ಕನ್ನಡಪ್ರಭ ವಾರ್ತೆ ಬೆಂಗಳೂರು
ಡಾ। ಕೆ.ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಹೈಕೋರ್ಟ್ ತಡೆ ನೀಡಿರುವ ಬೆನ್ನಲ್ಲೇ ಮುಂದುವರೆದ ಬಡಾವಣೆ (ಎಕ್ಸ್‌ಟೆನ್ಷನ್) ಮತ್ತು ಹೊಸ ಬಡಾವಣೆ ನಿರ್ಮಾಣಕ್ಕೆ ಜಮೀನು ಗುರುತಿಸಿ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆಗಾಗಿ ಪ್ರಸ್ತಾವನೆ ಸಿದ್ಧಪಡಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಮುಂದಾಗಿದೆ.
ಡಾ। ಕೆ.ಶಿವರಾಮ ಕಾರಂತ ಲೇಔಟ್ ಮುಂದುವರೆದ ಬಡಾವಣೆ ನಿರ್ಮಾಣ ಯೋಜನೆಗಾಗಿ ಅಗತ್ಯವಿರುವ ಜಮೀನನ್ನು ಅಭಿಯಂತರ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಜಮೀನು ಗುರುತಿಸಿ, ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಬೇಕಾಗುವ ಅಗತ್ಯ ಮಾಹಿತಿ ಕ್ರೋಢಿಕರಿಸಲು ಮೂರು ತಂಡಗಳನ್ನು ರಚಿಸಲಾಗಿದೆ.
ವಿಶೇಷ ಭೂ ಸ್ವಾಧೀನಾಧಿಕಾರಿಗಳಾದ ಕೆ.ಕವಿತಾ ಯೋಗಪ್ಪನವರ್, ನಿಖಿತಾ ಎಂ.ಚಿನ್ನಸ್ವಾಮಿ ಮತ್ತು ಪಿ.ಎಂ.ನಂದಿನಿ ಅವರ ನೇತೃತ್ವದಲ್ಲಿ ತಂಡ ಮಾಡಲಾಗಿದೆ.
ಉದ್ದೇಶಿತ ಯೋಜನೆಗೆ ಭೂಸ್ವಾಧೀನ ಪಡಿಸಿಕೊಳ್ಳಬಹುದಾದ ಖುಲ್ಲಾ ಇರುವ ಜಮೀನನ್ನು ಗುರುತಿಸಿ, ಸದರಿ ಜಮೀನಿನ ಖಾತೆದಾರರ ವಿವರ, ವಿಸ್ತೀರ್ಣದ ವಿವರ, ಜಮೀನಿನ ನಕ್ಷೆ, ಚಕ್ಕುಬಂದಿ ಮತ್ತು ಇತರೆ ವಿವರಗಳನ್ನು ಈ ತಿಂಗಳ ಅಂತ್ಯದೊಳಗೆ ಸಂಗ್ರಹಿಸುವಂತೆ ಸೂಚನೆ ನೀಡಲಾಗಿದೆ.
ವಿಶೇಷ ಭೂಸ್ವಾಧೀನಾಧಿಕಾರಿ-1: ಡಾ। ಕವಿತಾ ಯೋಗಪ್ಪನವರ್ ಮುಖ್ಯಸ್ಥರಾಗಿರುವ ತಂಡದಲ್ಲಿ ಭೂಮಾಪಕರಾದ ಕೆ.ರಾಮಚಂದ್ರ, ಎಂ.ರಾಮಮೂರ್ತಿ ಇದ್ದಾರೆ. ಕೊಂಡಶೆಟ್ಟಿಹಳ್ಳಿ, ಲಿಂಗರಾಜಸಾಗರ, ಸೋಲದೇವನಹಳ್ಳಿ, ಚಿಕ್ಕಬಾಣಾವಾರ, ಕೆಂಪಾಪುರ ಗ್ರಾಮಗಳ ಖುಲ್ಲಾ ಜಮೀನಿನನ್ನು ಗುರುತಿಸಲಿದ್ದಾರೆ.
ವಿಶೇಷ ಭೂಸ್ವಾಧೀನಾಧಿಕಾರಿ-2: ನಿಖಿತಾ ಎಂ.ಚಿನ್ನಸ್ವಾಮಿ ಮುಖ್ಯಸ್ಥರಾಗಿರುವ ತಂಡದಲ್ಲಿ ಭೂ ಮಾಪಕರಾದ ಬಿ.ಕೆ.ಲೋಕೇಶ್, ಎಚ್.ಬಿ.ಧರ್ಮರಾಜು, ನಾಗೇಶ್ ಇದ್ದು, ಕಸಘಟ್ಟಪುರ, ಕುಂಬಾರಹಳ್ಳಿ, ಆವಲಹಳ್ಳಿ, ಮಾವಳ್ಳಿಪುರ, ಜೆ.ಬಿ.ಕಾವಲ್.
