ಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆಯಲ್ಲಿ ಕ್ಷಯ ರೋಗ ನಿಯಂತ್ರಣಕ್ಕೆ ಸರ್ಕಾರದಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜನರು ಕ್ಷಯ ರೋಗದ ಲಕ್ಷಣಗಳು ಕಂಡುಬಂದಲ್ಲಿ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಂಡಲ್ಲಿ ಕ್ಷಯ ರೋಗವನ್ನು ನಿಯಂತ್ರಿಸಬಹುದಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಪಾಂಡ್ವೆ ರಾಹುಲ್ ತುಕಾರಾಮ ಹೇಳಿದರು.
ದೇಶದಲ್ಲಿ 1962ರಲ್ಲಿ ಕ್ಷಯ ರೋಗ ನಿಯಂತ್ರಣಕ್ಕೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರದಿಂದ ಆರಂಭಿಸಲಾಯಿತು. ಅಂದಿನಿಂದ ಕ್ಷಯ ರೋಗ ನಿರ್ಮೂಲನೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಿಯಮಿತವಾಗಿ ಕೆಮ್ಮು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಸಾರ್ವಜನಿಕರು ಹತ್ತಿರದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಕ್ಷಯ ರೋಗಕ್ಕೆ ಭಯಪಡುವಂತಿಲ್ಲ. ಜಾಗೃತರಾಗಬೇಕು ಎಂದು ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಕ್ಷಯ ರೋಗದ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಹಾಗೂ ರೋಗ ನಿಯಂತ್ರಣಕ್ಕೆ ಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಮಾಹಿತಿ ತಿಳಿಸಬೇಕು. ಜಿಲ್ಲೆಯಲ್ಲಿ ಕ್ಷಯ ರೋಗದಿಂದ ಸಾವನಪ್ಪುವವರ ಪ್ರಮಾಣ ಶೇ.6 ರಷ್ಟಿದ್ದು, ಜನರಲ್ಲಿ ರೋಗದ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಿದ್ದಲ್ಲಿ ಮತ್ತು ಜನರು ಚಿಕಿತ್ಸೆಗೆ ಮುಂದಾದಲ್ಲಿ ಈ ಪ್ರಮಾಣವನ್ನು ಶೇ.2ಕ್ಕೆ ತರಬಹುದಾಗಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಡಬೇಕು ಎಂದು ತಿಳಿಸಿದರು.ಇದೇ ವೇಳೆ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾರರ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.