ಹೂವಿನಹಡಗಲಿ: ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಡೆಂಘೀ ಜ್ವರ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಕೃಷ್ಣನಾಯ್ಕ ಎಚ್ಚರಿಕೆ ನೀಡಿದರು.
ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿ ಚರಂಡಿಗಳಲ್ಲಿ ಕಸದ ರಾಶಿ ಕೊಳೆತು ನಾರುತ್ತಿವೆ. ನೆಪಕ್ಕೆ ಮಾತ್ರ ಬ್ಲಿಚಿಂಗ್ ಪೌಡರ್ ಹಾಕಿ ಕೈ ತೊಳೆದುಕಂಡರೆ ಸಾಲದು, ಜನರ ಕಷ್ಟ ನಷ್ಟ ಸಮಸ್ಯೆಗಳನ್ನು ಆಲಿಸಬೇಕು. ಜನರ ಕೈಗೆ ಸಿಗದೇ ಅಧಿಕಾರಿಗಳು ತೊಂದರೆ ನೀಡಿದರೆ, ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದರು.
ತಾಲೂಕಿನ ಪ್ರತಿಯೊಂದು ಇಲಾಖೆಗಳು ಹಾಗೂ ಪ್ರತಿ ಶಾಲೆಗಳಲ್ಲಿ, ಸಿಸಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲು ಸೂಚನೆ ನೀಡಿದರು. ಅಧಿಕಾರಿಗಳು ತಿಳಿದಾಗ ಬಂದು ಹೋದರೇ ಜನರ ಕೆಲಸ ಯಾರು ಮಾಡಬೇಕು, ಜನರ ತೆರಿಗೆ ಹಣದಲ್ಲಿ ಸಂಬಳ ತೆಗೆದುಕೊಳ್ಳುವ ಇವರು, ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಅಸಮಾದಾನ ವ್ಯಕ್ತಪಡಿಸಿದರು.ಪಟ್ಟಣದ ಆಸ್ಪತ್ರೆಯಲ್ಲಿ ನರ್ಸ್‌ಗಳು ಹಳ್ಳಿಗಳಿಂದ ಬಂದ ರೋಗಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಣ್ಣ ರೋಗಕ್ಕೂ ಹೊರಗೆ ಹೋಗಿ ಎಂದು ಹೇಳುತ್ತಿದ್ದಾರೆ. ಇಂತಹ ಪ್ರಕರಣ ಕಂಡು ಬಂದರೆ ಅವರನ್ನು ಮುಲಾಜಿಲ್ಲದೇ ಅವರ ಮೇಲೆ ಕ್ರಮಕ್ಕೆ ಬರುತ್ತೇನೆಂದು ಹೇಳಿದರು.
ಅಧಿಕಾರಿಗಳು ನನ್ನನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇಲಾಖೆಗಳ ಮೇಲಧಿಕಾರಿಗಳು ಪ್ರತಿ ವಾರವೂ ವರದಿ ನೀಡಬೇಕೆಂದು ಹೇಳಿದರು.
ಗ್ರಾಪಂಗಳಲ್ಲಿ ನೀರುಗಂಟಿಗಳು ಕೆಲಸ ಮಾಡದೇ ತಮ್ಮ ಹೊಲ-ಮನೆ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಪಿಡಿಒಗಳ ನಿಗಾ ಇಲ್ಲ. ನಮ್ಮ ತಾಂಡದಲ್ಲಿ ನಮ್ಮ ಮನೆ ಮುಂದೆ ಮಳೆ ನೀರು ತಿಂಗಳುಗಟ್ಟಲೇ ನಿಂತರೂ ಪಿಡಿಒ ಕ್ರಮ ಕೈಗೊಂಡಿಲ್ಲ. ಇನ್ನು ಜನರ ಪರಿಸ್ಥಿತಿ ಹೇಗೆ ಇರಬೇಡ ಎಂದು ತಾಪಂ ಇಒಗೆ ಪಿಡಿಒಗಳ ಮೇಲೆ ಕ್ರಮಕ್ಕೆ ಮುಂದಾಗಬೇಕೆಂದು ಸೂಚನೆ ನೀಡಿದರು.
ಟಿಎಚ್‌ಒ ಸ್ವಪ್ನ ಕಟ್ಟಿ ಡೆಂಘೀ ಜ್ವರ ಕುರಿತು ಮಾಹಿತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದರು.