ಜಗತ್ತಿಗೆ ಮಾದರಿಯಾಗುವುದಕ್ಕಿಂತ ಮಕ್ಕಳಿಗೆ ಮಾದರಿಯಾಗಿ: ಡಿಸಿ ಕುಮಾರಸ್ವಾಮಿ

KannadaprabhaNewsNetwork |  
Published : Jan 20, 2024, 02:04 AM IST
ಚಿತ್ರದುರ್ಗ ಪೋಟೋ ಸುದ್ದಿ2222 | Kannada Prabha

ಸಾರಾಂಶ

ಕರ್ನಾಟಕದಲ್ಲಿ ಸರ್ವಜ್ಞ ಹೇಗೋ ಮಹಾರಾಷ್ಟ್ರದ ನಾಮದೇವ, ತಮಿಳುನಾಡಿನ ತಿರುವಳ್ಳುವರ್ ಇವರೆಲ್ಲಾ ಸಮಕಾಲೀನರು. ಹಾಗೇ, ಆಂಧ್ರಪ್ರದೇಶದಲ್ಲಿ ಮಹಾಯೋಗಿ ವೇಮನರೂ ತಮ್ಮ ಉತ್ಕೃಷ್ಟ ರಚನೆಗಳ ಮೂಲಕ ಸಮಾಜದ ಕಂದಾಚಾರ, ಮೂಢ ನಂಬಿಕೆಯನ್ನು ಪ್ರಶ್ನಿಸಿದ ಮಹಾನುಭಾವ.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಹುಟ್ಟು ಆಕಸ್ಮಿಕ, ಇಂತಹದೇ ಜಾತಿಯಲ್ಲಿ ಹುಟ್ಟಬೇಕು ಎಂದು ಯಾರು ಅರ್ಜಿ ಹಾಕುವುದಿಲ್ಲ. ಎಲ್ಲರೂ ಹುಟ್ಟುತ್ತಾ ಮಾನವರಾಗಿ ಇರುತ್ತಾರೆ. ನಂತರ ಸ್ವಭಾವಗಳಿಂದ ಅಲ್ಪ ಮಾನವರಾಗುತ್ತಾರೆ. ಮಹನೀಯರಾದ ಕೆಲವೇ ಜನರು ವಿಶ್ವಮಾನವರಾಗುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ, ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಮಾತನಾಡಿದ ಅವರು, ಮಹಾತ್ಮರ ಜೀವನ ಸಂದೇಶ ಮಕ್ಕಳಿಗೆ ತಿಳಿಯಪಡಿಸಬೇಕು. ಈ ಉದ್ದೇಶದಿಂದಲೇ ಸರ್ಕಾರ ಮಹನೀಯರ ಜಯಂತಿ ಆಚರಿಸುತ್ತಿದೆ ಎಂದರು. ಆಂಧ್ರಪ್ರದೇಶದ ಮಹಾಯೋಗಿ ವೇಮನ, ಕರ್ನಾಟಕದ ಸರ್ವಜ್ಞ, ಮಹಾರಾಷ್ಟ್ರದ ನಾಮದೇವ, ತಮಿಳುನಾಡಿನ ತಿರುವಳ್ಳುವರ್ ಸಮಕಾಲೀನರು. ತಮ್ಮ ರಚನೆಗಳ ಮೂಲಕ ಸಮಾಜದ ಕಂದಾಚಾರ, ಮೂಢನಂಬಿಕೆ, ಸೋಗಲಾಡಿತನವನ್ನು ಪ್ರಶ್ನಿಸಿದರು. ಶೇಷ್ಠ ಮಾನವೀಯ ಮೌಲ್ಯಗಳನ್ನು ಸಾರುವುದರ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಮ್ಮ ನಡೆ ನುಡಿಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಆದರೆ ಈ ಮಹನೀಯರು ನಡೆ ನುಡಿಗಳಲ್ಲಿ ಒಂದೇ ಆಗಿ ಬದುಕಿದರು. ನಾವು ಜಗತ್ತಿಗೆ ಮಾದರಿಯಾಗುವುದಕ್ಕಿಂತ ನಮ್ಮ ಮಕ್ಕಳಿಗೆ ಮಾದರಿಯಾಗಬೇಕು ಎಂದು ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಸರ್ಕಾರಿ ಕಲಾ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ.ಜಿ.ಎನ್.ಯಶೋಧರ ಮಾತನಾಡಿ, ಮಹಾತ್ಮರನ್ನು ಜಾತಿ, ಮತ, ವರ್ಗಗಳಿಗೆ ಸೀಮಿತ ಮಾಡಬಾರದು. ಭೂಪಾಲ ವಂಶದಲ್ಲಿ, ಅಂದರೆ ರಾಜ ಮನೆತನದಲ್ಲಿ ಹುಟ್ಟಿದ ವೇಮನರು ಶರೀರದ ಬಗ್ಗೆ ವೈರಾಗ್ಯ ತಾಳಿ, ಆತ್ಮಸುಖ ಬಯಸಿ ಜ್ಞಾನೋದಯ ಪಡೆದರು. ವೇಮನರ ಈ ಬದಲಾವಣೆಗೆ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ ಕಾರಣವಾದರು. ಸರಳವಾದ ತೆಲುಗು ಭಾಷೆಯಲ್ಲಿ ವೇಮನರು ತಮ್ಮ ಅನುಭವ ಹಾಗೂ ಜ್ಞಾನ ವಚನಗಳ ಮೂಲಕ ಸಾದರ ಪಡಿಸಿದ್ದಾರೆ. ‘ವಿಶ್ವದಾಭಿ ರಾಮ ವಿನೂರ ವೇಮ’ ಎಂಬುದು ಇವರ ಅಂಕಿತನಾಮವಾಗಿದೆ ಎಂದರು. ರೆಡ್ಡಿ ಸಮಾಜದ ಹಿರಿಯ ಮುಖಂಡ ಗೋವಿಂದ ರೆಡ್ಡಿ ಮಾತನಾಡಿ, ಸಿ.ಪಿ.ಬ್ರಾನ್ ಎಂಬುವವರು ವೇಮನರ ಕವಿತೆಗಳನ್ನು ಸಂಗ್ರಹಿಸಿ ಪ್ರಕಟಿಸಿದರು. ಆಂಧ್ರ ಪ್ರದೇಶ ಹಾಗೂ ಕರ್ನಾಟಕದಲ್ಲಿ ವೇಮನರ ಕವಿತೆಗಳು ಜನ ಜನಿತವಾಗಿವೆ. ಜೀವನದ ನಶ್ವರತೆ ತಿಳಿದ ವೇಮನರು ನಗ್ನ ವೈರಾಗಿಯಾಗಿ ನಾಡಲ್ಲಿ ಸಂಚರಿಸಿ ಲೋಕಜ್ಞಾನ ಹರಡಿದ್ದಾರೆ ಎಂದರು.

