ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಜೀಪು ಚಾಲಕ ಗೋಪಾಲ (51) ಸಂಶಯಾಸ್ಪದ ಸಾವಿನ ಬಗ್ಗೆ ಪತ್ನಿ ಚೈತ್ರಾ ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಹಿನ್ನೆಲೆ ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ, ವಾಚರ್‌ಗಳ ಸಹಿತ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ ರಾಜ್ಯ ಅರಣ್ಯ ಇಲಾಖೆಯ ಮತ್ತು ವನ್ಯಜೀವಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಸಂಕೇತ್ ಪೂವಯ್ಯ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಅವರ ಜೊತೆ ಹೋರಾಟ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.ನಾಗರಹೊಳೆ ಕಲ್ಲಹಳ್ಳ ವಿಭಾಗದಲ್ಲಿ ಕಳೆದ 25 ವರ್ಷಗಳಿಂದ ಅರಣ್ಯ ಇಲಾಖೆಯ ಹೊರಗುಗುತ್ತಿಗೆದಾರನಾಗಿ ಜೀಪು ಚಾಲಕನಾಗಿದ್ದ ಗೋಪಾಲ್, ಇಲಾಖೆಯ ಜೀಪು ಅಪಘಾತವಾಗಿ ಮೇ 22ರಂದು ಅರಣ್ಯ ಇಲಾಖೆಯಿಂದ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದರೂ ಕುಟುಂಬದವರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಮಾಹಿತಿ ನೀಡಲಿಲ್ಲ. ಆ ದಿನ ತಡ ರಾತ್ರಿಯಷ್ಟೇ ಮಾಹಿತಿ ನೀಡಿದ್ದರು. ಆದರೆ ಅರಣ್ಯದೊಳಗೆ ಇರುವ ಅವರ ಕುಟುಂಬದವರಿಗೆ ಆಸ್ಪತ್ರೆಗೆ ತೆರಳಲು ಸಾಧ್ಯವಾಗಿರಲಿಲ್ಲ.
ಆದರೆ ಅಪಘಾತವಾಗಿರುವ ವಿಚಾರವನ್ನು ವಲಯ ಅರಣ್ಯ ಅಧಿಕಾರಿ ಸೇರಿದಂತೆ ಉಪ ವಲಯ ಅರಣ್ಯ ಅಧಿಕಾರಿ ವಾಚರ್‌ಗಳು ಹಾಗೂ ಗುತ್ತಿಗೆದಾರರು ಕುಟುಂಬದವರಿಗೆ ಹೇಳದೆ ಮರೆಮಾಚಿದ್ದಾರೆ ಎಂದು ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ
ಜೀಪು ಅವಘಡವಾಗಿ ತೀವ್ರ ಗಾಯಗೊಂಡಿದ್ದರೂ, ಪೊಲೀಸ್ ದೂರು ನೀಡದೇ ಇರುವುದು, ಕುಟುಂಬದವರಿಗೆ ಕೂಡಲೇ ಮಾಹಿತಿ ಯನ್ನು ಅರಣ್ಯ ಇಲಾಖೆಯವರು ನೀಡದೇ ಇರುವುದು, ಗೋಪಾಲ್ ಮೃತಪಟ್ಟ ನಂತರ ಮರಣೋತ್ತರ ಪರೀಕ್ಷೆ ನಡೆಸದೆ ಅರಣ್ಯ ಇಲಾಖೆಯಿಂದ ಅಂತ್ಯಕ್ರಿಯೆ ಮಾಡಿರುವುದು ಸಹಿತ ಎಲ್ಲ ಬೆಳವಣಿಗೆಗಳೂ ದೊಡ್ಡ ಅಪರಾಧವಾಗಿದೆ ಎಂದಿರುವ ಸಂಕೇತ್ ಪೂವಯ್ಯ, ಇದರಲ್ಲಿ ಶಾಮಿಲಾಗಿರುವವರ ಇತರ ಅಧಿಕಾರಿಗಳ ಮೇಲೆಯೂ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.ಮೃತ ಗೋಪಾಲ್ ಅವರಿಗೆ ಪತ್ನಿ, ಮೂವರು ಪುತ್ರಿಯರಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶವ್ಯಕ್ತಪಡಿಸಿದ್ದಾರೆ.