ಬಾಲ ಬಿಚ್ಚಿದರೆ ಹುಷಾರು!

KannadaprabhaNewsNetwork |  
Published : Apr 10, 2026, 01:45 AM IST
ರೌಡಿ ಪರೇಡ್‌ನಲ್ಲಿ ರೌಡಿಶೀಟರ್‌ ಹಾಕಿಸಿಕೊಂಡಿದ್ದ ಟ್ಯಾಟೂ ಪರಿಶೀಲಿಸಿದ ಶಶಿಕುಮಾರ. | Kannada Prabha

ಸಾರಾಂಶ

ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 1,326 ರೌಡಿಶೀಟರ್‌ಗಳಿದ್ದಾರೆ. ಈ ಪೈಕಿ ಪ್ರಸ್ತುತ ವರ್ಷದಲ್ಲಿ ಕೇಸ್ ಕ್ಲೋಸ್, ಆರೋಗ್ಯ ಸಮಸ್ಯೆ, ಸಕ್ರಿಯರಿಲ್ಲದ 816 ಜನರ ರೌಡಿಶೀಟರ್ ಕ್ಲೋಸ್ ಮಾಡಲಾಗಿದೆ.

ಹುಬ್ಬಳ್ಳಿ:

ರೌಡಿತನದಲ್ಲಿ ಸಕ್ರಿಯರಾಗಿ ಬಾಲ ಬಿಚ್ಚಿದರೆ ಪರಿಣಾಮ ನೆಟ್ಟಗಿರಲ್ಲ..!

ಇಲ್ಲಿನ ಕಾರವಾರ ರಸ್ತೆಯ ಹಳೆ ಸಿಎಆರ್ ಮೈದಾನದಲ್ಲಿ ಹು-ಧಾ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಕಮಿಷನರೇಟ್ ವ್ಯಾಪ್ತಿಯ 400ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್ ನಡೆಸಿ, ಸಕ್ರಿಯರಾಗಿರುವ ರೌಡಿಗಳಿಗೆ ಎಚ್ಚರಿಕೆ ನೀಡಿದ ಬಗೆಯಿದು.