ವಿಶೇಷ ಭೂಸ್ವಾಧೀನಾಧಿಕಾರಿ-6: ಪಿ.ಎಂ.ನಂದಿನಿ ಮುಖ್ಯಸ್ಥರಾಗಿರುವ ತಂಡದಲ್ಲಿ ಭೂ ಮಾಪಕರಾಗಿ ಮಲ್ಲಯ್ಯ ಅವರು, ಲಿಂಗರಾಜಪುರ, ಮೈಲಪ್ಪನಹಳ್ಳಿ ಮತ್ತು ದೊಡ್ಡಬ್ಯಾಲಹಳ್ಳಿ ಗ್ರಾಮಗಳಲ್ಲಿ ಸರ್ವೆ ಕೈಗೊಳ್ಳಲಿದ್ದಾರೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಾ। ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ಸಮಸ್ಯೆಗಳನ್ನು ಪರಿಹರಿಸದೇ ಬಿಡಿಎಯಿಂದ ನಿವೇಶನ ಹಂಚಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ನಿವೇಶನ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸದಂತೆ ರಾಜ್ಯ ಕೋರ್ಟ್ ನಿರ್ಬಂಧ ವಿಧಿಸಿ ಆದೇಶಿಸಿದೆ.ಬಿಡಿಎ ಹೊಸ ಬಡಾವಣೆಗೆ ಸಿದ್ಧತೆ
ಡಾ। ಕೆ.ಶಿವರಾಮ ಕಾರಂತ ಮುಂದುವರಿದ ಬಡಾವಣೆಯೊಂದಿಗೆ ಹೊಸ ಬಡಾವಣೆ ನಿರ್ಮಾಣಕ್ಕೂ ಬಿಡಿಎ ಮುಂದಾಗಿದೆ. ಅದಕ್ಕಾಗಿ ಜಮೀನು ಗುರುತಿಸಲು ವಿಶೇಷ ಭೂಸ್ವಾಧೀನ ಅಧಿಕಾರಿಗಳ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿದೆ.
ಉದ್ದೇಶಿತ ಯೋಜನೆಗೆ ಜಮೀನು ಗುರುತಿಸಲು ವಿಶೇಷ ಭೂಸ್ವಾಧೀನಾಧಿಕಾರಿ ಕೆ.ಎನ್.ಪ್ರವೀಣ್ ನೇತೃತ್ವದ ತಂಡ ಬೆಳ್ಳಹಳ್ಳಿ, ಕಣ್ಣೂರು, ಬಿದರಹಳ್ಳಿ, ಹಿರಂಡಹಳ್ಳಿ, ಚೀಮಸಂದ್ರ ಗ್ರಾಮಗಳಲ್ಲಿ ಸರ್ವೆ ನಡೆಸಲಿದೆ.
ವಿಶೇಷ ಭೂಸ್ವಾಧೀನಾಧಿಕಾರಿ ಡಾ। ಬಿ.ಆರ್.ಹರೀಶ್ ಅವರ ತಂಡವು, ಬಿಳಿಶಿವಾಲೆ, ಅನಗಪುರ, ವಡೇರಹಳ್ಳಿ, ರಾಂಪುರ, ಗೊರವಿಗೆರೆ, ಕಾಟಂನಲ್ಲೂರು, ಅಮಾನಿದೊಡ್ಡಕೆರೆ, ಸಾರಕ್ಕಿಗೊಟ್ಟಹಳ್ಳಿ, ದೊಡ್ಡಗುಂಟಿಗನಬ್ಬೆ, ಖಾಜಿಸೋಣ್ಣೇನಹಳ್ಳಿ, ಕನ್ನಮಂಗಲ, ಪೂಜೇನ ಅಗ್ರಹಾರ, ಭಕ್ತರಹಳ್ಳಿ, ಮಲ್ಲಸಂದ್ರ, ಕಾಡುಗೋಡಿ, ಶಿಗೇಹಳ್ಳಿ, ಕೊರಳೂರು ಮತ್ತು ವಿಶೇಷ ಭೂಸ್ವಾಧೀನಾಧಿಕಾರಿ ಪಿ.ಎಂ.ನಂದಿನಿ ನೇತೃತ್ವದ ತಂಡವು ಬ್ಯಾಲಕೆರೆ ಗ್ರಾಮದಲ್ಲಿ ಜಮೀನು ಗುರುತಿಸುವ ಕಾರ್ಯಕೈಗೊಳ್ಳಲಿದೆ.