ಸಂತೋಷ ದೈವಜ್ಞ
ಪ್ರಸಕ್ತ ಸಾಲಿನಲ್ಲಿ ಈವರೆಗೂ ಕೃಷಿಗೆ ಪೂರಕ ಉತ್ತಮ ಮಳೆಯಾಗುತ್ತಿದೆ. ಈ ಬಾರಿ ಅಡ್ಡಿ ಮಳೆ ಕೃಷಿ ಚಟುವಟಿಕೆಗೆ ಇಂಬು ನೀಡಿದೆ. ಮುಂಗಾರು ಮಳೆ ಹಿಡಿದ ಬಳಿಕ ಕೃಷಿ ಕಾರ್ಯ ಕಷ್ಟ ಎಂಬ ಕಾರಣಕ್ಕೆ ರೈತರು ತರಾತುರಿಯಲ್ಲಿ ಭೂಮಿ ಹದಗೊಳಿಸಿ ಬಿತ್ತನೆ ಕಾರ್ಯ ಮುಗಿಸಿದ್ದಾರೆ. ಈ ನಡುವೆ ಕೃಷಿ ಇಲಾಖೆಯಿಂದ ಸಹಾಧನದಲ್ಲಿ ಬಿತ್ತನೆ ಬೀಜ ವಿತರಿಸಲಾಗಿದೆ. ಇನ್ನು ಕೆಲವೇ ಕೆಲವು ಪ್ರದೇಶದಲ್ಲಿ ಬಿತ್ತನೆ ಕಾರ್ಯ ಬಾಕಿ ಇದ್ದು, ವಾತಾವರಣ ನೋಡಿಕೊಂಡು ರೈತರು ಬಿತ್ತನೆ ಮಾಡುತ್ತಿದ್ದಾರೆ.
ನಿರೀಕ್ಷೆಯಂತೆ ಮೇ ಅಂತ್ಯದವರೆಗೂ ಗುಡುಗು ಸಹಿತ ಅಡ್ಡ ಮಳೆ ಉತ್ತಮ ಹದ ನೀಡಿದೆ. ಜೂನ್ ಮೊದಲ ವಾರದಲ್ಲಿ ಮಳೆ ವಿರಾಮ ನೀಡಿದ್ದು, ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಬತ್ತ, ಗೋವಿನಜೋಳ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. ಮೊದಲು ಬಿತ್ತನೆ ಮಾಡಿದ ಪ್ರದೇಶದಲ್ಲಿ ಈಗಾಗಲೇ ಸಸಿಗಳು ಬೆಳೆದು ನಿಂತಿದ್ದು, ಅಗತ್ಯ ಕೃಷಿ ಚಟುವಟಿಕೆ ಕೈಗೊಳ್ಳಲಾಗಿದೆ.ಶೇ.೬೦ ಬಿತ್ತನೆ:
ಕೃಷಿ ಇಲಾಖೆಯ ಪ್ರಕಾರ ೪೫೦೦ ಹೆಕ್ಟೇರ್ ಗೋವಿನ ಜೋಳ, ೫೫೦೦ ಹೆಕ್ಟೇರ್ ಭತ್ತ, ೧೪೦೦ ಹೆಕ್ಟೇರ್ ಕಬ್ಬು ಹಾಗೂ ಇತರ ಬೆಳೆ ಸೇರಿದಂತೆ ೧೧,೭೦೦ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದೆ. ಅದರಲ್ಲಿ ಈವರೆಗೆ ಶೇ.೭೦ ಗೋವಿನಜೋಳ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಶೇ.೫೦ ಭತ್ತ ಬಿತ್ತನೆಯಾಗಿದೆ.
ಮಳೆಯ ಪ್ರಮಾಣ ಹೆಚ್ಚು:ಪ್ರಸಕ್ತ ಸಾಲಿನಲ್ಲಿ ಜ.೧ರಿಂದ ಜೂ.೧೪ರ ವರೆಗೆ ೩೩೫.೩ ಮಿ.ಮೀ. ಮಳೆಯಾಗಿದ್ದು, ವಾಡಿಕೆಯಂತೆ ೨೭೦.೯ ಮಿ.ಮೀ. ಮಳೆಯಾಗಬೇಕಿತ್ತು. ಆದರೆ ವಾಡಿಕೆಗಿಂತ ಶೇ.೨೪ರಷ್ಟು ಮಳೆ ಹೆಚ್ಚಾದಂತಾಗಿದೆ. ಕಳೆದ ವರ್ಷ ಈ ವೇಳೆಗೆ ೨೮೨ ಮಿ.ಮೀ. ಮಳೆಯಾಗಿತ್ತು.
ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಕೃಷಿಗೆ ಅನುಕೂಲವಾಗಿದೆ. ಗೋವಿನಜೋಳ ಹಾಗೂ ಭತ್ತದ ಬೆಳೆ ಬಿತ್ತನೆಗೆ ಪೂರಕ ವಾತಾವರಣವಿದೆ. ಉಳಿದ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕೂಡ ಪ್ರಗತಿಯಲ್ಲಿದೆ. ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಿಸಲಾಗಿದೆ. ಬಿತ್ತನೆ ಬೀಜ ಹಾಗೂ ಔಷಧಗಳ ಯಾವುದೇ ಕೊರತೆ ಇಲ್ಲ ಎನ್ನುತ್ತಾರೆ ಮುಂಡಗೋಡ ಸಹಾಯಕ ಕೃಷಿ ನಿರ್ದೇಶಕ ಕೆ.ಎನ್. ಮಹಾರೆಡ್ಡಿ.ಒಣ ಬಿತ್ತನೆ ಮಾಡಿಕೊಂಡ ಕೆಲವು ರೈತರನ್ನು ಹೊರತುಪಡಿಸಿ ಮಳೆ ಪೂರ್ವ ಬಿತ್ತನೆ ಮಾಡಿಕೊಂಡ ರೈತರ ಬೆಳೆಗೆ ಪೂರಕ ವಾತಾವರಣವಿದೆ. ಈ ಬಾರಿ ಹೆಚ್ಚು ಮಳೆಯಾಗುತ್ತಿರುವುದರಿಂದ ಮೊದಲಿನಂತೆಯೇ ಹೆಚ್ಚು ಭತ್ತ ಬಿತ್ತನೆ ಮಾಡಲಾಗುತ್ತಿದೆ ಎನ್ನುತ್ತಾರೆ ಪ್ರಗತಿಪರ ರೈತ ಸಂಗಮೇಶ ಬಿದರಿ.