ಕುಮಟಾ: ತಾಲೂಕಿನ ಹೆಗಡೆಯಲ್ಲಿ ಅಘನಾಶಿನಿ ನದಿಗೆ ನಿರ್ಮಿಸಲಾಗುತ್ತಿದ್ದ ತಾರಿಬಾಗಿಲ ಸೇತುವೆಯ ಕಾಂಕ್ರೀಟ್ ತೊಲೆ(ಬೀಮ್ಸ್)ಗಳು ಬುಧವಾರ ಜಾರಿ ಬಿದ್ದು ಕಾಮಗಾರಿಯ ಸಾಚಾತನವನ್ನು ಬಯಲು ಮಾಡಿದೆ. ಸೇತುವೆಯ ಬೃಹತ್ ಗಾತ್ರದ ಕಾಂಕ್ರೀಟ್ ಬೀಮ್ಸ್‌ಗಳು ಕ್ರೇನ್ ಇನ್ನಿತರ ವಾಹನಗಳ ಮೇಲೆ ಬಿದ್ದರೂ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಹೆಗಡೆ ಹಾಗೂ ಮಿರ್ಜಾನ ನಡುವೆ ತಾರಿಬಾಗಿಲ ಧಕ್ಕೆಯಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆಯನ್ನು ಕುಂದಾಪುರದ ಸೈಂಟ್ ಅಂಟೋನಿ ಕನ್‌ಸ್ಟ್ರಕ್ಷನ್‌ವರು ಗುತ್ತಿಗೆ ಪಡೆದು ನಿರ್ಮಿಸುತ್ತಿದ್ದು, ಆರಂಭದಿಂದಲೂ ಕಾಮಗಾರಿಯ ಗುಣಮಟ್ಟದ ಬಗ್ಗೆ ಸ್ಥಳೀಯರು ಎಚ್ಚರಿಸುತ್ತಲೇ ಬಂದಿದ್ದರು. ಆದರೆ ಜನರ ಎಚ್ಚರಿಕೆಯನ್ನು ಕಡೆಗಣಿಸಿದ ಗುತ್ತಿಗೆ ಕಂಪನಿ ಹಾಗೂ ಸಂಬಂಧಪಟ್ಟ ಅಧಿಕಾರಿ ವರ್ಗ ಇದೀಗ ಹೆಚ್ಚಿನ ಬೆಲೆ ತೆರಬೇಕಾಗಿ ಬಂದಿದೆ.ಘಟನೆಯಲ್ಲಿ ಒಂದು ಕ್ರೇನ್, ಹಿಟಾಚಿ, ಸ್ಕೂಟರ್ ಹಾನಿಗೊಳಗಾಗಿದ್ದು, ಯಾವುದೇ ಕಾರ್ಮಿಕರಿಗೆ ಹಾನಿಯಾಗಿಲ್ಲ. ಕ್ರೇನ್ ಮೂಲಕ ಕಾಂಕ್ರೀಟ್ ಬೀಮ್ಸ್‌ಗಳನ್ನು ಕಂಬಗಳ ಮೇಲೆ ಇರಿಸುವಾಗ ಬೇರೆ ಕಾಂಕ್ರೀಟ್ ಬೀಮ್ಸ್‌ಗೆ ಬಡಿದಿದ್ದೇ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ ಭೇಟ ನೀಡಿ ಪರಿಶೀಲಿಸಿದ್ದಾರೆ.ಸೇತುವೆಯ ಕಂಬಗಳ ನಡುವೆ ಹಾಕಲಾಗಿದ್ದ ಎರಡು ಕಾಂಕ್ರೀಟ್ ಬೀಮ್ಸ್‌ಗಳ ಮೇಲೆ ಸ್ಲ್ಯಾಬ್ ಹಾಕುವ ಮುನ್ನವೇ ಸ್ವಯಂ ಭಾರ ತಾಳದೇ ಮುರಿದು ಬಿದ್ದಿದೆ. ಇದರರ್ಥ ಕಾಮಗಾರಿ ತೀರಾ ಕಳಪೆಯಾಗಿರುವುದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ವೇಳೆ ಊರ ಜನರ ಜತೆ ಕಾಮಗಾರಿ ಗುತ್ತಿಗೆ ಕಂಪನಿ ಸಿಬ್ಬಂದಿ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಕೂಡಲೇ ಕಾಮಗಾರಿಯ ಬಗ್ಗೆ ನಿಗಾ ವಹಿಸಿ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಕಾಮಗಾರಿ ತಡೆಹಿಡಿಯುವುದಾಗಿ ಊರ ಜನರ ಪರವಾಗಿ ಪಾಂಡು ಪಟಗಾರ ಎಂಬವರು ಹೇಳಿದ್ದಾರೆ. ಗುತ್ತಿಗೆ ಕಂಪನಿಗೆ ನೋಟಿಸ್: ನಬಾರ್ಡ್ ಯೋಜನೆಯಡಿ ₹೧೮.೨೫ ಕೋಟಿ ವೆಚ್ಚದಲ್ಲಿ ತಾರಿಬಾಗಿಲದಲ್ಲಿ ಅಘನಾಶಿನಿ ನದಿಗೆ ನಿರ್ಮಿಸುತ್ತಿರುವ ಸೇತುವೆಯ ಕಾಂಕ್ರೀಟ್ ಬೀಮ್ಸ್‌ಗಳನ್ನು ಇಡುವಾಗ ಕ್ರೇನ್ ನಿಂತ ಜಾಗದಿಂದ ಅಚಾನಕ್ ಜಾರಿದೆ. ಹೀಗಾಗಿ ಬೀಮ್ಸ್‌ಗಳು ಒಂದಕ್ಕೊಂದು ಎಳೆದುಕೊಂಡು ಪಿಲ್ಲರ್‌ಗಳಿಂದ ಜಾರಿ ಬಿದ್ದು ಮುರಿದಿದೆ. ಯಾವುದೇ ಹೆಚ್ಚಿನ ಅಪಾಯವಾಗಿಲ್ಲ. ಸ್ಥಳ ಪರಿಶೀಲನೆ ನಡೆಸಿ, ಸಂಪೂರ್ಣ ಮಾಹಿತಿ ಪಡೆದಿದ್ದೇವೆ. ಆದರೆ ಘಟನೆ ಬಗ್ಗೆ ಗುತ್ತಿಗೆ ಕಂಪನಿಗೆ ನೋಟಿಸ್ ನೀಡುತ್ತಿದ್ದೇವೆ ಎಂದು ಪಿಡಬ್ಲ್ಯುಡಿ ಎಇಇ ಸೋಮನಾಥ ತಿಳಿಸಿದರು.
ಆರೋಪದಲ್ಲಿ ಹುರುಳಿಲ್ಲ: ಅಘನಾಶಿನಿ ನದಿಗೆ ತಾರಿಬಾಗಿಲದಲ್ಲಿ ನಿರ್ಮಿಸುತ್ತಿರುವ ಸೇತುವೆಯಲ್ಲಿ ಘಟಿಸಿದ ಅವಘಡದ ಬಗ್ಗೆ ತಿಳಿದ ಕೂಡಲೇ ಸ್ಥಳಕ್ಕೆ ಉಪವಿಭಾಗಾಧಿಕಾರಿ ಸಹಿತ ಇತರ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದ್ದೇನೆ. ಕ್ರೇನ್ ಮೂಲಕ ಕಾಮಗಾರಿ ನಡೆಸುವಾಗ ಆದ ಆಕಸ್ಮಿಕದಿಂದ ಬೀಮ್ಸ್‌ಗಳು ಪಿಲ್ಲರ್ಂದ ಜಾರಿ ಬೀಳುವಂತಾಯಿತು ಎನ್ನುವುದು ಸ್ಪಷ್ಟವಾಗಿದೆ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲದಿರುವುದು ದೇವರ ದಯೆ. ಸೇತುವೆ ಬೀಮ್ಸ್ ಕುಸಿದಿದ್ದು ಕಳಪೆ ಕಾಮಗಾರಿಯಿಂದ ಎಂಬ ಆರೋಪಕ್ಕೆ ಹುರುಳಿಲ್ಲ. ಕ್ರೇನ್ ಬಡಿದು ಬೀಮ್ಸ್ ಜಾರಿದೆ. ಮುಂದೆ ಎಚ್ಚರಿಕೆಯಿಂದ ಮತ್ತು ಕಾಳಜಿಯಿಂದ ಕೆಲಸ ಮಾಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.