ಕೆ.ಎಸ್‌. ಈಶ್ವರಪ್ಪ ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು: ಶಾಸಕ ಹೆಬ್ಬಾರ

KannadaprabhaNewsNetwork |  
Published : Jun 24, 2026, 03:30 AM IST
ಫೋಟೋ ಜೂ.೨೩ ವೈ.ಎಲ್.ಪಿ. ೦೧ | Kannada Prabha

ಸಾರಾಂಶ

ವಿವಾದಾತ್ಮಕ ಹಾಗೂ ಬೇಜವಾಬ್ದಾರಿ ಹೇಳಿಕೆಗಳಿಂದಲೇ ಗುರುತಿಸಿಕೊಂಡಿರುವ ಕೆ.ಎಸ್. ಈಶ್ವರಪ್ಪ ಸಂಪೂರ್ಣ ರಾಜಕೀಯ ದಿವಾಳಿತನಕ್ಕೆ ತಲುಪಿರುವುದು ಅವರ ಇತ್ತೀಚಿನ ಹೇಳಿಕೆಗಳಿಂದ ಸ್ಪಷ್ಟವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಯಲ್ಲಾಪುರ

ವಿವಾದಾತ್ಮಕ ಹಾಗೂ ಬೇಜವಾಬ್ದಾರಿ ಹೇಳಿಕೆಗಳಿಂದಲೇ ಗುರುತಿಸಿಕೊಂಡಿರುವ ಕೆ.ಎಸ್. ಈಶ್ವರಪ್ಪ ಸಂಪೂರ್ಣ ರಾಜಕೀಯ ದಿವಾಳಿತನಕ್ಕೆ ತಲುಪಿರುವುದು ಅವರ ಇತ್ತೀಚಿನ ಹೇಳಿಕೆಗಳಿಂದ ಸ್ಪಷ್ಟವಾಗುತ್ತಿದೆ. ಅವರು ತಮ್ಮ ಮಾನಸಿಕ ಸ್ಥಿಮಿತವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಅವರನ್ನು ಕೂಡಲೇ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ೧೭ ಕಾಂಗ್ರೆಸ್ ಶಾಸಕರನ್ನು ಹಣ ನೀಡಿ ಖರೀದಿಸಲಾಗಿತ್ತು ಎಂಬ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆ ಸಂಪೂರ್ಣ ಆಧಾರ ರಹಿತ, ಬಾಲಿಶ. ಅವರ ತಲೆ ಸರಿಯಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ಒಂದು ವೇಳೆ ಅವರ ಹೇಳಿಕೆಯಲ್ಲಿ ಸತ್ಯಾಂಶವಿದ್ದರೆ, ಯಾರು ಹಣ ನೀಡಿದರು? ಯಾರು ಹಣ ಪಡೆದವರು? ಎಷ್ಟು ಹಣ ನೀಡಲಾಯಿತು? ಎಲ್ಲಿ ವ್ಯವಹಾರ ನಡೆಯಿತು? ಎಂಬುದರ ಕುರಿತು ದಾಖಲೆ ಸಮೇತ ರಾಜ್ಯದ ಜನತೆಯ ಮುಂದೆ ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದ್ದಾರೆ.

ಸಾಕ್ಷ್ಯಾಧಾರಗಳಿಲ್ಲದೆ ಇಂತಹ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಈಶ್ವರಪ್ಪ ತಮ್ಮ ರಾಜಕೀಯ ಹತಾಶೆ ಹಾಗೂ ಮಾನಸಿಕ ಅಸ್ಥಿರತೆಯನ್ನು ಪ್ರದರ್ಶಿಸುತ್ತಿದ್ದಾರೆ. ತಮ್ಮ ಆರೋಪಗಳನ್ನು ಸಾಬೀತುಪಡಿಸಲು ವಿಫಲರಾದರೆ ಸಾರ್ವಜನಿಕ ಜೀವನದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕು ಅವರಿಗೆ ಉಳಿಯುವುದಿಲ್ಲ. ಕೂಡಲೇ ರಾಜ್ಯದ ಜನತೆಯ ಕ್ಷಮೆಯಾಚಿಸಿ ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ತಮ್ಮ ಸಚಿವ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಆರೋಪಗಳು, ವಿಶೇಷವಾಗಿ ಬೆಳಗಾವಿಯ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದ ಸಂದರ್ಭದಲ್ಲಿ ಅವರ ವಿರುದ್ಧ ವ್ಯಕ್ತವಾಗಿದ್ದ ಜನಾಕ್ರೋಶವನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ತಮ್ಮ ವೈಫಲ್ಯ ಹಾಗೂ ಭ್ರಷ್ಟಾಚಾರದ ಕಪ್ಪುಚರಿತ್ರೆಯನ್ನು ಮರೆಮಾಚಲು ಈಶ್ವರಪ್ಪ ಈಗ ಅಸಂಬದ್ಧ ಹಾಗೂ ಆಧಾರರಹಿತ ಹೇಳಿಕೆಗಳ ಮೊರೆ ಹೋಗಿದ್ದಾರೆ ಎಂದು ಹೆಬ್ಬಾರ ಆರೋಪಿಸಿದ್ದಾರೆ.

ಜನರ ವಿಶ್ವಾಸ ಕಳೆದುಕೊಂಡಿರುವ ಅವರು ಮೊದಲು ತಮ್ಮ ರಾಜಕೀಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ, ನಂತರ ಇತರರ ಬಗ್ಗೆ ಮಾತನಾಡಲಿ ಎಂದು ತಿರುಗೇಟು ಶಿವರಾಮ ಹೆಬ್ಬಾರ ಈಶ್ವರಪ್ಪ ಅವರಿಗೆ ಕಿವಿಮಾತು ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇವಿನ ಹಣ್ಣಿಗೆ ಭಾರಿ ಬೇಡಿಕೆ
ಕಾರ್ಖಾನೆ ಬಾಧಿತ ಹಳ್ಳಿಗಳಿಗೆ ಸಿಎಂ ಭೇಟಿ ನೀಡಲಿ