ಬಿಡಿಎಗೆ ಹೊಸ ವೆಬ್‌ಸೈಟ್‌, ಸಾಪ್ಟ್‌ವೇರ್‌ ಅನಾವರಣ

KannadaprabhaNewsNetwork |  
Published : Mar 09, 2024, 01:33 AM ISTUpdated : Mar 09, 2024, 01:30 PM IST
BDA | Kannada Prabha

ಸಾರಾಂಶ

ಜನರು ಬಿಡಿಎಗೆ ಅಲೆಯುವುದನ್ನು ತಪ್ಪಿಸಲು ಹೊಸ ಸಾಫ್ಟ್‌ವೇರ್‌, ವೆಬ್‌ಸೈಟ್‌ ಆರಂಭಿಸಲಾಗಿದೆ. ಇದರಿಂದ ಜನರು ದೂರು ನೀಡಲು ಅನಕೂಲ ಆಗುತ್ತದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಗರಿಕರ ಕುಂದುಕೊರತೆಗಳನ್ನು ಆನ್‌ಲೈನ್‌ ಮೂಲಕವೇ ಪರಿಹರಿಸಿಕೊಳ್ಳಲು ಅನುಕೂಲವಾಗುವಂತೆ ಪ್ರಾಧಿಕಾರವು ನೂತನ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಸದುಪಯೋಗ ಪಡಿಸಿಕೊಳ್ಳಬೇಕೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ತಿಳಿಸಿದರು.

ಬಿಡಿಎ ಕೇಂದ್ರ ಕಚೇರಿಯಲ್ಲಿ ಪ್ರಾಧಿಕಾರದ ವೆಬ್‌ಸೈಟ್‌ www.bda.karnataka.gov.in ಮತ್ತು ರಿಸೊಲ್ವ್ ಯುವರ್‌ ಇಶ್ಸುಸ್‌ (resolve your issues) ಎಂಬ ನೂತನ ತಂತ್ರಾಂಶ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

ಈ ನೂತನ ತಂತ್ರಾಂಶವು ಸಾರ್ವಜನಿಕರು ಭೇಟಿ ಮಾಡುವ ನಿಗಧಿತ ವಿಭಾಗದ ಅಧಿಕಾರಿಯನ್ನು ಭೇಟಿ ಮಾಡಲು ಅನುಕೂಲ ಕಲ್ಪಿಸಲಿದೆ ಎಂದರು.

ನಾಗರಿಕರ ಸಮಯವನ್ನು ವ್ಯರ್ಥ ಮಾಡದೇ ಸಮಸ್ಯೆಗಳನ್ನು ಬಗೆಹರಿಸಲು ಈ ತಂತ್ರಾಂಶವು ಅನುವು ಮಾಡಿಕೊಡಲಿದೆ. ಮನೆಯಲ್ಲೇ ಕುಳಿತು ಈ ತಂತ್ರಾಂಶದಲ್ಲಿ ಸಮಸ್ಯೆಗಳನ್ನು ನಮೂದಿಸಿ ದೂರು ಸಲ್ಲಿಸಿದ ನಂತರ ಪ್ರಾಧಿಕಾರದ ನಿಗಧಿತ ವಿಭಾಗದ ಅಧಿಕಾರಿಯವರಿಗೆ ರವಾನೆಯಾಗುತ್ತದೆ.

 ಅಧಿಕಾರಿಯು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ದಿನಾಂಕ ಮತ್ತು ಸಮಯವನ್ನು ನಿಗದಿಗೊಳಿಸಿ, ಆ ಮಾಹಿತಿಯನ್ನು ಸಂಬಂಧಪಟ್ಟ ದೂರುದಾರರ ಮೊಬೈಲ್‌ಗೆ ಲಿಂಕ್‌ ಕಳುಹಿಸುವರು. 

ಅಧಿಕಾರಿಗಳು ನಿಗಧಿಗೊಳಿಸಿದ ದಿನಾಂಕದಂದು ಪ್ರಾಧಿಕಾರದ ಪ್ರವೇಶದ್ವಾರದಲ್ಲಿ ಇರುವ ಭದ್ರತಾ ಸಿಬ್ಬಂದಿಗೆ ಕೊಂಡಿ (ಲಿಂಕ್‌) ಯನ್ನು ತೋರಿಸಿ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.

ಬಿಡಿಎ ಆಯುಕ್ತ ಎನ್‌.ಜಯರಾಮ್‌ ಅವರು ಮಾತನಾಡಿ, ಪ್ರಾಧಿಕಾರದಲ್ಲಿ ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಿಗುವಂತೆ ಮಾಡುವ ಉದ್ದೇಶದಿಂದ ಈ ತಂತ್ರಾಂಶ ಸಿದ್ಧಪಡಿಸಲಾಗಿದೆ. 

ಈ ತಂತ್ರಾಂಶದ ಮೂಲಕ ಸಾರ್ವಜನಿಕರು ಪ್ರಾಧಿಕಾರದ ಅಧಿಕೃತ ಅಂತರ್ಜಾಲಕ್ಕೆ ಭೇಟಿ ನೀಡಿ ಅಲ್ಲಿ ತಮ್ಮ ಸಮಸ್ಯೆಗಳನ್ನು ನಮೂದಿಸಿ, ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಡೆಯಲು ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರ ಕಾರ್ಯದರ್ಶಿ (ಇ-ಆಡಳಿತ) ಉಜ್ವಲ್‌ ಕುಮಾರ್‌ ಘೋಷ್‌, ಕಾರ್ಯನಿರ್ವಾಹಕ ನಿರ್ದೇಶಕ ಯಶವಂತ್‌ ವಿ.ಗುರುಕರ್‌, ಕಾರ್ಯದರ್ಶಿ ವೈ.ಬಿ.ಶಾಂತರಾಜು, ನಗರ ಯೋಜನಾ ಸದಸ್ಯ ಶಶಿಕುಮಾರ್, ಉಪ ಆಯುಕ್ತೆ ಡಾ.ಸೌಜನ್ಯ, ಇಡಿಪಿ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತರಿದ್ದರು.

PREV

Recommended Stories

ಡಿಕೆಶಿ ಓಡಿಸಿದ್ದ ಸ್ಕೂಟರ್‌ಗಿದ್ದ ₹ 18500 ದಂಡ ಬಾಕಿ ವಸೂಲಿ
ವರಮಹಾಲಕ್ಷ್ಮೀ ಹಬ್ಬ : ಕನಕಾಂಬರಕ್ಕೆ 1800 - ಮಲ್ಲಿಗೆ ಕೇಳಲೇಬೇಡಿ !