ಮೊಳಕಾಲ್ಮೂರು ತಾಲೂಕು ತಮಕೊರ್ಲಹಳ್ಳಿ ಕೆ.ಓ. ಶಿವಣ್ಣ ಮತ್ತು ತಂಡದವರು ಜಯಂತಿ ಕಾರ್ಯಕ್ರಮದಲ್ಲಿ ಗೀತಗಾಯನ ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೆಶಕ ಎಸ್.ಕೆ. ಮಲ್ಲಿಕಾರ್ಜುನ್, ತಹಸೀಲ್ದಾರ್ ಡಾ.ನಾಗವೇಣಿ, ರೆಡ್ಡಿ ಸಮಾಜದ ಜಿ. ಹನುಮಂತರೆಡ್ಡಿ, ತಿಪ್ಪೇಸ್ವಾಮಿ ರೆಡ್ಡಿ, ಜಿ. ಅಶ್ವತ್ಥನಾರಾಯಣ ರೆಡ್ಡಿ, ವೆಂಕಟೇಶ್ ರೆಡ್ಡಿ, ನಾಡಿಗರ ರೆಡ್ಡಿ, ಕಟ್ಟಾ ತಿಪ್ಪಾರೆಡ್ಡಿ, ವಿಜಯಕುಮಾರ ರೆಡ್ಡಿ, ಧನಂಜಯ ರೆಡ್ಡಿ, ಟಿ.ಕೆ. ತಿಮ್ಮಾರೆಡ್ಡಿ ಸೇರಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಂಗ ನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ 25 ಪುಸ್ತಕಗಳ ಲೋಕಾರ್ಪಣೆ, ಬೆರಗು ಪ್ರಶಸ್ತಿ ಪ್ರದಾನ
ಯಶಸ್ಸು ನೆತ್ತಿಗೆರಬಾರದು