ಗುರುವಾರ ನಡೆದ ಪರೇಡ್‌ನಲ್ಲಿ ರೌಡಿಶೀಟರ್‌ಗಳ ಪೂರ್ವಾಪರ, ಸದ್ಯ ಚಟುವಟಿಕೆ, ಹಣಕಾಸಿನ ಮೂಲದ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲಾಯಿತು. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ರೌಡಿಗಳಿಗೆ ಎಚ್ಚರಿಕೆ ನೀಡಿದರು. ಅಲ್ಲದೇ, ಸಕ್ರಿಯ ರೌಡಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸುವುದು, ಗೂಂಡಾ ಕಾಯ್ದೆ, ಗಡಿಪಾರು ಮಾಡುವ ಖಡಕ್ ಸಂದೇಶ ರವಾನಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 1,326 ರೌಡಿಶೀಟರ್‌ಗಳಿದ್ದಾರೆ. ಈ ಪೈಕಿ ಪ್ರಸ್ತುತ ವರ್ಷದಲ್ಲಿ ಕೇಸ್ ಕ್ಲೋಸ್, ಆರೋಗ್ಯ ಸಮಸ್ಯೆ, ಸಕ್ರಿಯರಿಲ್ಲದ 816 ಜನರ ರೌಡಿಶೀಟರ್ ಕ್ಲೋಸ್ ಮಾಡಲಾಗಿದೆ, ಆ ಮೂಲಕ ಒಳ್ಳೆಯ ಜೀವನ ಸಾಗಿಸಲು ಅವಕಾಶ ಮಾಡಿಕೊಡಲಾಗಿದೆ. ಸಕ್ರಿಯ ಇರುವ ರೌಡಿಗಳ ಮೇಲೆ ಹೆಚ್ಚಿನ ನಿಗಾವಹಿಸಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಇನ್ನೂ ಡಿಜಿ ಅವರ ಸೂಚನೆ ಮೇರೆಗೆ ಮನೆ-ಮನೆ ಪೊಲೀಸ್ ಯೋಜನೆ ಜಾರಿ ಯಶಸ್ವಿಯಾಗಿ ನಡೆಸುತ್ತಿದೆ. ಮುಂದುವರಿದ ಭಾಗದಲ್ಲಿ ಸನ್ಮಿತ್ರ ಹಾಗೂ ಆಸರೆ ಯೋಜನೆ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ. ಆಸರೆ ಯೋಜನೆ ಅನ್ವಯ ಕಮಿಷನರೇಟ್ ವ್ಯಾಪ್ತಿಯಲ್ಲಿ 8 ಸಾವಿರ ವಯೋವೃದ್ಧರು ಒಂಟಿಯಾಗಿ ಬದುಕುತ್ತಿರುವುದು ತಿಳಿದು ಬಂದಿದ್ದು, ದೊಡ್ಡ ಮಟ್ಟದ ಕಾರ್ಯಕ್ರಮ ನೆರವೇರಿಸುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು. ಪ್ರಸ್ತುತ ವರ್ಷ ಸಕ್ರಿಯ ಇರುವ ನಾಲ್ಕೈದು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮವಹಿಸಿ ನ್ಯಾಯಾಂಗ ಬಂಧನಕ್ಕೆ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇನ್ನೊಂದೆಡೆ 35-40 ಜನ ರೌಡಿಗಳನ್ನು ಗಡಿಪಾರು ಮಾಡಲು ಸಿದ್ಧತೆ ಮಾಡಲಾಗಿದ್ದು, ಅಂತಿಮ ಆದೇಶ ಹೊರಡಿಸಿ ಕ್ರಮವಹಿಸಲಾಗುವುದು ಎಂದ ಶಶಿಕುಮಾರ, ಐಪಿಎಲ್ ಕ್ರಿಕೆಟ್ ಆರಂಭಗೊಂಡಾಗಿದ್ದು, ಐದಾರು ಬೆಟ್ಟಿಂಗ್ ಕೇಸ್ ದಾಖಲಿಸಲಾಗಿದೆ. ನಿರಂತರ ನಿಗಾವಹಿಸಿ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಹು-ಧಾ ಕಮಿಷನರೇಟ್ ವ್ಯಾಪ್ತಿಯ ಪ್ರತಿ ಠಾಣೆ ವ್ಯಾಪ್ತಿಯಲ್ಲೂ 150-250 ಜನರ ಎಂಒಬಿಗಳಿದ್ದು, ಈ ಪೈಕಿ 2300 ನಿಶ್ಚಲ ಕಡತಕ್ಕೆ(ಕ್ಲೋಸ್ ಮಾಡಿದ್ದರೂ ನಿಗಾ ವಹಿಸುವುದು) ಇಡಲಾಗಿದ್ದು, ಹೊಸದಾಗಿ 1084 ಆ್ಯಕ್ಟಿವ್ ಎಂಒಬಿ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ ರೌಡಿಶೀಟರ್ ಮತ್ತು ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವವ ಬಗ್ಗೆ ನಿಗಾವಹಿಸುವ ಜತೆಗೆ ಅವರನ್ನು ಸರಿ ದಾರಿಗೆ ತರುವ ಕೆಲಸವನ್ನು ಇಲಾಖೆ ಮಾಡುತ್ತಿದ್ದು, ಇದನ್ನು ಅವರು ಸದ್ಬಳಕೆ ಮಾಡಿಕೊಳ್ಳಬೇಕು. ಒಂದು ವೇಳೆ ದುರುಪಯೋಗ ಪಡಿಸಿಕೊಂಡರೆ, ಪುನಃ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ಡಿಸಿಪಿಗಳಾದ ಶ್ರುತಿ ಎಂ.ಎಸ್., ರವೀಶ ಸಿ.ಆರ್., ಎಸಿಪಿಗಳಾದ ಶಿವಾನಂದ ಚಲವಾದಿ, ಶಿವರಾಜ ಕಟಕಬಾವಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಣಿಜ್ಯ ವಿಭಾಗಕ್ಕೆ ಮೂವರು ಫಸ್ಟ್‌ ರ್‍ಯಾಂಕ್‌
ದ್ವಿತೀಯ ಪಿಯುಯಲ್ಲಿ ಗದಗ ಜಿಲ್ಲೆಗೆ 30ನೇ ಸ್ಥಾನ