ಬಿಬಿಎಂಪಿ ಕಸದ ವಿರುದ್ಧ ಮತ್ತೆ ಹೋರಾಟದ ಎಚ್ಚರಿಕೆ

KannadaprabhaNewsNetwork |  
Published : Jun 16, 2025, 01:57 AM IST
ದೊಡ್ಡಬಳ್ಳಾಪುರ ಡಾ.ಬಾಬುಜಗಜೀವನ್ ರಾಮ್ ಭವನದಲ್ಲಿ ನಡೆದ ಸಭೆಯಲ್ಲಿ ಶಾಸಕ ಧೀರಜ್ ಮುನಿರಾಜ್ ಮಾತನಾಡಿದರು. | Kannada Prabha

ಸಾರಾಂಶ

ಬಿಬಿಎಂಪಿ ವ್ಯಾಪ್ತಿ ಕಸ ವಿಲೇವಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ತಾಲೂಕಿನ ಜನರ ಆರೋಗ್ಯ, ಪರಿಸರ ರಕ್ಷಣೆಗೆ ಎಲ್ಲರು ಪಕ್ಷಾತೀತವಾಗಿ ಬೆಂಬಲಸಬೇಕು ಎಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ತಾಲೂಕಿನ ಚಿಗರೇನಹಳ್ಳಿಯಲ್ಲಿ ಬಿಬಿಎಂಪಿ ಕಸ ವಿಲೇವಾರಿ ವಿರುದ್ಧ ಸ್ಥಳೀಯರು ಮತ್ತೆ ಹೋರಾಟದ ಎಚ್ಚರಿಕೆ ನೀಡಿದ್ದು, ಹೋರಾಟ ಮರು ಆರಂಭ ಕುರಿತು ಇಲ್ಲಿನ ಬಾಬುಜಗಜೀವನ್ ರಾಮ್ ಭವನದಲ್ಲಿ ನಡೆದ ಗ್ರಾಮ ಪಂಚಾಯಿತಿ, ನಗರಸಭೆ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘಟನೆ ಮುಖಂಡರು ಹಾಗೂ ಸಾರ್ವಜನಿಕರ ಸಮಾಲೋಚನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಶಾಸಕ ಧೀರಜ್ ಮುನಿರಾಜ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿ ಕಸ ವಿಲೇವಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ತಾಲೂಕಿನ ಜನರ ಆರೋಗ್ಯ, ಪರಿಸರ ರಕ್ಷಣೆಗೆ ಎಲ್ಲರು ಪಕ್ಷಾತೀತವಾಗಿ ಬೆಂಬಲಸಬೇಕು ಎಂದು ಮನವಿ ಮಾಡಿದರು.

ಎರಡು ವರ್ಷಗಳಿಂದಲೂ ಬಿಬಿಎಂಪಿ ಕಸ ವಿಲೇವಾರಿ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ತಾಲೂಕಿನ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಅನುದಾನ ಪಡೆಯದೆ ಪ್ರತಿರೋಧ ವ್ಯಕ್ತಪಡಿಸಲಾಗಿದೆ. ನಮಗೆ ಬೇಕಿರುವುದು ಬಿಬಿಎಂಪಿ ಅನುದಾನ ಅಲ್ಲ, ಕಸ ಇಲ್ಲಿಗೆ ಬರುವುದು ನಿಲ್ಲಬೇಕು ಎಂದರು.

ಬಿಬಿಎಂಪಿ ಕಸ ಇಲ್ಲಿಗೆ ಬರುತ್ತಿರುವುದರಿಂದ ಅಂತರ್ಜಲ ಕಲುಶಿತವಾಗಿ ದೊಡ್ಡಬೆಳವಂಗಲ ಹಾಗೂ ಸಾಸಲು ಭಾಗದ ಹತ್ತಾರು ಗ್ರಾಮಗಳ ಜನರು ನಾನಾ ರೀತಿಯ ಚರ್ಮ ರೋಗ ಸೇರಿದಂತೆ ಹಲವಾರು ಆರೋಗ್ಯದ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಅಂತರ್ಜಲ ಬಳಕೆಯಿಂದ ಬೆಳೆಗಳು ಸಹ ಹಾಳಾಗುತ್ತಿವೆ. ಇದರ ವಿರುದ್ಧ ಈಗಾಗಲೇ ಹಲವಾರು ಜನ ರೈತರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಿದ್ದಾರೆ ಎಂದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಹ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕುರಿತು ವರದಿ ನೀಡಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತ ಹಾಗೂ ತಾಲೂಕು ಆಡಳಿತದ ಗಮನಕ್ಕೂ ತರದೆ ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ಕಸ ವಿಲೇವಾರಿ ಘಟಕ್ಕೆ ರಸ್ತೆ ನಿರ್ಮಿಸಿರುವ ಗುತ್ತಿಗೆದಾರನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಮಗೆ ಬಿಬಿಎಂಪಿ ಕಸವು ಬೇಡ, ಬಿಬಿಎಂಪಿ ಅನುದಾನವು ಬೇಡ ಎಂದು ಹೇಳಿದರು.

