ಹರಪನಹಳ್ಳಿ: ಎಸ್‌ಐಆರ್ ತರುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನೇಕರ ಮತದಾನದ ಹಕ್ಕನ್ನು ಕಸಿಯುವ ಹುನ್ನಾರ ನಡೆಸಿದೆ. ಇದನ್ನು ಅರ್ಥ ಮಾಡಿಕೊಂಡು ಮತದಾರರ ಪಟ್ಟಿಯಿಂದ ಯಾರ ಹೆಸರೂ ಕೈಬಿಡದಂತೆ ಜಾಗೃತಿ ವಹಿಸಿ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.ಅವರು ನಗರದ ಕಾಶಿ ಬಡಾವಣೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಬ್ಲಾಕ್ ಅಧ್ಯಕ್ಷರು, ಬೂತ್ ಏಜಂಟರು, ಬಿಎಲ್‌ಒ-2 ಅವರಿಗೆ ಎಸ್‌ಐಆರ್ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಜಿಪಂ, ತಾಪಂ, ಗ್ರಾಪಂ ಚುನಾವಣೆಗಳು ಬರುತ್ತವೆ. ಓಟು ಇಲ್ಲ ಅಂದರೆ ಯಾರ ಹತ್ತಿರ ಓಟು ಹಾಕಿಸಿಕೊಳ್ಳುತ್ತೀರಿ. ನಮ್ಮ ಹಕ್ಕನ್ನು ಕಸಿಯುವ ಕೆಲಸ ಮಾಡುವವರಿಗೆ ತಕ್ಕ ಉತ್ತರ ಕೊಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ಮತದಾನದಿಂದ ಕೆಲವರನ್ನು ವಂಚಿತ ಮಾಡುವ ಉದ್ದೇಶದಿಂದ ಬಿಜೆಪಿಯವರು ಎಸ್‌ಐಆರ್‌ನ್ನು ತಂದಿದ್ದಾರೆ. ಬಿಎಲ್‌ಎಗಳು ಒಂದು ತಿಂಗಳು ತಾವು ಹಾಗೂ ತಮ್ಮ ಕುಟುಂಬದ ಮತಗಳನ್ನು ಮತಪಟ್ಟಿಯಲ್ಲಿ ಸೇರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.ಮತಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ರೇಷನ್ ಕಾರ್ಡ್, ಆಧಾರ್ ಕಾರ್ಡ ಸಿಗುವುದಿಲ್ಲ. ಇವು ಇಲ್ಲದಿದ್ದರೆ ಸರ್ಕಾರಿ ಸೌಲಭ್ಯಗಳು ಸಹ ದೊರಕುವುದಿಲ್ಲ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೊಳ್ಳುವಂತೆ ನೋಡಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
ಕಾಂಗ್ರೆಸ್ ಕಾನೂನು ಘಟಕದ ಟಿ.ವೆಂಕಟೇಶ ಮಾತನಾಡಿ, ಕೇಂದ್ರ ಸರ್ಕಾರದ ಕೆಟ್ಟ ಆಲೋಚನೆಯಿಂದ ಎಸ್‌ಐಆರ್ ನಡೆಯುತ್ತಿದೆ. ದೇಶದ ವ್ಯವಸ್ಥೆ ಬದಲಾವಣೆ ಮಾಡಲು ಹುನ್ನಾರ ನಡೆದಿದೆ. ಅದಕ್ಕೆ ಅವಕಾಶ ಕೊಡದೇ ಪ್ರತಿಯೊಬ್ಬರು ಮತಪಟ್ಟಿಯಲ್ಲಿ ತಮ್ಮ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಹೆಸರುಗಳನ್ನು ಸೇರಿಸಿ ಎಂದು ಹೇಳಿದರು.