ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ರಾಜಧಾನಿ ಬೆಂಗಳೂರಿಗೆ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸುವ ಬಿಬಿಎಂಪಿ ಈ ಬಾರಿ ಆಸ್ತಿ ತೆರಿಗೆ ಸಂಗ್ರಹದ ಕೊರತೆ ಎದುರಿಸುತ್ತಿದ್ದು, ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿದರೆ ಅರ್ಧಕ್ಕಿಂತ ಕಡಿಮೆ ಸಂಗ್ರಹವಾಗಿದೆ.
ಬೆಂಗಳೂರಿನ ರಸ್ತೆ, ಪಾರ್ಕ್, ರಾಜಕಾಲುವೆ, ಘನತ್ಯಾಜ್ಯ ನಿರ್ವಹಣೆ, ಆರೋಗ್ಯ ಸೇವೆ ಸೇರಿದಂತೆ ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವ ಬಿಬಿಎಂಪಿಗೆ ಆಸ್ತಿ ತೆರಿಗೆಯೇ ಅತ್ಯಂತ ದೊಡ್ಡ ಆದಾಯದ ಮೂಲವಾಗಿದೆ. ಪ್ರತಿ ವರ್ಷ 3,500 ರಿಂದ 4 ಸಾವಿರ ಕೋಟಿ ರುಪಾಯಿವರೆಗೆ ಆಸ್ತಿ ತೆರಿಗೆ ಸಂಗ್ರಹಿಸುವ ಶಕ್ತಿಯನ್ನು ಪಾಲಿಕೆ ಹೊಂದಿದೆ. ಈ ಬಾರಿ ಆರ್ಥಿಕ ವರ್ಷದ ಆರಂಭದ ತಿಂಗಳಿನಲ್ಲಿಯೇ ಆಸ್ತಿ ತೆರಿಗೆ ವಸೂಲಿಯಲ್ಲಿ ಭಾರಿ ಇಳಿಕೆಯಾಗಿರುವುದು ಬಿಬಿಎಂಪಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ.
ಪ್ರತಿ ಬಾರಿ ಆರ್ಥಿಕ ವರ್ಷದ ಆರಂಭದ ತಿಂಗಳಾದ ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆ ಪಾವತಿಸುವ ಆಸ್ತಿ ಮಾಲೀಕರಿಗೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ. ರಿಯಾಯಿತಿಯ ಲಾಭ ಪಡೆಯುವ ಉದ್ದೇಶದಿಂದ ಆಸ್ತಿ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ಪಾವತಿ ಮಾಡುತ್ತಿದ್ದರು. ಇದರಿಂದ ಒಟ್ಟಾರೆ ಆಸ್ತಿ ತೆರಿಗೆ ಸಂಗ್ರಹ ಮೊತ್ತದ ಶೇ.40ರಿಂದ 45ರಷ್ಟು ಆಸ್ತಿ ತೆರಿಗೆಯು ಏಪ್ರಿಲ್ ಅವಧಿಯಲ್ಲಿಯೇ ಸಂಗ್ರಹವಾಗುತ್ತಿತ್ತು.
ಈ ಬಾರಿಯೂ ರಿಯಾಯಿತಿ ನೀಡಲಾಗಿದೆ. ಆದರೆ, ಹೆಚ್ಚಿನ ಸಂಖ್ಯೆಯ ಮಾಲೀಕರು ಆಸ್ತಿ ತೆರಿಗೆ ಪಾವತಿಗೆ ಮುಂದೆ ಬಂದಿಲ್ಲ. ಹೀಗಾಗಿ, ಏಪ್ರಿಲ್ ಅಂತ್ಯಕ್ಕೆ ಕೇವಲ ₹626 ಕೋಟಿ ಸಂಗ್ರಹವಾಗಿದೆ. ಕಳೆದ 2023-24ನೇ ಸಾಲಿನಲ್ಲಿ ಏಪ್ರಿಲ್ ಅಂತ್ಯಕ್ಕೆ ₹1,212 ಕೋಟಿ ಸಂಗ್ರಹವಾಗಿತ್ತು.
4 ತಿಂಗಳು ರಿಯಾಯಿತಿ ಎಫೆಕ್ಟ್?
