ಬಿಡಿಸಿಸಿ ಬ್ಯಾಂಕ್‌: ಆನಂದ ಸಿಂಗ್ ಬಣಕ್ಕೆ ಅಧ್ಯಕ್ಷ ಪಟ್ಟ

KannadaprabhaNewsNetwork | Published : Dec 16, 2023 2:01 AM

ಸಾರಾಂಶ

ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮಾಜಿ ಸಚಿವ ಆನಂದ ಸಿಂಗ್ ಬಣದ ಕೆ. ತಿಪ್ಪೇಸ್ವಾಮಿ ಹಾಗೂ ನೂತನ ಉಪಾಧ್ಯಕ್ಷರಾಗಿ ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ ಬಣದ ಐ. ದಾರುಕೇಶ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಹೊಸಪೇಟೆ:ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ(ಬಿಡಿಸಿಸಿ) ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಗೆ ಕೊನೆಗೂ ತೆರೆಬಿದ್ದಿದ್ದು, ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಆನಂದ ಸಿಂಗ್ ಬಣದ ಕೆ. ತಿಪ್ಪೇಸ್ವಾಮಿ ಹಾಗೂ ನೂತನ ಉಪಾಧ್ಯಕ್ಷರಾಗಿ ಕೆಎಂಎಫ್ ಅಧ್ಯಕ್ಷ ಎಸ್. ಭೀಮಾನಾಯ್ಕ ಬಣದ ಐ. ದಾರುಕೇಶ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಎರಡೂ ಸಲ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೋರಂ ಕೊರತೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿತ್ತು. ನ. ೮ರಂದು ಹಾಗೂ ನ. ೧೮ರಂದು ಎರಡು ಬಾರಿ ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿ ವಿಶ್ವಜೀತ್ ಮೆಹತಾ ಅವರು ಚುನಾವಣೆ ಪ್ರಕ್ರಿಯೆ ಮುಂದೂಡಿದ್ದರು.ಒಮ್ಮತದ ಆಯ್ಕೆ:ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕಗ್ಗಂಟಾಗಿದ್ದರಿಂದ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಒಮ್ಮತದ ಅಧ್ಯಕ್ಷ- ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ಸೂಚನೆ ನೀಡಿದ್ದರು. ಹಾಗಾಗಿ ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದ ಸಿರುಗುಪ್ಪ ಕ್ಷೇತ್ರದ ಚೊಕ್ಕಬಸವನಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಂಪ್ಲಿ ಕ್ಷೇತ್ರದ ಮೂಕಯ್ಯಸ್ವಾಮಿ ಅವರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ನಡೆಯಿತು. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಸಭೆಗಳ ಮೇಲೆ ಸಭೆ ನಡೆಸಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಪರಿಹಾರ ಸೂತ್ರ ಸೂಚಿಸಿದ್ದರು.

ಅವಿರೋಧ ಆಯ್ಕೆ: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಧ್ಯಾಹ್ನ ೨ ಗಂಟೆಗೆ ಶುರುವಾದ ಬಳಿಕ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸಿರುಗುಪ್ಪ ಕ್ಷೇತ್ರದ ಚೊಕ್ಕ ಬಸವನಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಂಪ್ಲಿಯ ಕ್ಷೇತ್ರದ ಮೂಕಯ್ಯ ಸ್ವಾಮಿ ಅವರು ತಮ್ಮ ಉಮೇದುವಾರಿಕೆಗಳನ್ನು ಹಿಂಪಡೆದರು. ಬಳಿಕ ಕೂಡ್ಲಿಗಿ ಕ್ಷೇತ್ರದ ಕೆ. ತಿಪ್ಪೇಸ್ವಾಮಿ ಹಾಗೂ ಕೊಟ್ಟೂರು ಕ್ಷೇತ್ರದ ಐ. ದಾರುಕೇಶ್ ಅವರು ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಶ್ವಜಿತ್ ಮೆಹತಾ ಘೋಷಿಸಿದರು.

ಬ್ಯಾಂಕ್‌ನ ೧೪ ಜನ ಚುನಾಯಿತ ನಿರ್ದೇಶಕರು ಹಾಗೂ ಇಬ್ಬರು ನಾಮನಿರ್ದೇಶಿತ ನಿರ್ದೇಶಕರು ಚುನಾವಣೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಒಟ್ಟು ೧೬ ಜನ ನಿರ್ದೇಶಕರು ಸಭೆಯಲ್ಲಿ ಭಾಗಿಯಾಗಿದ್ದರಿಂದ ಕೋರಂ ಕೊರತೆ ಉಂಟಾಗದೇ ಸಭೆ ನಡೆಯಿತು.ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯಾದ ಬಳಿಕ ಅವರ ಬೆಂಬಲಿಗರು ಪಟಾಕಿಗಳನ್ನು ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಡಿವೈಎಸ್ಪಿ ಮಂಜುನಾಥ ತಳವಾರ್ ಅವರ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು.

Share this article