ಕುಡಿವ ನೀರಿನ ಸಮಸ್ಯೆ ವರದಿಯಾದ ಕೂಡಲೇ ಎಚ್ಚೆತ್ತುಕೊಳ್ಳಿ: ಡಾ. ಕೆ.ವಿ. ತ್ರಿಲೋಕಚಂದ್ರ

KannadaprabhaNewsNetwork |  
Published : May 24, 2025, 12:15 AM IST
ಬಳ್ಳಾರಿ ಜಿಪಂ ಸಭಾಂಗಣದಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು. | Kannada Prabha

ಸಾರಾಂಶ

ಬಳ್ಳಾರಿ ನಗರದ ಜಿಪಂ ನಜೀರ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಸೇರಿದಂತೆ) ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳ್ಳಾರಿ: ಕುಡಿಯುವ ನೀರು ಸಮಸ್ಯೆ ತಲೆದೋರುವ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಪಂ ನಜೀರ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಸೇರಿದಂತೆ) ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂಗಾರು ಪೂರ್ವ ಮಳೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ರಾಜಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಪಾಲಿಕೆ ಆಯುಕ್ತರು ಹಾಗೂ ತಾಪಂ ಇಒಗಳು ಈ ಕುರಿತು ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜು ಮೂಲಗಳ ಬಗ್ಗೆ ನಿಗಾ ವಹಿಸಬೇಕು. ಕಲುಷಿತ ನೀರು ಕಲಬೆರಕೆಗೊಳ್ಳದಂತೆ ಎಚ್ಚರ ವಹಿಸಬೇಕು. ಮುಖ್ಯವಾಗಿ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಸೋರಿಕೆ ಕಂಡುಬಂದಲ್ಲಿ ಕೂಡಲೇ ದುರಸ್ತಿಗೊಳಿಸಲು ಕ್ರಮವಹಿಸಬೇಕು. ಪೂರ್ವ ಮುಂಗಾರು ಆರಂಭಗೊಂಡ ಹಿನ್ನಲೆಯಲ್ಲಿ ಮಳೆಯಿಂದಾಗುವ ಹಾನಿಯನ್ನು ಸೂಕ್ತ ಪರಿಶೀಲನೆ ನಡೆಸಿ 72 ಗಂಟೆಯೊಳಗೆ ಹಾನಿ ಪರಿಹಾರ ನೀಡಬೇಕು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿಯನ್ವಯ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಂಭವವಿದ್ದು, ಈಗಾಗಲೇ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಗಾಗಿ ಆಯಾ ತಾಲೂಕು ತಹಸೀಲ್ದಾರರು ಹಾಗೂ ಕಂದಾಯ ಅಧಿಕಾರಿಗಳು ಈ ಕುರಿತು ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ರೈತರಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಯಾಗದಂತೆ ಎಚ್ಚರ ವಹಿಸಬೇಕು. ದಾಸ್ತಾನು ಲಭ್ಯತೆ ಕುರಿತು ರೈತರಿಗೆ ಮಾಹಿತಿ ನೀಡಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿನ ಕುರಿತು ಮಾಹಿತಿ ಪ್ರದರ್ಶಿಸಬೇಕು. ರೈತರು ಕಾಯುವುದು, ನೂಕು-ನುಗ್ಗಲು ಹಾಗೂ ಇತರ ವ್ಯವಸ್ಥೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಮೇ 29ರಿಂದ ಶಾಲಾ ವಿಭಾಗದ ತರಗತಿಗಳು ಆರಂಭಗೊಳ್ಳಲಿದ್ದು, ಎಲ್ಲ ಶಾಲೆಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು. ಪಠ್ಯ-ಪುಸ್ತಕ ವಿತರಣೆ ಮಾಡಬೇಕು. ಶಾಲೆಗಳ ಅವರಣದಲ್ಲಿ ಹೊರಗಿನವರು ಬಾರದಂತೆ ನೋಡಿಕೊಳ್ಳಬೇಕು. ಈ ಕುರಿತು ಬಿಆರ್‌ಒ ಮತ್ತು ಸಿಆರ್‌ಪಿಗಳಿಗೆ ನಿರ್ದೇಶನ ನೀಡಬೇಕು. ಜಿಲ್ಲೆಯಲ್ಲಿ ಶಾಲೆಗಳ ಆಸ್ತಿ ನೋಂದಣಿಗೆ ಬಾಕಿಯಿರುವ ಶಾಲೆಗಳ ಮಾಹಿತಿ ನೀಡಬೇಕು. ಈ ಬಗ್ಗೆ ಆಯಾ ತಾಲೂಕಿನ ತಹಸೀಲ್ದಾರರಿಗೆ ಸೂಚಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಲೋಕೋಪಯೋಗಿ ಮತ್ತು ಪಂಚಾಯತ್‌ರಾಜ್ ಅಭಿವೃದ್ಧಿ ಇಲಾಖೆಗಳ ಕಾಮಗಾರಿಗಳು ಗುಣಮಟ್ಟತೆ ಕುಂಠಿತಗೊಳ್ಳುತ್ತಿವೆ. ಶಾಲೆಯೊಂದರ ರಿಪೇರಿ ಕಾಮಗಾರಿಯು ಮತ್ತೆ ರಿಪೇರಿಗೆ ಬಂದಿದ್ದು, ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ತ್ರಿಲೋಕ್‌ಚಂದ್ರ, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಅವರಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಜಿಪಂ ಉಪಕಾರ್ಯದರ್ಶಿ ಗಿರಿಜಾ ಶಂಕರ, ಜಿಪಂ ಯೋಜನಾ ನಿರ್ದೇಶಕ ವಾಗೀಶ ಶಿವಾಚಾರ್ಯ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಪಂ ಇಒಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