ಹೆಚ್ಚಿನ ಪ್ರಮಾಣ ಆಸ್ತಿ ತೆರಿಗೆ ವಸೂಲಿ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಏಪ್ರಿಲ್‌ಗೆ ಸೀಮಿತವಾಗಿದ್ದ ಶೇ.5ರಷ್ಟು ರಿಯಾಯಿತಿಯನ್ನು ಈ ಬಾರಿ ಏಕಾಏಕಿ ಜುಲೈ ಅಂತ್ಯದವರೆಗೆ ನೀಡಿ ಆದೇಶಿಸಿದೆ. ರಿಯಾಯಿತಿ ಲಾಭ ಪಡೆಯುವುದಕ್ಕೆ ಆಸ್ತಿ ಮಾಲೀಕರಿಗೆ ಇನ್ನೂ ಮೂರು ತಿಂಗಳು ಅವಕಾಶ ಇದೆ. ಇದರಿಂದ ಆಸ್ತಿ ಮಾಲೀಕರು ತೆರಿಗೆ ಪಾವತಿ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದಾರೆ. ಹೀಗಾಗಿ ತೆರಿಗೆ ಸಂಗ್ರಹ ಪ್ರಮಾಣ ಕುಂಠಿತವಾಗಿದೆ ಎನ್ನಲಾಗಿದೆ.
ವಸೂಲಿಗೆ ಚುನಾವಣಾ ನೆಪ
ಇನ್ನು ಕಂದಾಯ ವಿಭಾಗದ ಅಧಿಕಾರಿಗಳು ಸಂಪೂರ್ಣವಾಗಿ ಕಳೆದ ಎರಡು ತಿಂಗಳಿನಿಂದ ಲೋಕಸಭಾ ಚುನಾವಣೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು. ಆಸ್ತಿ ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡುವುದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ, ಆಸ್ತಿ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಕುಸಿತ ಉಂಟಾಗಿದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಹೇಳುತ್ತಾರೆ.
ನಿರ್ವಹಣೆಗೂ ಸಂಕಷ್ಟಆಸ್ತಿ ತೆರಿಗೆ ಸಂಗ್ರಹ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಬಿಬಿಎಂಪಿಯು ನಿರ್ವಹಣೆ ಕೆಲಸ, ಅಧಿಕಾರಿ ಸಿಬ್ಬಂದಿಯ ವೇತನ ಪಾವತಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಹೀಗಾಗಿ, ಚುನಾವಣೆ ಮುಕ್ತಾಯಗೊಳ್ಳುತ್ತಿದಂತೆ ಕಂದಾಯ ಅಧಿಕಾರಿಗಳಿಗೆ ಆಸ್ತಿ ತೆರಿಗೆ ವಸೂಲಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಇದರಿಂದ ಕಳೆದ 8 ದಿನದಲ್ಲಿ ಸುಮಾರು ₹100 ಕೋಟಿಗೂ ಅಧಿಕ ಮೊತ್ತದ ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಿಯಾಯಿತಿ ಅವಧಿಯನ್ನು ಜುಲೈ ಅಂತ್ಯದವರೆಗೆ ನೀಡಲಾಗಿದೆ. ಹೀಗಾಗಿ, ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಜುಲೈ ಅಂತ್ಯದ ವೇಳೆಗೆ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರಮಾಣ ಆಸ್ತಿ ತೆರಿಗೆ ಸಂಗ್ರಹಿಸುತ್ತೇವೆ. ನಿರ್ವಹಣೆ ಕೆಲಸ, ಸಂಬಳಕ್ಕೆ ಯಾವುದೇ ತೊಂದರೆ ಇಲ್ಲ.
-ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ, ಬಿಬಿಎಂಪಿವಲಯವಾರು ಆಸ್ತಿ ತೆರಿಗೆ ಸಂಗ್ರಹ ವಿವರ (ಕೋಟಿ ₹)
ವಲಯ2023-242024-25
ಬೊಮ್ಮನಹಳ್ಳಿ 12268
ದಾಸರಹಳ್ಳಿ 3417
ಪೂರ್ವ 243124
ಮಹದೇವಪುರ 300147
ಆರ್‌ಆರ್‌ನಗರ 6942
ದಕ್ಷಿಣ 214111
ಪಶ್ಚಿಮ14072
ಯಲಹಂಕ 9045
ಒಟ್ಟು 1,212626(ಏಪ್ರಿಲ್ ಅಂತ್ಯಕ್ಕೆ)