ಮಂಗಾರು ಮಳೆಯಿಂದಾಗಿ ನದಿ ಮುಖಜ ಭೂಮಿಯಲ್ಲಿ ಶೇಖರಣೆಗೊಳ್ಳುವ ಅಪಾರ ಪ್ರಮಾಣದ ನೀರನ್ನು ಸಮುದ್ರಕ್ಕೆ ಹರಿ ಬಿಡುವ ಕೋಡಿ ಕಡಿಯುವ ವೈಶಿಷ್ಟ್ಯಮಯ, ಸಾಂಪ್ರದಾಯಕ ಕಾರ್ಯವು ಮಂಗಳವಾರ ಇಲ್ಲಿಯ ನದಿ ಭಾಗದ ಸಮುದ್ರ ಸಂಗಮ ತೀರದಲ್ಲಿ ನಡೆಯಿತು.
ಹಳ್ಳದ ನೀರನ್ನು ಸಮುದ್ರಕ್ಕೆ ಹರಿಬಿಡುವ ವಿಶಿಷ್ಟ ಆಚರಣೆ
ರಾಘು ಕಾಕರಮಠ
ಕನ್ನಡಪ್ರಭ ವಾರ್ತೆ ಅಂಕೋಲಾ
ಮಂಗಾರು ಮಳೆಯಿಂದಾಗಿ ನದಿ ಮುಖಜ ಭೂಮಿಯಲ್ಲಿ ಶೇಖರಣೆಗೊಳ್ಳುವ ಅಪಾರ ಪ್ರಮಾಣದ ನೀರನ್ನು ಸಮುದ್ರಕ್ಕೆ ಹರಿ ಬಿಡುವ ಕೋಡಿ ಕಡಿಯುವ ವೈಶಿಷ್ಟ್ಯಮಯ, ಸಾಂಪ್ರದಾಯಕ ಕಾರ್ಯವು ಮಂಗಳವಾರ ಇಲ್ಲಿಯ ನದಿ ಭಾಗದ ಸಮುದ್ರ ಸಂಗಮ ತೀರದಲ್ಲಿ ನಡೆಯಿತು.
ಸುತ್ತಮುತ್ತಲಿನ ಹತ್ತು ಗ್ರಾಮದ ಉಳಿವಿಗಾಗಿ ಗ್ರಾಮಸ್ಥರು ನದಿಭಾಗದ ಸಮುದ್ರದ ಸಂಗಮ ತೀರದ ಊರಲಿದ್ದ ನೀರನ್ನು ಸಮುದ್ರಕ್ಕೆ ಬಿಟ್ಟು ತಾಲೂಕಿನ ಜನತೆಯ ನೆಮ್ಮದಿಗೆ ಕಾರಣರಾದರು.
ಏನಿದು ಕೋಡಿ?:
ತಾಲೂಕಿನ ಸಮುದ್ರದಂಚಿನ 7 ಕಿಮೀ ವ್ಯಾಪ್ತಿಯ ಪೂಜಗೇರಿ, ಕುಂಬಾರಕೇರಿ, ತೆಂಕಣಕೇರಿ, ತಾಳೇಬೈಲ, ಬೆಳಂಬಾರ, ಮಂಜಗುಣಿ ಭಾಗದ ಸಮುದ್ರ ತೀರದ ಪ್ರದೇಶದ ಜನತೆಗೆ ಕೋಡಿ ಕಡಿದ ಮೇಲೆಯೇ ಇಲ್ಲಿನ ಕೃಷಿ ಚಟುವಟಿಕೆ ಚಾಲನೆ ಪಡೆದುಕೊಳ್ಳುತ್ತದೆ. ಇಲ್ಲಿನ ಪ್ರದೇಶದಲ್ಲಿ ಬಿದ್ದ ಮಳೆ ಸಹಜವಾಗಿ ಹರಿದು ಸಮುದ್ರ ಸೇರಬೇಕು. ಆದರೆ ಘಟ್ಟದ ಮೇಲಿಂದ ಬಂದ ನೀರಿನೊಡನೆ ಇಲ್ಲಿಯ ಮಳೆ ನೀರು ಸೇರಿ ಸಮುದ್ರಕ್ಕೆ ಹೋಗದೇ ಇಲ್ಲಿನ ಪ್ರದೇಶಗಳಲ್ಲಿ ಜಲಾವೃತಗೊಳ್ಳುತ್ತದೆ.
ಹೀಗಾಗಿ ನದಿಭಾಗದಲ್ಲಿ ಭೂ ಭಾಗದಲ್ಲಿ ಸಂಗ್ರಹವಾದ ನೀರನ್ನು ಸಮುದ್ರ ಸಂಗಮದಲ್ಲಿ ಮರಳನ್ನು ತೆಗೆದು ನೀರನ್ನು ಬಿಡಲಾಗುತ್ತದೆ. ಇದಕ್ಕೆ ಕೋಡಿ ಕಡಿಯುವುದು ಎನ್ನಲಾಗುತ್ತದೆ. ಒಂದು ವೇಳೆ ಪ್ರತಿ ವರ್ಷ ಕೋಡಿ ಕಡಿಯದೇ ಹೋದರೆ ಸುತ್ತಲಿನ 10 ಗ್ರಾಮಗಳು ಜಲಪ್ರಳಯದಲ್ಲಿ ಸಿಲುಕಿ ನೆಲೆ ಕಳೆದುಕೊಳ್ಳಬೇಕಾಗುತ್ತದೆ.
