ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

KannadaprabhaNewsNetwork |  
Published : Mar 19, 2025, 12:31 AM IST
32 | Kannada Prabha

ಸಾರಾಂಶ

ನೈಋತ್ಯ ವಲಯ ರೈಲ್ವೆ ಜನರಲ್ ಮೆನೇಜರ್ ಮುಕುಲ್ ಶರನ್ ಮಥುರ್ ಮಂಗಳವಾರ ಕಡಬ ತಾಲೂಕಿನ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು. ಈ ನಡುವೆ ಅಧಿಕಾರಿಗಳು ಸಮರ್ಪಕವಾಗಿ ಕಾಮಗಾರಿ ಪರಿಶೀಲನೆ ನಡೆಸದೇ ತೆರಳಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ನೈಋತ್ಯ ವಲಯ ರೈಲ್ವೆ ಜನರಲ್ ಮೆನೇಜರ್ ಮುಕುಲ್ ಶರನ್ ಮಥುರ್ ಮಂಗಳವಾರ ಕಡಬ ತಾಲೂಕಿನ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು. ಈ ನಡುವೆ ಅಧಿಕಾರಿಗಳು ಸಮರ್ಪಕವಾಗಿ ಕಾಮಗಾರಿ ಪರಿಶೀಲನೆ ನಡೆಸದೇ ತೆರಳಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಜನರಲ್ ಮೆನೇಜರ್ ಮುಕುಲ್ ಶರಣ್ ಮಥುರ್ ಪರಿಶೀಲನಾ ವಿಶೇಷ ರೈಲಿನ ಮೂಲಕ ಮಂಗಳವಾರ ಅಪರಾಹ್ನ 12ರ ವೇಳೆಗೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಆಗಮಿಸಿದ್ದು, ರೈಲಿನಿಂದ ಇಳಿದ ಅವರು ಎರಡನೇ ಪ್ಲಾಟ್ ಫಾರ್ಮ್ ನಲ್ಲಿ ಸ್ವಲ್ಪ ಹೊತ್ತು ಪರಿಶೀಲನೆ ನಡೆಸಿದರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ರೈಲು ನಿಲ್ದಾಣದಿಂದ ಇಲಾಖಾ ವಾಹನದಲ್ಲಿ ಕೆಲ ಅಧಿಕಾರಿಗಳ ಜೊತೆ ಹೊರಗೆ ತೆರಳಿದರು.

ಬಳಿಕ ಸುಮಾರು ಗಂಟೆ 1.15ರ ವೇಳೆಗೆ ಮತ್ತೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಆಗಮಿಸಿ ರೈಲು ನಿಲ್ದಾಣದ ಪಾರ್ಕಿಂಗ್ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳಿಂದ ಕೆಲ ಮಾಹಿತಿ ಪಡೆದರು. ಬಳಿಕ ಅವರು ಅಧಿಕಾರಿಗಳ ಜೊತೆಗೆ ಪಾದಚಾರಿ ಮೇಲ್ಸೇತುವೆ ಮೂಲಕ ಎರಡನೇ ಪ್ಲಾಟ್ ಫಾರಂಗೆ ತೆರಳಿ ತಾವು ಆಗಮಿಸಿದ್ದ ರೈಲಿನ ಒಳಗೆ ಹೋಗಿದ್ದಾರೆ. ಬಳಿಕ ರೈಲಿನಲ್ಲೇ ವಿವಿಧ ಅಧಿಕಾರಿಗಳ ಜೊತೆಗಿದ್ದರು. ಅಪರಾಹ್ನ ಸುಮಾರು 2.30ರ ವೇಳೆ ರೈಲು ಸಕಲೇಶಪುರ ಕಡೆಗೆ ತೆರಳಿದೆ.

ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ಜನರಲ್ ಮೆನೇಜರ್ ಅವರಲ್ಲಿ ಮಾಧ್ಯಮದವರು ಪ್ರತಿಕ್ರಿಯೆಗಾಗಿ ಮಾತನಾಡಿಸಿದ ವೇಳೆ, ನಾನು ಹೊಸದಾಗಿ ಬಂದಿದ್ದೇನೆ. ಕಾಮಗಾರಿ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದಿದ್ದರು.

ಆದರೆ ಬಳಿಕ ಮಾಧ್ಯಮದವರಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಿಂದ ತೆಳಿದ್ದಾರೆ. ರೈಲ್ವೆ ಇಲಾಖೆಯ ವಿವಿಧ ಅಧಿಕಾರಿಗಳು, ಸಿಬ್ಬಂದಿ, ರಕ್ಷಣಾ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು, ಕಾಮಗಾರಿ ನಿರ್ವಹಿಸುವ ತಂಡದವರು ಜತೆಗಿದ್ದರು.

ಸಾರ್ವಜನಿಕರ ಅಸಮಾಧಾನ;

ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಅಮೃತ ಭಾರತ್ ಯೋಜನೆಯಡಿ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಡಿಸೆಂಬರ್ ನಲ್ಲಿ ಮುಗಿಯಬೇಕಿತ್ತು. ಆದರೆ ಮಾರ್ಚ್ ಗೆ ಮುಗಿಸುತ್ತೇವೆ ಎಂದಿದ್ದರು. ಆದರೂ ಕಾಮಗಾರಿ ವೇಗ ಪಡೆದಿಲ್ಲ. ಇಲ್ಲಿ ಕಾಮಗಾರಿಯ ಗುಣಮಟ್ಟದಲ್ಲಿ ಲೋಪ ಆಗಿರುವುದು, ಕಳಪೆ ಕಾಮಗಾರಿ ಶಂಕೆ ಇದೆ. ಈ ಬಗ್ಗೆ ಇಲ್ಲಿಗೆ ಆಗಮಿಸುವ ಅಧಿಕಾರಿಗಳಿಗೆ ಮಾಹಿತಿ ನೀಡೋಣ ಎಂದರೆ ಅವರು ಕೂಡ ಇಲ್ಲಿ ಕಾಟಾಚಾರಕ್ಕೆ ಭೇಟಿ ನೀಡಿದ ರೀತಿ ಬಂದು ಹೋಗುತ್ತಿದ್ದಾರೆ. ಯಾವುದೇ ಕಾಮಗಾರಿಯನ್ನು ಸಮರ್ಪಕವಾಗಿ ಪರಿಶೀಲನೆ ನಡೆಸದೇ ಹೋಗುವುದಾದರೆ. ಯಾಕೆ ಬರುವುದು ಎಂದು ನೆಟ್ಟಣ ರೈಲ್ವೆ ಬಳಕೆದಾರರ ಸಂಘದ ಪ್ರಸಾದ್ ನೆಟ್ಟಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಆರೋಪಿಸಿದ್ದಾರೆ.

ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿರು.

ಅಧಿಕಾರಿಗಳು ಬರುವಾಗ ಕಾಮಗಾರಿ ಚುರುಕು:

ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಅಭಿವೃದ್ಧಿ ಕೆಲಸಗಳು ನಿಧಾನವಾಗಿ, ಅವ್ಯವಸ್ಥಿತವಾಗಿ ನಡೆಯುತ್ತಿದ್ದು, ಅಧಿಕಾರಿಗಳು ಭೇಟಿ ನೀಡುವ ಹಿಂದಿನ ದಿನ ಕಾಮಗಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಉನ್ನತ ಅಧಿಕಾರಿಗಳು ಬಂದರೂ ಅವರು ಸಮರ್ಪಕವಾಗಿ ಕಾಮಗಾರಿ ಪರಿಶೀಲನೆ ನಡೆಸದೆ, ಸಾರ್ವಜನಿಕರ ಅಹವಾಲು ಆಲಿಸದೇ ತೆರಳುತ್ತಿರುವುದು ಬೇಸರದ ಸಂಗತಿ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