತಾ ನೀಡುವುದಕ್ಕೆ ಸಾಧ್ಯವಾಗಿಲ್ಲ. ಆಸ್ತಿ ಮಾಲೀಕರು ಬಿಬಿಎಂಪಿಯ ಕಂದಾಯ ಅಧಿಕಾರಿಗಳಿಗೆ ಕಚೇರಿಗೆ ಅಲೆದಾಟ ಮಾತ್ರ ನಿಂತಿಲ್ಲ.

ನಗರದಲ್ಲಿ ಬರೋಬ್ಬರಿ 21 ಲಕ್ಷಕ್ಕೂ ಅಧಿಕ ಆಸ್ತಿಗಳು ಅಧಿಕೃತವಾಗಿ ನೋಂದಣಿಯಾಗಿವೆ. ಇದಲ್ಲದೇ ಐದಾರು ಲಕ್ಷ ಆಸ್ತಿಗಳು ಇವೆ. ಆದರೂ ಅಂತಿಮ ಇ-ಖಾತಾ ಪಡೆದಿರುವ ಪ್ರಮಾಣ ಶೇಕಡ 10ಕ್ಕಿಂತ ಕಡಿಮೆ ಇದೆ. ಬಿಬಿಎಂಪಿಯ ಅಧಿಕಾರಿಗಳು ಮಾತ್ರ ಎಲ್ಲಾ ಆಸ್ತಿಗಳ ಖಾತಾಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಜನರು ಅಂತಿಮ ಇ-ಖಾತಾ ಪಡೆಯುವುದಕ್ಕೆ ಮುಂದಾಗುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ, ವಾಸ್ತವಾಗಿ ಬಿಬಿಎಂಪಿಯು ಇ-ಖಾತಾ ವಿತರಣೆಗೆ ಸಿದ್ಧತೆ ಇಲ್ಲದೇ ಅನುಷ್ಠಾನಕ್ಕೆ ಮುಂದಾಗಿರುವುದಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಡಿಜಿಟಲೀಕರಣ ಸಮಸ್ಯೆ:ಕಳೆದ ಒಂದೂವರೆ ವರ್ಷದಲ್ಲಿ ನಗರದ ಬಹುತೇಕ ಎಲ್ಲಾ 20 ಲಕ್ಷ ಆಸ್ತಿಗಳ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ, ಡಿಜಿಟಲೀಕರಣ ಮಾಡಲಾಗಿದೆ. ಆಯಾ ಆಸ್ತಿ ಮಾಲೀಕರು ಆನ್‌ಲೈನ್‌ ಮೂಲಕ ಕರಡು ಇ-ಖಾತಾ ಡೌನ್‌ಲೋಡ್‌ ಮಾಡಿಕೊಂಡು ಪರಿಶೀಲನೆ ಮಾಡಬಹುದು ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವಾಗಿ ಇನ್ನೂ ಹಲವು ಆಸ್ತಿಗಳ ಖಾತಾಗಳನ್ನು ಸ್ಕ್ಯಾನ್‌ ಆಗಿಲ್ಲ. ದತ್ತಾಂಶ ಡಿಜಿಟಲೀಕರಣ ಆಗಿಲ್ಲ. ಹೀಗಾಗಿ, ಆಸ್ತಿ ಮಾಲೀಕರಿಗೆ ಕರಡು ಇ-ಖಾತಾ ಡೌನ್‌ಲೋಡ್‌ ಆಗುತ್ತಿಲ್ಲ. ಕರಡು ಇ-ಖಾತಾ ದೊರೆಯದ ಬಗ್ಗೆ ಆನ್‌ಲೈನ್‌ ಮೂಲಕವೇ ಆಸ್ತಿ ಹುಡುಕಿ ಕೊಡಲು ಅರ್ಜಿ ಪಡೆಯಲಾಗುತ್ತಿದೆ. ಅದಕ್ಕೆ 10 ದಿನ ಕಾಲಾವಕಾಶ ಪಡೆಯಲಾಗುತ್ತದೆ. ಆದರೆ, ನಿಗದಿತ ಅವಧಿಯಲ್ಲಿ ಕರಡು ಇ-ಖಾತಾ ನೀಡುವಲ್ಲಿ ಬಿಬಿಎಂಪಿ ವಿಫಲವಾಗುತ್ತಿದೆ. ನಗರದಲ್ಲಿ ಈವರೆಗೆ ಕೇವಲ 10.34 ಲಕ್ಷ ಆಸ್ತಿ ಮಾಲೀಕರು ತಮ್ಮ ಆಸ್ತಿಯ ಕರಡು ಇ-ಖಾತಾ ಪಡೆದುಕೊಂಡಿದ್ದಾರೆ.ಇ-ಖಾತಾಗೆ ಹಾಕಿದ ಅರ್ಜಿ ರದ್ದು!

ತ್ವರಿತವಾಗಿ ಆಸ್ತಿ ಮಾರಾಟ ಮಾಡಬೇಕಾದವರು, ವಿದೇಶಕ್ಕೆ ತರಳಬೇಕಾದವರು ನಿಗದಿತ ಅವಧಿಯ ಒಳಗೆ ಇ-ಖಾತಾ ದೊರೆಯದೇ ಕೋರ್ಟ್‌ಗೆ ಹೋಗಿ ಆದೇಶ ಪಡೆದು ಇ-ಖಾತಾ ಪಡೆಯಬೇಕಾದ ಪ್ರಸಂಗ ನಿರ್ಮಾಣಗೊಂಡಿವೆ.