ಕೋಡಿಯ ಆತಂಕ:
ಕೋಡಿ ಕಡಿಯುವ ಸಮಯದಲ್ಲಿ ಇಲ್ಲಿ ಆತಂಕದ ವಾತಾವರಣ ಸಷ್ಟಿಯಾಗುತ್ತದೆ. ಏಕೆಂದರೆ ಕೋಡಿ ಕಡಿಯುವಾಗ ಒಂದೇ ಸಮನೆ ನಿಂತ ನೀರು ಸಮುದ್ರ ಕಡೆಗೆ ನುಗ್ಗುವುದರಿಂದ ಕೊಚ್ಚಿ ಹೋಗುವ ಸಾಧ್ಯತೆಗಳಿರುತ್ತದೆ. ಕಳೆದ 26 ವರ್ಷದ ಹಿಂದೆ ಕೋಡಿ ಕಡಿಯುವಾಗ ಇಬ್ಬರು ಸಮುದ್ರ ಪಾಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಸಮುದ್ರ ದೇವನಿಗೆ ಪೂಜಾ ಕಾರ್ಯ, ಬಲಿ ವಿಧಿ-ವಿಧಾನಗಳನ್ನು ಪೂರೈಸಿ ಅನುಭವವಿದ್ದವರು ಮಾತ್ರ ಕೋಡಿ ಕಡಿಯುವ ಕಾರ್ಯಕ್ಕೆ ಕೈ ಹಚ್ಚುತ್ತಾರೆ.
ಸುಮಾರು 15 ವರ್ಷಗಳ ಹಿಂದೆ ಜಲಾವೃತಗೊಳ್ಳುವ ಎಲ್ಲಾ ಗ್ರಾಮದವರೂ ಈ ಕೋಡಿ ಕಡಿಯುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರಂತೆ. ಆದರೆ ಈಗ ನದಿಭಾಗದ ಜನತೆ ಮಾತ್ರ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಈ ಸಂದರ್ಭ ಬೊಬ್ರವಾಡ ಗ್ರಾಪಂ ಪಿಡಿಓ ನಾಗೇಂದ್ರ ಮಹಾದೇವ ನಾಯ್ಕ, ಗ್ರಾಮ ಸಹಾಯಕ ವಿನೋದ ನಾಯ್ಕ, ಸಿಬ್ಬಂದಿ ಕೃಷ್ಣಾ ನಾಯ್ಕ, ಪಾಂಡುರಂಗ ನಾಯ್ಕ, ನಾಗೇಶ ನಾಯ್ಕ, ಮಹೇಶ ನಾಯ್ಕ, ಪಾಂಡು ನಾಯ್ಕ, ಸಾಗರ ನಾಯ್ಕ, ರಮೇಶ ನಾಯ್ಕ, ಲಕ್ಷ್ಮಣ ನಾಯ್ಕ, ಲಿಂಗಾ ನಾಯ್ಕ, ಕಿರಣ ನಾಯ್ಕ, ಸೋಮೇಶ್ವರ ನಾಯ್ಕ, ದರ್ಶನ ಖಾರ್ವಿ, ಶಂಕರ ಖಾರ್ವಿ, ಲೋಹಿತ ನಾಯ್ಕ, ಗಣರಾಜ್ ಇನ್ನಿತರರು ಪಾಲ್ಗೊಂಡಿದ್ದರು.ಕೋಡಿ ಕಡಿಯುವ ಕಾಯಕಕ್ಕೆ ಪ್ರಕೃತಿ ವಿಕೋಪದ ನಿಧಿಯಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಚಿಂತಿಸಲಾಗುತ್ತಿದೆ. ಜೀವದ ಹಂಗು ತೊರೆದು, ಸುತ್ತಮುತ್ತಲಿನ ಊರಿನ ಉಳಿವಿಗಾಗಿ ಇಲ್ಲಿನ ಜನರು ನೀಡುವ ಕೊಡುಗೆ ಶ್ಲಾಘನೀಯ ಎನ್ನುತ್ತಾರೆ ತಹಸೀಲ್ದಾರ ಎನ್.ಎಫ್. ನೋರೊನಾ.ಕೈ ಕಳೆದುಕೊಂಡವ ಭಾಗಿ:
ಕೋಡಿ ಕಡಿಯುವ ಸಂದರ್ಭ, ಅಪಘಾತದಲ್ಲಿ ಒಂದು ಕೈ ಕಳೆದುಕೊಂಡ ನಾಗೇಶ ನಾಯ್ಕ ಸಹ ಕೋಡಿ ಕಡಿಯುವ ಕಾರ್ಯದಲ್ಲಿ ನಿರತರಾಗಿರುವುದು ವಿಶೇಷವಾಗಿತ್ತು. ಆದಷ್ಟು ಬೇಗ ಹಳ್ಳದಲ್ಲಿ ಸೇರಿರುವ ನೀರು ಸಮುದಕ್ಕೆ ಹೋದರೆ ಸಾಕು ಎಂದು ನಾನು ಕೂಡ ಸುಮಾರು 4 ಗಂಟೆಗಳ ಕಾಲ ಸತತವಾಗಿ ಒಂದೇ ಕೈಯಲ್ಲಿ ಮರಳನ್ನು ಎತ್ತಿ ಹಾಕಿದ್ದೇನೆ ಎಂದು ನಾಗೇಶ ನಾಯ್ಕ ಪ್ರತಿಕ್ರಿಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.