- ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಸ್ಠಾನ ಸಮಿತಿ ಸಭೆ
ಬಡವರಿಗಾಗಿ ಸೊಸೈಟಿ ಮೂಲಕ ನೀಡುತ್ತಿರುವ ಉಚಿತ ಅಕ್ಕಿಯನ್ನು ಮಾರಾಟ ಮಾಡಿದರೆ ಅಂತವರಿಗೆ ನೀಡುವ ಅಕ್ಕಿ ಯನ್ನು ಕ್ಯಾನ್ಸಲ್ ಮಾಡಲಾಗುವುದು ಎಂದು ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ಎಚ್ಚರಿಕೆ ನೀಡಿದರು.
ಮಂಗಳವಾರ ತಾಪನಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ತಿಂಗಳಿಂದ 5 ಕೆಜಿ ಅಕ್ಕಿ ಹಣದ ಬದಲಿಗೆ 5 ಕೆ.ಜಿ.ಅಕ್ಕಿಯನ್ನೇ ನೀಡುತ್ತಿದ್ದೇವೆ. ಕುಟುಂಬದ ಒಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿಯನ್ನು ಪ್ರತಿ ತಿಂಗಳೂ ನೀಡಲಾಗುತ್ತಿದ್ದು ಫೆಬ್ರವರಿ, ಮಾರ್ಚ ತಿಂಗಳ ಅಕ್ಕಿ ಸೇರಿಸಿ ನೀಡಲಾಗುವುದು. ಈ ವಿಚಾರವನ್ನು ಎಲ್ಲಾ ಸೊಸೈಟಿಗಳ ಮುಂಭಾಗದಲ್ಲಿ ನಾಮಫಲಕ ಹಾಕಬೇಕು ಎಂದು ಸೂಚಿಸಿದರು.ಸಮಿತಿ ಸದಸ್ಯ ರಘು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬೇಕಾಬಿಟ್ಟಿ ಪವರ್ ಕಟ್ ಮಾಡುತ್ತಿದ್ದು ಮನಸೋ ಇಚ್ಚೆ ವಿದ್ಯುತ್ ನೀಡಲಾಗುತ್ತಿದೆ. ಮಕ್ಕಳಿಗೆ ಪರೀಕ್ಷಾ ಸಮಯವಾದ್ದರಿಂದ ಸಮಯಕ್ಕೆಸರಿಯಾಗಿ ವಿದ್ಯುತ್ ನೀಡಬೇಕು. ಯಾವುದೇ ಪವರ್ ಕಟ್ ಮಾಡಬಾರದು. ವಿದ್ಯುತ್ ಕಡಿತ ಮಾಡುವ ಸಮಯವನ್ನು ಮುಂಚಿತವಾಗಿ ಪತ್ರಿಕೆಗಳ ಮೂಲಕ ತಿಳಿಸಬೇಕು ಎಂದರು. ಸದಸ್ಯರಾದ ಬೇಸಿಲ್ ಮಾತನಾಡಿ, ಗ್ಯಾರಂಟಿ ಯೋಜನೆಗಳಲ್ಲಿ ಎಲ್ಲರಿಗೂ ಸರಿಯಾಗಿ ಸೌಲಭ್ಯ ದೊರಕುತ್ತಿರುವುದು ಗೃಹ ಜ್ಯೋತಿ ಯೋಜನೆಯಿಂದ ಮಾತ್ರ. ಮೆಸ್ಕಾಂ ಇಲಾಖೆಯಿಂದ ಈ ಯೋಜನೆ ಅನುಷ್ಠಾನದ ಬಗ್ಗೆ ಯಾವುದೇ ದೂರುಗಳಿಲ್ಲ. ಆದರೆ, ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂಬುವುದೇ ದೊಡ್ಡ ಸಮಸ್ಯೆ ಎಂದರು.
ಸಿಡಿಪಿಒ ಇಲಾಖೆ ತಾಲೂಕು ಸಂಯೋಜಕ ಪ್ರದೀಪ್ ಮಾಹಿತಿ ನೀಡಿ, ಒಟ್ಟು 19661 ಪಡಿತರ ಚೀಟಿಗಳಿದ್ದು ಅವುಗಳಲ್ಲಿ 16027 ನೋಂದಣಿ ಆಗಿವೆ. ಇದುವರೆಗೆ ಒಟ್ಟು 15,561 ಫಲಾನುಭವಿಗಳಿಗೆ ಅಕ್ಟೋಬರ್ 2025 ರವರೆಗೆ 3 ಕೋಟಿ 11 ಲಕ್ಷದ 22 ಸಾವಿರ ರು. ಸಂದಾಯವಾಗಿದೆ. ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳ ಹಣವೂ ಸಂದಾಯವಾಗಿದೆ. ಇನ್ನೂ ಸಂಪೂರ್ಣ ಮಾಹಿತಿ ಅಪ್‌ಡೇಟ್ ಆಗಿಲ್ಲ. ಕೆಲವು ಅರ್ಜಿಗಳು ಮರಣ ಪ್ರಕರಣ ಹಾಗೂ ಜಿಎಸ್.ಟಿ, ಐಟಿ ರಿಟನ್ಸ್ ಎಂಬ ಕಾರಣದಿಂದ ತಿರಸ್ಕೃತಗೊಂಡಿವೆ. ಇನ್ನು ಕೆಲವು ಪಡಿತರ ಚೀಟಿ ಮುಖ್ಯಸ್ಥರ ಹೆಸರು ಬದಲಾವಣೆಯಿಂದ ತಿರಸ್ಕೃತಗೊಂಡಿವೆ ಎಂದು ಸಭೆಗೆ ತಿಳಿಸಿದರು.
ಸಮಿತಿ ಸದಸ್ಯ ಕಾರ್ಯದರ್ಶಿ ಎಚ್.ಡಿ. ನವೀನ್‌ಕುಮಾರ್ ಮಾತನಾಡಿ, ಈ ಬಗ್ಗೆ ತಾಲೂಕು ಸಮಿತಿ ಅಧ್ಯಕ್ಷರು ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳುತ್ತಾರೆ. ಇಂತಹ ಸಮಸ್ಯೆಗಳಿರುವ ಫಲಾನುಭವಿಗಳ ಪಟ್ಟಿ ನೀಡಿ ಎಂದರು.ಆಹಾರ ಇಲಾಖೆ ಅಧಿಕಾರಿ ಗಣಪತಿ ಸಭೆಯಲ್ಲಿ ಮಾಹಿತಿ ನೀಡಿ, ಜುಲೈ-2023ನಿಂದ ನವೆಂಬರ್ 2024 ರವರೆಗೆ ಒಟ್ಟು 11 ಕೋಟಿ 61 ಲಕ್ಷದ 2 ಸಾವಿರದ ಆರು ನೂರಾ ತೊಂಬತ್ತು ರು. ಡಿಬಿಟಿ ಹಣ ಜಮಾ ಆಗಿರುತ್ತದೆ ಎಂದರು. ಸದಸ್ಯರಾದ ರಘು, ನಿತ್ಯಾನಂದ,ನಾಗರಾಜ,ಹೂವಮ್ಮ,ಅಪೂರ್ವ ಇದ್ದರು.