ಕನ್ನಡಪ್ರಭ ವಾರ್ತೆ ಮಂಡ್ಯ
ಬೇಸಿಗೆ ಪ್ರಾರಂಭವಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ್ ಹೇಳಿದರು.ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ನಗರಾಭಿವೃದ್ಧಿ ಕೋಶ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನೀರು ಬಳಕೆ ಶುಲ್ಕವನ್ನು ಶೇ.13 ರಷ್ಟು ಜನರು ಮಾತ್ರ ಪಾವತಿಸಿದ್ದಾರೆ. ಬಳಕೆದಾರರು ನೀರಿಗೆ ಶುಲ್ಕ ಪಾವತಿಸದಿದ್ದಲ್ಲಿ ವಸೂಲಾತಿಗೆ ಕ್ರಮ ವಹಿಸಬೇಕು. ಬೇಸಿಗೆಯಲ್ಲಿ ಒದಗಿಸಲಾಗುವ ನೀರಿನ ಗುಣಮಟ್ಟವನ್ನು ಕಾಲ ಕಾಲಕ್ಕೆ ಸಂಶೋಧನಾ ಕೇಂದ್ರಗಳಿಗೆ ಕಳುಹಿಸಿ ಪರೀಕ್ಷಿಸುವಂತೆ ಸೂಚಿಸಿದರು.
4483 ಮಂದಿ ಅರ್ಹ ಫಲಾನುಭವಿಗಳು:2015 ರ ಸರ್ವೇಯ ಪ್ರಕಾರ ವಸತಿ ಹಾಗೂ ನಿವೇಶನ ರಹಿತರು ಜಿಲ್ಲೆಯಲ್ಲಿ 5312 ಜನರೆಂದು ಗುರುತಿಸಲಾಗಿದೆ. ಅದರಲ್ಲಿ 4483 ಅರ್ಹ ಫಲಾನುಭವಿಗಳಿದ್ದಾರೆ. ಪ್ರಸ್ತುತ ನಗರದಲ್ಲಿ ಸರ್ಕಾರಿ ನಿವೇಶನಗಳು ಲಭ್ಯ ಇರದಿರುವ ಕಾರಣ ಅರ್ಹ ಫಲಾನುಭವಿಗಳಿಗೆ ಪರ್ಯಾಯ ವ್ಯವಸ್ಥೆ ರೂಪಿಸಿ ಎಂದು ತಿಳಿಸಿದರು.
ವಸತಿ ಹಾಗೂ ನಿವೇಶನ ರಹಿತರ ಪಟ್ಟಿಯನ್ನು ಸೂಕ್ತವಾಗಿ ಪರಿಶೀಲಿಸಿ, ನಿವೇಶನ ರಹಿತರು ಮತ್ತು ವಸತಿ ರಹಿತರ ಪ್ರತ್ಯೇಕ ಪಟ್ಟಿಯನ್ನು ಮುಂದಿನ ಸಭೆಗೆ ಸಿದ್ಧಪಡಿಸಿ ಸಲ್ಲಿಸುವುದು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಡುವ ಈಗಾಗಲೇ ದುರಸ್ತಿಗೊಂಡಿರುವ ಸಾರ್ವಜನಿಕ ಹಾಗೂ ಸಮುದಾಯದ ಶೌಚಾಲಯಗಳನ್ನು ಯಾವುದೇ ವಿಳಂಬ ಮಾಡದೆ ಶ್ರೀಘವಾಗಿ ಪ್ರಾರಂಭಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಇ- ಆಸ್ತಿ ನೋಂದಣಿ ಕಡಿಮೆ:
ಜಿಲ್ಲೆಯಲ್ಲಿ ಇ- ಆಸ್ತಿಯಲ್ಲಿ ನೋಂದಣಿ ಕಡಿಮೆ ಪ್ರಮಾಣದಲ್ಲಿರುವುದು ಗಮನಕ್ಕೆ ಬಂದಿರುತ್ತದೆ, ಸಾರ್ವಜನಿಕರಿಗೆ ಇ- ಆಸ್ತಿಯಲ್ಲಿ ತಮ್ಮ ಆಸ್ತಿಗಳನ್ನು ನೋಂದಾಯಿಸಿಕೊಳುವಂತೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು, ಇಲ್ಲವಾದಲ್ಲಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜಾರಿಗೊಳಿಸಲಾಗುವುದು ಎಂದು ಎಚ್ಚರಿಸಿದರು.ನೋಟಿಸ್ ಜಾರಿಗೊಳಿಸಿ:
ಸರ್ಕಾರಿ ಅಂಗಡಿ ಮಳಿಗೆಗಳ ಬಾಡಿಗೆಯನ್ನು ವರ್ಷಗಳಿಂದಲೂ ಪಾವತಿಸದೇ ಇರುವವರಿಗೆ ನೋಟಿಸ್ ಜಾರಿ ಮಾಡಿ, ಅಂಗಡಿಯ ಮಾಲೀಕರು ಮಳಿಗೆಗಳ ಬಾಡಿಗೆಯನ್ನು ಪಾವತಿ ಮಾಡದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಿ ಎಂದು ಹೇಳಿದರು.ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಒಳಪಡುವ ಅಧಿಕೃತ ಜಾಹೀರಾತು ಫಲಕಗಳಿಗೆ ಸೂಕ್ತ ಶುಲ್ಕ ವಿಧಿಸಿ, ನಿಗದಿತ ಜಾಹೀರಾತು ಶುಲ್ಕವನ್ನು ವಸೂಲಾತಿ ಮಾಡಿ, ಸ್ವಿಚ್ಛ್ ಭಾರತ್ ಅಭಿಯಾನದಡಿ ಸರಿಯಾದ ವೈಜ್ಞಾನಿಕ ಕ್ರಮ ಅನುಸರಿಸಿ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ವಿಲೇವಾರಿ ಮಾಡಿ ಎಂದು ಹೇಳಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶಾಧಿಕಾರಿ ಮಾಯಣ್ಣಗೌಡ, ನಗರಾಭಿವೃದ್ಧಿ ಕಾರ್ಯಪಾಲಕ ಇಂಜಿನಿಯರ್ ಪ್ರತಾಪ್ .ಆರ್, ನಗರಸಭೆ ಪೌರಾಯುಕ್ತೆ ಯು.ಪಿ. ಪಂಪಾಶ್ರೀ, ವಿವಿಧ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಳಾದ ಮೇಘ, ರುದ್ರೇಗೌಡ, ರವಿಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.