ಮುಲ್ಲಾಮರಿ- ಚಂದ್ರಂಪಳ್ಳಿ ತೀರದಲ್ಲೂ ನೀರಿಗೆ ಹಾಹಾಕಾರ..!

KannadaprabhaNewsNetwork | Published : Mar 19, 2025 12:31 AM

ಸಾರಾಂಶ

ಚಿಂಚೋಳಿಯ ಅನೇಕ ತಾಂಡಾಗಳಲ್ಲಿ ನೀರಿನ ಸಮಸ್ಯೆ ಕೇಳುವವರೇ ಇಲ್ಲ. ಕುಡಿಯುವ ನೀರಿನ ಸಮಸ್ಯೆಗೆ ಗ್ರಾಪಂ ಪಿಡಿಒ ಹಾಗೂ ಕಾರ್ಯದರ್ಶಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಡಿ. ಶ್ಯಾಮರಾವ

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನಲ್ಲಿ ಮಾರ್ಚ್‌ ತಿಂಗಳ ಮೊದಲ ವಾರದಿಂದಲೇ ಬಿರು ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದಂತೆ ಅನೇಕ ಗ್ರಾಮ ಮತ್ತು ತಾಂಡಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಆದರೆ ತಾಲೂಕಿನ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಗೆ ಬಗೆಹರಿಸಲು ಟಾಸ್ಕ್‌ಫೋರ್ಸ್‌ ಸಮಿತಿ ಇನ್ನು ರಚನೆ ಮಾಡಿಲ್ಲ ಹಾಗೂ ಶಾಸಕರು ಅಧಿಕಾರಿಗಳ ಸಭೆಯನ್ನು ಕಳೆದ ಎಂಟು ತಿಂಗಳಿಂದ ನಡೆಸಿಲ್ಲ. ಹೀಗಾಗಿ ಗ್ರಾಮಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಗಳ ಕೇಳುವವರೇ ಇಲ್ಲದಂತಾಗಿದೆ.

ತಾಲೂಕಿನ ರುಸ್ತಂಪೂರ, ಎಲ್ಮಾಡಗಿ ತಾಂಡಾ, ಚಿಂದಾನೂರ, ಮೋನುನಾಯಕ, ಸಲಗರ ಕಾಲೋನಿ, ಜಂಗ್ಲಿಪೀರ ತಾಂಡಾ, ಬೆಡಕಪಳ್ಳಿ, ಪಟಪಳ್ಳಿ, ಗೊಣಗಿ, ಸುಂಠಾಣ, ಹುಲಸಗೂಡ, ಧರ್ಮಸಾಗರ, ಲಿಂಗಾನಗರ, ಪೋಚಾವರಂ, ಅಂತಾವರಂ, ಕಿಷ್ಟಾಪೂರ, ಬೈರಂಪಳ್ಳಿ, ಚಿಕ್ಕನಿಂಗದಳ್ಳಿ ಗ್ರಾಮಗಳಲ್ಲಿ ಗ್ರಾಮಸ್ಥರು ನೀರಿನ ಸಮಸ್ಯೆ ಸಎದುರಿಸಬೇಕಾಗಿದೆ.

ಜೆ.ಜೆ.ಎಮ್‌ ಯೋಜನೆ ಅಡಿಯಲ್ಲಿ ಕೈಕೊಂಡಿರುವ ಪೈಪ್‌ಲೈನ್‌ ಕಾಮಗಾರಿಗಳು ಅಪೂರ್ಣವಾಗಿ ಇರುವುದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಕಳೆದ ಒಂದು ತಿಂಗಳಿಂದ ನಡೆಯುತ್ತಿದೆ. ಕುಡಿಯುವ ನೀರಿನ ಸಮಸ್ಯೆಗೆ ಗ್ರಾಪಂ ಪಿಡಿಒ ಹಾಗೂ ಕಾರ್ಯದರ್ಶಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲವೆಂದು ಗ್ರಾಮಸ್ಥರು ದೂರುತ್ತಿದ್ದಾರೆ.

