ದೇಶದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಸ್ವದೇಶಿ ಚಿಂತನೆ ಜೀವನದಲ್ಲಿ ಅಳವಡಿಸಿಕೊಂಡರೆ ಬಹುದೊಡ್ಡ ದೇಶಸೇವೆ ಮಾಡಿದಂತೆಯೇ ಆಗುತ್ತದೆ.

ಹೊಸಪೇಟೆ: ಇನ್ನೊಬ್ಬರತ್ತ ಮಾನವೀಯತೆ ತೋರುವುದರಿಂದ ನಾವು ಮನುಷ್ಯರಾಗಿ ಬದುಕಲು ಸಾಧ್ಯವಿದೆ ಎಂದು ಹರಿದ್ವಾರ ಪತಂಜಲಿ ಯೋಗ ಪೀಠದ ಸಾಧ್ವಿ ದೇವಪ್ರಿಯಾ ದೀದೀಜಿ ಹೇಳಿದರು.

ಇಲ್ಲಿನ ಅನಂತಶಯನಗುಡಿ ಸಮೀಪದ ರಾಜಾರಾಮ್‌ ಜೀ ಆಶ್ರಮದಲ್ಲಿ ಬುಧವಾರ ಕರ್ನಾಟಕ ಪ್ರವಾಸದ ಭಾಗವಾಗಿ ಒಂಭತ್ತು ಜಿಲ್ಲೆಗಳ ಯೋಗ ಪ್ರಭಾರಿಗಳು, ಪ್ರಮುಖ ಕಾರ್ಯಕರ್ತರೊಂದಿಗೆ ಮಹಾ ಸತ್ಸಂಗ ಸಭೆಯಲ್ಲಿ ಮಾತನಾಡಿದರು.

ಲೋಕದಲ್ಲಿ ಮೂರು ರೀತಿಯ ಜನ ಇರುತ್ತಾರೆ, ಪಶುಗಳಂತೆ ಬದುಕುವವರು, ಮನುಷ್ಯರಂತೆ ಇರುವವರು, ದೇವರಂತೆ ಜೀವನ ಸಾಗಿಸುವವರು ಇರುತ್ತಾರೆ. ನಾವು ಸಾಧು, ಸನ್ಯಾಸಿಗಳಂತೆ ಜೀವನ ಸಾಗಿಸಲು ಸಾಧ್ಯವಾಗದೆ ಹೋದರೂ ಉತ್ತಮ ಮನುಷ್ಯರಾಗಿ ಮಾನವೀಯತೆಯಿಂದ ಬದುಕಿದರೆ ಸಾಕು ಎಂದರು.

ದೇಶದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಸ್ವದೇಶಿ ಚಿಂತನೆ ಜೀವನದಲ್ಲಿ ಅಳವಡಿಸಿಕೊಂಡರೆ ಬಹುದೊಡ್ಡ ದೇಶಸೇವೆ ಮಾಡಿದಂತೆಯೇ ಆಗುತ್ತದೆ. ನಮ್ಮ ಸುತ್ತಮುತ್ತಲಿನ ಉತ್ತಮ ಪರಿಸರವನ್ನು ಉಳಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನಮ್ಮಿಂದ ಉತ್ತಮ ಪರಿಸರ ಸಿಗುವಂತಾಗಬೇಕು. ನಾವು ಮತ್ತು ನಮ್ಮ ಮಕ್ಕಳಿಗೆ ದೇಶ ಪ್ರೇಮವನ್ನು ಬೆಳಸಬೇಕು. ಭಗತ್ ಸಿಂಗ್‌, ಸುಖದೇವ್ ಸೇರಿದಂತೆ ರಾಷ್ಟ್ರನಾಯಕರು ನಮಗೆಲ್ಲ ಆದರ್ಶವಾಗಬೇಕು ಎಂದು ಹೇಳಿದರು.

ಯೋಗ ಪೀಠದ ದಕ್ಷಿಣ ಭಾರತ ಪ್ರಭಾರಿ ಸ್ವಾಮಿ ಪರಮಾರ್ಥ ದೇವ ಜೀ ಮಾತನಾಡಿ, ಸ್ವದೇಶಿ ಮಂತ್ರವನ್ನೇ ಪತಂಜಲಿ ಯೋಗ ಪೀಠ ಸದಾ ಪಠಿಸುತ್ತದೆ, ಇಂದು 5 ಸಾವಿರಕ್ಕೂ ಅಧಿಕ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದ್ದು, 5 ಲಕ್ಷ ಮಂದಿಗೆ ನೇರ ಹಾಗೂ ಇನ್ನೂ ಲಕ್ಷಾಂತರ ಮಂದಿಗೆ ಪರೋಕ್ಷ ಉದ್ಯೋಗ ಲಭಿಸಿದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಪ್ರಯತ್ನಿಸಬೇಕು ಎಂದರು.

ಇದಕ್ಕೂ ಮೊದಲು ಬಾಬಾ ರಾಮದೇವ್ ಗುರೂಜಿ ಅವರು ಹರಿದ್ವಾರದಿಂದ ವಿಡಿಯೊ ಕಾನ್ಫೆರೆನ್ಸ್ ಮೂಲಕ ಸುಮಾರು 40 ನಿಮಿಷಗಳ ಕಾಲ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

ಪತಂಜಲಿ ಯೋಗ ಸಮಿತಿಯ ರಾಜ್ಯ ಉಸ್ತುವಾರಿ ಭವರ್‌ಲಾಲ್ ಆರ್ಯ, ರಾಜ್ಯ ಸಮಿತಿ ಸದಸ್ಯರಾದ ಡಾ. ಎಸ್‌.ಬಿ. ಹಂದ್ರಾಳ, ಸಂಜಯ ಕುಸ್ತಿಗಾರ್, ಶರಣಪ್ಪ, ಶಿವಾನಂದ ಸಾಲಿಮಠ, ರಾಜ್ಯ ಮಹಿಳಾ ಪ್ರಭಾರಿ ಶ್ರೀದೇವಿ, ಯುವ ಭಾರತ ರಾಜ್ಯ ಪ್ರಭಾರಿ ಕಿರಣ್‌ ಕುಮಾರ್, ಶ್ರೀಪಾದ ಭೂಪಾಳ, ಶ್ರೀಲಕ್ಷ್ಮೀ, ಪ್ರೊ. ಎಫ್‌.ಟಿ. ಹಳ್ಳಿಕೇರಿ, ವೀರೇಶ್, ಅನಂತ ಜೋಶಿ, ವೆಂಕಟೇಶ್‌ ವಾಸಿ, ಉಮಾ ವಿಶ್ವನಾಥ್‌, ಗೌರಮ್ಮ, ಚಂದ್ರಿಕಾ, ಶೈಲಜಾ ಉಪಸ್ಥಿತರಿದ್ದರು.