ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಬನಶಂಕರಿ, ಅಂಜನಾಪುರ, ಸರ್ ಎಂ.ವಿಶ್ವೇಶ್ವರಯ್ಯ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬಹುಕೋಟಿ ಮೌಲ್ಯದ 68 ಮೂಲೆ ಮತ್ತು ಮಧ್ಯಂತರ ನಿವೇಶನಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಲು ಬಿಡಿಎ ನಿರ್ಧರಿಸಿದೆ.
ಮೂಲೆ ನಿವೇಶನಗಳು, ಮಧ್ಯಂತರ ನಿವೇಶನಗಳು ಮತ್ತು ಇತರೆ ಹರಾಜು ಮಾಡಬಹುದಾದ ನಿವೇಶನಗಳ ವಿಲೇವಾರಿ ನಿಯಮಾನುಸಾರ ಹರಾಜು ಪ್ರಕ್ರಿಯೆ ನಡೆಸಲಾಗುವುದು. ನಿವೇಶನಗಳನ್ನು ಆಯಾ ಬಡಾವಣೆಗಳಲ್ಲಿರುವ ಸ್ಥಿತಿಯಲ್ಲಿಯೇ ಹರಾಜು ಮಾಡುವುದಾಗಿ ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿಯಿರುವವರು ಮಾ.30ರಂದು ಸಂಜೆ 5 ಗಂಟೆಯೊಳಗೆ ನೋಂದಾಯಿಸಬೇಕು. ಏಪ್ರಿಲ್ 1ರಂದು ಬೆಳಗ್ಗೆ 10ಕ್ಕೆ ಇ- ಹರಾಜಿನ ನೇರ ಬಿಡ್ಡಿಂಗ್ ಆರಂಭವಾಗಿ ಏ.2ರಂದು ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ.
ಆರಂಭಿಕ ಬಿಡ್ ದರ ಚದರ ಮೀಟರ್‌ಗೆ ₹60 ಸಾವಿರಗಳಿಂದ ಆರಂಭಗೊಂಡು ಗರಿಷ್ಠ 1.27 ಲಕ್ಷ ರು.ಗಳವರೆಗೆ ದರ ನಿಗದಿಪಡಿಸಲಾಗಿದೆ.
ಕೆಲವು ಬಡಾವಣೆಗಳಲ್ಲಿ ಒಂದು ನಿವೇಶನ, ಕೆಲವು ಬಡಾವಣೆಗಳಲ್ಲಿ 14 ನಿವೇಶನಗಳವರೆಗೆ ಇ-ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಪ್ರತಿ ನಿವೇಶನಕ್ಕೆ ಇಎಂಡಿ ₹4 ಲಕ್ಷಗಳನ್ನು ನಿಗದಿಪಡಿಸಲಾಗಿದೆ. ಈ ಮೊತ್ತ ಹಾಗೂ ಇ-ಹರಾಜಿನ ಶುಲ್ಕವನ್ನು ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿರುವಂತೆ ಪಾವತಿಸಬೇಕಿದೆ.
ಮೂಲೆ ಮತ್ತು ಮಧ್ಯಂತರ ನಿವೇಶನಗಳನ್ನು ಇ-ಹರಾಜಿನ ಮೂಲಕ ಮಾರಾಟ ಮಾಡಿ ಸಂಪನ್ಮೂಲಕ ಕ್ರೋಢೀಕರಿಸುವ ಉದ್ದೇಶ ಹೊಂದಲಾಗಿದೆ.
ನಿವೇಶನಗಳ ಇ-ಹರಾಜಿನಿಂದ ಬಂದ ಮೊತ್ತವನ್ನು ಬಿಡಿಎ ಬಡಾವಣೆಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲು ಪ್ರಾಧಿಕಾರ ತೀರ್ಮಾನ ಕೈಗೊಂಡಿದೆ ಎಂದು ಬಿಡಿಎ ಮೂಲಗಳು ಮಾಹಿತಿ ನೀಡಿವೆ.
ಎಲ್ಲೆಲ್ಲಿ ನಿವೇಶನ ಲಭ್ಯ?:
ನಿವೇಶನಗಳು: ಬನಶಂಕರಿ 6ನೇ ಹಂತ 1ನೇ ಬ್ಲಾಕ್‌ನಲ್ಲಿ 5 ನಿವೇಶನಗಳು, 2ನೇ ಬ್ಲಾಕ್‌ನಲ್ಲಿ 14 ನಿವೇಶನಗಳು, ಕುಮಾರಸ್ವಾಮಿ ಲೇಔಟ್ 1ನೇ ಹಂತದಲ್ಲಿ 2 ನಿವೇಶನ, ಮುಂದುವರೆದ ಅಂಜನಾಪುರ 11ನೇ ಬ್ಲಾಕ್ 17 ನಿವೇಶನಗಳು, ಬನಶಂಕರಿ 6ನೇ ಹಂತ 4ನೇ ಬಿ ಬ್ಲಾಕ್‌ನಲ್ಲಿ 14 ಮತ್ತು 4ನೇ ಎಚ್ ಬ್ಲಾಕ್‌ನಲ್ಲಿ 1 ನಿವೇಶನ.
ಅಂಜನಾಪುರ 7ನೇ ಬ್ಲಾಕ್‌ನಲ್ಲಿ 1 ಮತ್ತು ಮುಂದುವರೆದ ಸರ್‌ಎಂವಿ ಬಡಾವಣೆಯ 7ನೇ ಬ್ಲಾಕ್‌ನಲ್ಲಿ 1 ನಿವೇಶನ ಇ-ಹರಾಜಿಗೆ ಇದೆ. ಸರ್ ಎಂ ವಿಶ್ವೇಶ್ವರಯ್ಯ 9ನೇ ಬ್ಲಾಕ್‌ನಲ್ಲಿ 3, 1ನೇ ಬ್ಲಾಕ್‌ನಲ್ಲಿ 1 ಹಾಗೂ 4 ಮತ್ತು 5ನೇ ಬ್ಲಾಕ್‌ನಲ್ಲಿ ತಲಾ 4, 8ನೇ ಬ್ಲಾಕ್‌ನಲ್ಲಿ 1 ನಿವೇಶನ ಸೇರಿದಂತೆ ಒಟ್ಟು 68 ನಿವೇಶನಗಳನ್ನು ಇ-ಹರಾಜು ಪ್ರಕ್ರಿಯೆ ಮೂಲಕ ಬಿಡಿಎ ಮಾರಾಟ ಮಾಡಲಿದೆ.