ಬಿ.ಸಿ.ರೋಡ್‌: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

KannadaprabhaNewsNetwork | Published : Mar 19, 2025 12:31 AM

ಸಾರಾಂಶ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿ.ಪಂ., ತಾ.ಪಂ., ಭಾರತಾಂಬೆ ಸಂಜೀವಿನಿ ತಾಲೂಕು ಮಟ್ಟದ ಮಹಿಳಾ ಒಕ್ಕೂಟ ಸಹಯೋಗದಲ್ಲಿ ಬಿ.ಸಿ.ರೋಡಿನ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನೆರವೇರಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಜೀವನ ಮೌಲ್ಯ ಪ್ರತಿಪಾದಿಸುವ ಕಾರ್ಯಕ್ರಮಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗುತ್ತಿರುವುದು ಸಂತಸದ ಸಂಗತಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ್ ಹೇಳಿದ್ದಾರೆ.

ಮಂಗಳವಾರ ಬಿ.ಸಿ.ರೋಡಿನ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸ್ವಸಹಾಯ ಸಂಘಗಳಿಗೆ ಬ್ಯಾಂಕ್ ಸಾಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಜಿ.ಪಂ., ತಾ.ಪಂ., ಭಾರತಾಂಬೆ ಸಂಜೀವಿನಿ ತಾಲೂಕು ಮಟ್ಟದ ಮಹಿಳಾ ಒಕ್ಕೂಟ ಸಹಯೋಗದಲ್ಲಿ ಸಮಾರಂಭ ನೆರವೇರಿತು.

ಪ್ರತಿಯೊಂದು ವಿಚಾರದಲ್ಲಿ ಸಮಾಜ ಸಾಕಷ್ಟು ಮುಂದುವರಿದರೂ ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ ಎಂಬುದು ಮಾಧ್ಯಮಗಳ ವರದಿಗಳು ತಿಳಿಸುತ್ತವೆ. ಇದು ಅತ್ಯಂತ ಬೇಸರ ತರುವಂತಹ ‌ವಿಚಾರವಾಗಿದ್ದು, ಸಂಸ್ಕಾರದ ಕೊರತೆಯೇ ಕಾರಣವಾಗಿದೆ ಎಂದ ಅವರು, ರೋಗಗಳು ಬಾರದಂತೆ ಲಸಿಕೆಗಳನ್ನು ತೆಗೆದುಕೊಳ್ಳುವ ನಾವು ಸಂಸ್ಕಾರ ಎಂಬ ಲಸಿಕೆ ಹಾಕಿಸಿಕೊಳ್ಳದೆ ಉತ್ತಮ ವ್ಯಕ್ತಿತ್ವದಿಂದ ವಿಮುಖರಾಗುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.

ಶೈಕ್ಷಣಿಕವಾಗಿ, ಸಾಮಾಜಿಕ ಮತ್ತು ಅರ್ಥಿಕ ಸಮಾನತೆ ಕೊಡಲು ಸಾಧ್ಯವಾದರೆ ದೇಶದ ಆರ್ಥಿಕ ವ್ಯವಸ್ಥೆಯ ಜಿಡಿಪಿಯಲ್ಲಿ ಏರಿಕೆ ಕಾಣಲು ಸಾಧ್ಯವಾಗುತ್ತದೆ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, 27 ಗ್ರಾಪಂಗಳ ಸ್ವಚ್ಛವಾಹಿನಿಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದಾರೆ. ಸಂಜೀವಿನಿಯ 1432 ಸ್ವಸಹಾಯ ಸಂಘಗಳು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, 14973 ಸದಸ್ಯರು ಇದರಲ್ಲಿದ್ದಾರೆ. ಇದುವರೆಗೆ 14.64 ಕೋಟಿ ಬ್ಯಾಂಕ್ ಸಾಲ ವಿತರಿಸಲಾಗಿದೆ ಎಂದರು.

