ಕೊಟ್ಟೂರು: ಜಿಲ್ಲೆಯಲ್ಲಿ ನಮ್ಮ ಪಕ್ಷ ಪ್ರಬಲವಾಗಿದ್ದು, ಸಂಘಟನೆಯೊಂದಿಗೆ ಹೆಚ್ಚು ಕಾರ್ಯಕರ್ತರನ್ನು ಹೊಂದಿದ್ದು, ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಮರ್ಥ್ಯ ಹೊಂದಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬದಾಮಿ ಮೃತ್ಯುಂಜಯ ಹೇಳಿದರು.
ಸಂಘಟನೆಯಲ್ಲಿ ಹಿಂದುಳಿದಿದ್ದ ಹೂವಿನ ಹಡಗಲಿ, ಹರಪನಹಳ್ಳಿ ಕ್ಷೇತ್ರಗಳಲ್ಲಿ ಉತ್ತಮ ಸಂಘಟನೆಯೊಂದಿಗೆ ಜೆಡಿಎಸ್ ಪ್ರಬಲವಾಗಿದೆ. ಹೈಕಮಾಂಡ್ ಮಾರ್ಗದರ್ಶನದಲ್ಲಿ ಬಿಜೆಪಿಯೊಂದಿಗೆ ಎಲ್ಲ ಚುನಾವಣೆಗಳನ್ನು ಒಂದಾಗಿ ಎದುರಿಸಲಾಗುವುದು. ತಾಲೂಕಿನಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಶೀಘ್ರದಲ್ಲಿ ಪಕ್ಷಕ್ಕೆ ಸಮರ್ಥ ವ್ಯಕ್ತಿಯನ್ನು ತಾಲೂಕು ಅಧ್ಯಕ್ಷರನ್ನಾಗಿ ಹಾಗೂ ವಿವಿಧ ಹುದ್ದೆಗಳಿಗೆ ಕಾರ್ಯಕರ್ತರನ್ನು ನೇಮಕ ಮಾಡಲಾಗುವುದು ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ನೇಮರಾಜನಾಯ್ಕರಿಗೆ ಟಿಕೆಟ್ ಸಿಗದ ಕಾರಣ, ಎಲ್ಲ ನಾಯಕರು ಪ್ರಯತ್ನಿಸಿ ಜೆಡಿಎಸ್ ಟಿಕೆಟ್ ತಂದು ಜಯ ಗಳಿಸಿದ್ದೆವು. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹತ್ತಿರದಲ್ಲಿದ್ದು, ಪಕ್ಷವನ್ನು ತಳ ಮಟ್ಟದಿಂದ ಸಂಘಟನೆ ಮಾಡುವುದು ಅವಶ್ಯವಿದೆ. ನಮ್ಮ ಶಾಸಕರು ೧೪೦೦ ಕೋಟಿ ರೂ.ಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ. ಸಾಮಾನ್ಯ ಕಾರ್ಯಕರ್ತನನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುವುದು. ಯಾವುದೇ ಗೊಂದಲವಿಲ್ಲದೇ ಮುಂದಿನ ಎಲ್ಲ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಿ ಎನ್‌ಡಿಎ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.ಸ್ಥಳೀಯ ಯುವ ಮುಖಂಡ ಎಂಎಂಜೆ ಶೋಭಿತ್ ಮಾತನಾಡಿ, ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸುವುದು, ಶಿಸ್ತು ಮೂಡಿಸುವುದು ಅವಶ್ಯವಿದೆ. ಕ್ಷೇತ್ರದಲ್ಲಿರುವ ನಮ್ಮ ಪಕ್ಷದ ಶಾಸಕರು, ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ಸಭೆಗಳನ್ನು ನಡೆಸಿ ಉತ್ತೇಜನ ಮೂಡಿಸಬೇಕು. ಇದರಿಂದ ಕಾರ್ಯಕರ್ತರು ಸಂಘಟನಾತ್ಮಕವಾಗಿ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಬಿಜೆಪಿ, ಜೆಡಿಎಸ್ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಬೇಕು ಎಂದರು.
ಮುಖಂಡರಾದ ಕೃಷ್ಣಮೂರ್ತಿ, ಪಿ.ಸುಧಾಕರಗೌಡ ಪಾಟೀಲ್, ವಿಜಯನಗರ ಕೊಟ್ರೇಶ್, ಬಿಎಸ್‌ಆರ್ ಮೂಗಣ್ಣ ಮಾತನಾಡಿದರು. ಜೆ.ಡಿ.ಎಸ್‌ನ ಹರಪನಹಳ್ಳಿ ಕ್ಷೇತ್ರ ಅಧ್ಯಕ್ಷ ಮಲಕಪ್ಪ, ಹೂ.ಹಡಗಲಿ ಅಧ್ಯಕ್ಷ ಸೋಮಪ್ಪ ಲಮಾಣಿ, ಪಂಪಾಪತಿ, ಪರಮೇಶ್ವರ, ನಬಿ, ಬಾವಿಕಟ್ಟಿ ಶಿವಾನಂದ ಇದ್ದರು. ಜೆಡಿಎಸ್ ಮುಖಂಡ ಕನ್ನಿಹಳ್ಳಿ ಚಂದ್ರಶೇಖರ ನಿರ್ವಹಿಸಿದರು.