ತಾಲೂಕಿನ ಕುಂಚಾವರಂ, ಐನಾಪೂರ, ಸುಲೇಪೇಟ, ಚಂದನಕೇರಾ, ಚಿಮ್ಮನಚೋಡ, ಕೋಡ್ಲಿ, ರಟಕಲ್, ಗಡಿಕೇಶ್ವರ, ನಿಡಗುಂದಾ, ಐನೋಳಿ ವಲಯಗಳ ವ್ಯಾಪ್ತಿಯಲ್ಲಿ ಬರುವ ಮೋಟಿಮೊಕ, ಸಾಸರಗಾಂವ, ರಾಣಾಪೂರ, ನಾಗರಾಳ, ಯಲ್ಮಡಗಿ, ಚೆನ್ನೂರ ತಾಂಡಾ, ಅಣದುನಾಯಕ ತಾಂಡಾ, ಧರ್ಮು ನಾಯಕ, ಸೇರಿಭಿಕನಳ್ಳಿ, ತೇಗಲತಿಪ್ಪಿ ಗ್ರಾಮಗಳಲ್ಲಿ ಬೋರ್‌ವೆಲ್‍ಗಳಲ್ಲಿ ಅಂತರ್ಜಲ ಕಡಿಮೆ ಆಗುತ್ತಿರುವುದರಿಂದ ಜನರು ಕುಡಿಯುವ ನೀರಿಗಾಗಿ ಪರದಾಡಬೇಕಾಗಿದೆ.

ತಾಲೂಕಿನಲ್ಲಿ ಈಗಾಗಲೇ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರ ತೊಡಗಿದೆ. ಗ್ರಾಮಗಳಲ್ಲಿ ಹಾಗೂ ತಾಂಡಾಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದರೆ, ಗ್ರಾಮಸ್ಥರಿಗೆ ಕುಡಿಯುವ ನೀರಿಗಾಗಿ ಟ್ಯಾಂಕರ್‌ ಇಲ್ಲವೇ ಪೈಪ್‌ಲೈನ್‌ ದುರಸ್ತಿಗೋಳಿಸಲು ಇದುವರೆಗೆ ಟಾಸ್ಕ್‌ಫೋರ್ಸ್‌ ಸಭೆ ನಡೆಸಿಲ್ಲ. ಸರ್ಕಾರಕ್ಕೆ ಯಾವುದೇ ವರದಿ ಸಲ್ಲಿಸಿಲ್ಲ ಎಂದು ಜೆಡಿಎಸ್ ಮುಖಂಡ ರವಿಶಂಕರ ಮುತ್ತಂಗಿ ದೂರಿದ್ದಾರೆ.

ತಾಲೂಕಿನಲ್ಲಿ ಜೆಜೆಎಂ ಯೋಜನೆ ಅನೇಕ ಗ್ರಾಮಗಳಲ್ಲಿ ಕಳೆದ ಮೂರು ವರ್ಷಗಳಿಂದ ಪೂರ್ಣಗೊಂಡಿಲ್ಲ. ಅರ್ಧಕ್ಕೆ ನಿಂತು ಹೋಗಿವೆ. ಜನರ ಮನೆ ಬಾಗಿಲಿಗೆ ಕುಡಿಯುವ ನೀರು ಮರೀಚಿಕೆ ಆಗಿದೆ ಎಂದು ಸಮಾಜ ಸೇವಕ ಹಣಮಂತ ಪೂಜಾರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಂಚೋಳಿ ತಾಲೂಕಿನಲ್ಲಿ ಕಳೆದ ಫೆಬ್ರುವರಿ ತಿಂಗಳಲ್ಲಿಯೇ ಅನೇಕ ಗ್ರಾಮಗಳಲ್ಲಿ ಕಾಣಿಸಿಕೊಂಡಿದೆ. ಆದರೆ ತಾಲೂಕು ಆಡಳಿತ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಮುಲ್ಲಾಮಾರಿ ನದಿ ದಂಡೆಯಲ್ಲಿರುವ ಚಿಮ್ಮನಚೋಡ, ತಾಜಲಾಪೂರ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ನದಿಯಲ್ಲಿನ ನೀರು ದುರ್ವಾಸನೆ ಬೀರುತ್ತಿದೆ.

ಜಾನುವಾರುಗಳಿಗೆ ಕುಡಿಯಲು ನೀರಿ ಇಲ್ಲ. ಅಧಿಕಾರಿಗಳು ಮುಲ್ಲಾಮಾರಿ ಜಲಾಶಯದಿಂದ ನದಿಗೆ ನೀರು ಹರಿಸಬೇಕೆಂದು ಚಿಮ್ಮನಚೋಡ ಬಿಜೆಪಿ ಮುಖಂಡ ರಾಮರೆಡ್ಡಿ ಪಾಟೀಲ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ 13 ಗ್ರಾಮಗಳು ಗುರುತಿಸಿಕೊಂಡಿದ್ದರು ತಾಲೂಕು ಆಡಳಿತ ಕುಂಭನಂತೆ ಮಲಗಿಕೊಂಡಿದೆ. ಜನರ ಸಮಸ್ಯೆಗೆ ಯಾರು ಸ್ಪಂದಿಸುತ್ತಿಲ್ಲವೆಂದು ಜನರು ದೂರುತ್ತಿದ್ದಾರೆ.

Share this article