ಜೆ.ಪಿ.ನಗರ ಸಹಾಯ ಕಂದಾಯ ಕಚೇರಿ ವ್ಯಾಪ್ತಿಯ ಬಿಡಿಎ ಆಸ್ತಿಗೆ ಇ-ಖಾತಾ ಪಡೆಯುವುದಕ್ಕೆ ಆಸ್ತಿ ಮಾಲೀಕರು ಕೋರ್ಟ್‌ಗೆ ಹೋಗಿ ಆದೇಶ ಪಡೆದುಕೊಂಡು ಬಂದರೂ ಇ-ಖಾತಾ ದೊರೆಯದೇ ಪರದಾಡುತ್ತಿದ್ದಾರೆ. ಕೋರ್ಟ್‌ ಆದೇಶ ಪಡೆದು ಅಂತಿಮ ಇ-ಖಾತಾಕ್ಕೆ ಅರ್ಜಿ ಸಲ್ಲಿಸಿದರೆ ಯಾವುದೇ ಸೂಚನೆ ಇಲ್ಲದೇ ಅರ್ಜಿ ರದ್ದಾಗುತ್ತಿದೆ. ನಾಲ್ಕು ಬಾರಿ ಅರ್ಜಿ ಸಲ್ಲಿಸಿದರೂ ಅಂತಿಮ ಇ-ಖಾತಾ ದೊರೆಯದೇ ಅಲೆದಾಡುತ್ತಿದ್ದಾರೆ. ಈ ರೀತಿ ಹಲವು ಪ್ರಕರಣಗಳು ಇವೆ.ಸ್ಕ್ಯಾನ್‌, ಡಿಜಿಟಲೀಕರಣ ಲೆಕ್ಕವೇ ಇಲ್ಲ

ಬಿಬಿಎಂಪಿಯು ಈವರೆಗೆ ಎಷ್ಟು ಖಾತಾಗಳನ್ನು ಸ್ಕ್ಯಾನ್‌ ಮಾಡಿದೆ? ಆ ಬಳಿಕ ಎಷ್ಟು ದತ್ತಾಂಶವನ್ನು ಡಿಜಿಟಲೀಕರಣ ಮಾಡಲಾಗಿದೆ ಎಂಬುದರ ಬಗ್ಗೆ ಕಂದಾಯ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ. ಕರಡು ಇ-ಖಾತಾ ಲಭ್ಯವಾಗದವರು ದೂರು ನೀಡಿದಾಗ ನಿಮ್ಮ ಖಾತಾ ಇರುವ ಪುಸಕ್ತ ಸ್ಕ್ಯಾನ್‌ ಹಾಗೂ ಡಿಜಿಟಲೀಕರಣ ಆಗಿಲ್ಲ. ಇದೀಗ ವಲಯ ಹಾಗೂ ಕಂದಾಯ ಉಪ ವಿಭಾಗದಿಂದ ಪ್ರಸ್ತಾವನೆ ಪಡೆದು ಸ್ಕ್ಯಾನ್‌ ಹಾಗೂ ಡಿಜಿಟಲೀಕರಣ ಮಾಡಲು ಅನುಮೋದನೆ ನೀಡಲಾಗುತ್ತಿದೆ ಎಂಬ ಸಬೂಬು ಹೇಳುತ್ತಿದ್ದಾರೆ.ಇ-ಖಾತಾ ಕುರಿತ ಅಂಕಿ ಅಂಶ (ಫೆ.1 ವರೆಗೆ)

*ಇ-ಖಾತಾಕ್ಕಾಗಿ ವೆಬ್‌ಸೈಟ್‌ಗೆ ಭೇಟಿದ ಸಂಖ್ಯೆ- 1.45 ಕೋಟಿ

* ಕರಡು ಇ-ಖಾತಾ ಡೌನ್ಲೋಡ್ ಸಂಖ್ಯೆ- 10.34 ಲಕ್ಷ

* ಅಂತಿಮ ಇ-ಖಾತಾಕ್ಕೆ ಅರ್ಜಿ ಸಂಖ್ಯೆ-1.46 ಲಕ್ಷ

* ಅಂತಿಮ ಇ-ಖಾತಾ ಡೌನ್ಲೋಡ್ ಸಂಖ್ಯೆ- 1.42 ಲಕ್ಷವಲಯವಾರು ಇ-ಖಾತಾ ವಿತರಣೆ ವಿವರ

ವಲಯಇ-ಖಾತಾ ವಿತರಣೆ ಸಂಖ್ಯೆ

ಬೊಮ್ಮನಹಳ್ಳಿ24,502

ದಾಸರಹಳ್ಳಿ8,177

ಪೂರ್ವ14,224

ಮಹದೇವಪುರ18,375

ಆರ್‌.ಆರ್‌.ನಗರ22,245

ದಕ್ಷಿಣ18,749

ಪಶ್ಚಿಮ14,143

ಯಲಹಂಕ21,589

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