ಭಕ್ತರಹಳ್ಳಿ ಗ್ರಾಪಂ ಸದಸ್ಯ ಸಿದ್ದಲಿಂಗಯ್ಯ, ಬಿಬಿಎಂಪಿ ಕಸದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿದೆ. ಸ್ಥಳೀಯರ ಅಭಿಪ್ರಾಯ ಹಾಗೂ ಕಷ್ಟಕ್ಕೆ ಸರ್ಕಾರ ಕಿವಿಗೊಡದಿದ್ದರೆ ಈ ಭಾಗದ ಜನ ಗೂಳೆ ಹೋಗುವ ದಿನಗಳು ದೂರ ಉಳಿದಿಲ್ಲ ಎಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್, ಸದಸ್ಯ ಎಂ.ಜಿ.ಶ್ರೀನಿವಾಸ್, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ನಾಗೇಶ್, ಮುಖಂಡರಾದ ಕೆ.ಎಂ.ಹನುಮಂತರಾಯಪ್ಪ, ತಿ.ರಂಗರಾಜು, ವತ್ಸಲಾ ಮತ್ತಿತರರಿದ್ದರು.

ಬಾಕ್ಸ್‌;;ಸಿಮೆಂಟ್ ಕಾರ್ಖಾನೆಗೆ ಅನುಮತಿ ಬೇಡ:

ಕೇಂದ್ರ ಸರ್ಕಾರ ಈಗಾಗಲೇ ಬೆಂಗಳೂರಿನ ಹೊರವರ್ತುಲ ರೈಲು ಯೋಜನೆ ರೂಪಿಸಿದೆ. ಈ ಯೋಜನೆಯಲ್ಲಿ ತಾಲೂಕಿನ ವಡ್ಡರಹಳ್ಳಿ ಗ್ರಾಮದ ರೈಲು ನಿಲ್ದಾಣವು ಪ್ರಮುಖವಾಗಿದೆ. ಆದರೆ ಇದೇ ರೈಲು ನಿಲ್ದಾಣದ ಸಮೀಪ ಖಾಸಗಿ ಕಂಪನಿಯೊಂದು ಸಿಮೆಂಟ್ ತಯಾರಿಕಾ ಕಾರ್ಖಾನೆ ನಿರ್ಮಿಸಲು ಮುಂದಾಗಿದೆ. ಇದಕ್ಕೆ ಸ್ಥಳೀಯ ಕಂಟನಕುಂಟೆ ಗ್ರಾಮ ಪಂಚಾಯಿತಿ ಅನುಮತಿ ನೀಡಬಾರದು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

ಈ ಬಗ್ಗೆ ದೊಡ್ಡಬಳ್ಳಾಪುರ ಯೋಜನ ಪ್ರಾಧಿಕಾರಕ್ಕೂ ಪತ್ರ ಬರೆಯಲಾಗಿದೆ. ಸಿಮೆಂಟ್ ಕಾರ್ಖಾನೆ ಇಲ್ಲಿ ಸ್ಥಾಪನೆಯಾದರೆ. ಇದರ ಧೂಳಿನಿಂದ ಗ್ರಾಮಗಳ ಜನರ ಆರೋಗ್ಯ ಹಾಳಾಗಲಿದೆ. ರೈತರ ಬೆಳೆಗಳಿಗೂ ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಫೋಟೋ-15ಕೆಡಿಬಿಪಿ2- ದೊಡ್ಡಬಳ್ಳಾಪುರ ಡಾ.ಬಾಬು ಜಗಜೀವನ್ ರಾಮ್ ಭವನದಲ್ಲಿ ನಡೆದ ಸಭೆಯಲ್ಲಿ ಶಾಸಕ ಧೀರಜ್ ಮುನಿರಾಜ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!