ಸಂಪನ್ಮೂಲ‌ ವ್ಯಕ್ತಿ ಕಸ್ತೂರಿ‌ ಬೊಳುವಾರು ಮಾತನಾಡಿ, ಆರ್ಥಿಕ‌ ಸಬಲೀಕರಣ ಎನ್ನುವುದು ಮಹಿಳಾ ಶೋಷಣೆಯ ಇನ್ನೊಂದು ಮುಖ ಆಗಬಾರದು, ಈ ಜಾಗೃತಿಯೂ ಎಲ್ಲರಲ್ಲಿಯೂ ಇರಲಿ ಎಂದರು. ಭಾರತಾಂಬೆ ಸಂಜೀವಿನಿ‌ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಆಕರ್ಷಿಣಿ ಅಧ್ಯಕ್ಷತೆ ವಹಿಸಿದ್ದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಸಂಜೀವಿನಿ ಸಂತೆ ಉದ್ಘಾಟಿಸಿದರು. ಜಿ.ಪಂ.ಯೋಜನಾ ನಿರ್ದೇಶಕ ಜಯರಾಮ್ ಕೆ., ಬೂಡಾ ಅಧ್ಯಕ್ಷ ಬೇಬಿ ಕುಂದರ್, ಸಿಡಿಪಿಒ ಮಮ್ತಾಜ್, ಬ್ಯಾಂಕ್ ಪ್ರಾಂತೀಯ ಅಧಿಕಾರಿ ದಿನೇಶ್. ಸಂಜೀವಿನೀ ಜಿಲ್ಲಾ ಕಾರ್ಯಕ್ರಮ‌ ವ್ಯವಸ್ಥಾಪಕ ಹರಿಪ್ರಸಾದ್, ಸಮಾಜ‌ ಕಲ್ಯಾಣ‌ ಅಧಿಕಾರಿ ಜಯಶ್ರೀ, ತಾ.ಪಂ.ಸಹಾಯಕ ನಿರ್ದೇಶಕ ವಿಶ್ವನಾಥ್‌ ಬೈಲಮೂಲೆ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಸುಧಾ, ತಾಲೂಕು ವ್ಯವಸ್ಥಾಪಕರಾದ ಪ್ರದೀಪ್‌ ಕಾಮತ್‌, ಸಾಂಘವಿ, ತಾಲೂಕು ಒಕ್ಕೂಟದ ಕಾರ್ಯದರ್ಶಿ ಯಶವಂತಿ, ವಲಯ ಮೇಲ್ವಿಚಾರಕ ಕುಶಾಲಪ್ಪ ಗೌಡ, ನರೇಗಾ ಐಇಸಿ ಸಂಯೋಜಕ ರಾಜೇಶ್ ಇದ್ದರು.

ಸೌಮ್ಯಾ ಭಂಡಾರಿಬೆಟ್ಟು ಸ್ವಾಗತಿಸಿದರು. ಕಡೇಶ್ವಾಲ್ಯ ಎಂಬಿಕೆ‌ ಮಮತಾ ವಂದಿಸಿದರು. ವಲಯ ಮೇಲ್ವಿಚಾರಕ ದೀಕ್ಷಿತಾ, ಕುಸುಮಾ ಕಾರ್ಯಕ್ರಮ‌ ನಿರ್ವಹಿಸಿದರು.

ತಾಲೂಕು ಮಟ್ಟದ ಸಂಜೀವಿನಿ ಸಂತೆ, ಪ್ರಧಾನಮಂತ್ರಿ ವನಧನ ವಿಕಾಸ ಕೇಂದ್ರದ ಉತ್ಪನ್ನಗಳ ಅನಾವರಣ ಮತ್ತು ಮಾಹಿತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನರೇಗಾ 2025-26 ನೇ ಸಾಲಿನ ಕ್ರಿಯಾಯೋಜನೆಗೆ ಅತಿ ಹೆಚ್ಚು ಬೇಡಿಕೆ ಸಂಗ್ರಹಿಸಿ ನೀಡಿದ ಒಕ್ಕೂಟದ ಪಶು ಸಖಿ ಮತ್ತು ಕೃಷಿ ಸಖಿಗಳಲ್ಲಿ ತಲಾ ಮೂವರಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಲಾಯಿತು. 2024-25ನೇ ಸಾಲಿನಲ್ಲಿ 200ಕ್ಕಿಂತ ಹೆಚ್ಚು ಇಂಗುಗುಂಡಿ ನಿರ್ಮಿಸಿದ ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಚಿಗುರು ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಗೌರವ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

Share this article