ಪಟ್ಟಣ ಪಂಚಾಯಿತಿಗೆ ವರ್ಷಕ್ಕೆ ಆದಾಯ 2.30 ಕೋಟಿ ರು.ಇದೆ ಎಂದು ಪಟ್ಟಣ ಪಂಚಾಯತಿ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಆರತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಪಟ್ಟಣ ಪಂಚಾಯಿತಿಗೆ ವರ್ಷಕ್ಕೆ ಆದಾಯ 2.30 ಕೋಟಿ ರು.ಇದೆ ಎಂದು ಪಟ್ಟಣ ಪಂಚಾಯತಿ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಆರತಿ ತಿಳಿಸಿದರು.

ಪಟ್ಟಣದ ಅಭಿವೃದ್ಧಿಗೆ ಅಗತ್ಯವಿರುವ ಸಾಧಕ ಬಾಧಕಗಳನ್ನು ಕುರಿತು ಚರ್ಚಿಸಲು 2026-27 ನೇ ಸಾಲಿನ ಆಯವ್ಯಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪಟ್ಟಣ ಪಂಚಾಯತಿಗೆ ಬರುವ ಆದಾಯದಲ್ಲಿ ತಿಂಗಳಿಗೆ ಮೂವತ್ತು ಲಕ್ಷ ಕಚೇರಿಯ ನಿರ್ವಹಣೆಗೆ ವೆಚ್ಚ ಬರುತ್ತದೆ. ಉಳಿದ ಹಣವನ್ನು ಸರ್ಕಾರಿ ಶಾಲಾ ಕಾಲೇಜುಗಳ ಅಗತ್ಯತೆಗೆ ಹಣ ನೀಡಲಾಗುತ್ತಿದೆ. ಪಟ್ಟಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಇಲ್ಲದೆ ಇರುವ ಘಟಕಗಳನ್ನು ಶಾಲಾ ಕಾಲೇಜು ಆವರಣಕ್ಕೆ ವರ್ಗಾಯಿಸಿ ಪಪಂ ನಿರ್ವಹಣೆ ಮಾಡಲು ಚರ್ಚಿಸಲಾಯಿತು.

ಪಟ್ಟಣದ ಅಭಿವೃದ್ಧಿಗೆ ಅಗತ್ಯವಿರುವ ಸಲಹೆ ನೀಡಲು ಎಲ್ಲಾ ಜನಪ್ರತಿನಿಧಿಗಳು, ಪಟ್ಟಣದ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯನ್ನು ಕರೆಯಲಾಗಿ ಬರುವ ದಿನಗಳಲ್ಲಿ ಆಯವ್ಯಯ ಮಂಡನೆ ಮಾಡುವ ಸಂದರ್ಭದಲ್ಲಿ ಪಟ್ಟಣದ ಅಭಿವೃದ್ಧಿಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲು ಈ ಸಭೆಯನ್ನು ಕರೆಯಲಾಗಿ ಸಭೆಯಲ್ಲಿ ಚರ್ಚೆಯಾದ ಎಲ್ಲ ವಿಷಯಗಳನ್ನು ಅವಲೋಕಿಸಿ ಪಟ್ಟಣದ ಶ್ರೇಯೋಭಿವೃದ್ಧಿಗೆ ಅಗತ್ಯವಿರುವ ಎಲ್ಲವನ್ನೂ ಕ್ರೂಢಿಸಿಕೊಂಡ ಬಳಿಕ ಬಜೆಟ್ ಮಂಡನೆಯಲ್ಲಿ ಮಂಡನೆ ಮಾಡಲಾಗುವುದು ಎಂದು ತಿಳಿಸಿದರು. ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಮಾತನಾಡಿ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಹಣವು ಬಿಡುಗಡೆ ಆಗಲಿದ್ದು ಅದರ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಪಟ್ಟಣದ ಅಭಿವೃದ್ಧಿಗೆ ಎಚ್ ಎ ಎಲ್ ನಿಂದ ಸಿ ಎಸ್ ಆರ್ ಹಣ ಬಿಡುಗಡೆ ಆಗುವ ಬಗ್ಗೆ ಮಾಹಿತಿ ನೀಡಿದರು. ಶಾಸಕರ ನಿಧಿಯಿಂದ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಪಟ್ಟಣಕ್ಕೆ ಸಿ ಸಿ ಕ್ಯಾಮೆರಾ ಅಳವಡಿಕೆ, ಡಿಗ್ರಿ ಕಾಲೇಜ್ ಅಭಿವೃದ್ಧಿ, ಜೂನಿಯರ್ ಕಾಲೇಜು ಸುತ್ತ ಕಾಂಪೌಂಡ್ ನಿರ್ಮಾಣ, ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.ಆಶ್ರಯ ಸಮಿತಿ ಸದಸ್ಯ ಕುಮಾರ್ ಮಾತನಾಡಿ ಪಟ್ಟಣ ಪಂಚಾಯತಿಗೆ ಆದಾಯದ ಕೊರತೆ ಇದ್ದು ಅದರಿಂದ ಪಟ್ಟಣ ಅಭಿವೃದ್ಧಿ ಆಗಲು ಸಾಧ್ಯವಾಗದ ಮಾತು ಎಂದು ಹೇಳಿದರು. ಕಚೇರಿಗೆ ಆದಾಯದ ಮೂಲವನ್ನು ಹುಡುಕುವ ಕಾರ್ಯ ಆಗಬೇಕಿದ್ದು, ಲಕ್ಷಾಂತರ ರುಪಾಯಿ ಕಂದಾಯ ಹಣ ಕಟ್ಟದೆ ಇರುವವರ ಬಳಿ ಹಣ ಪಡೆಯುವುದು. ವಾಣಿಜ್ಯ ಬಳಕೆಗೆ ಬಳಸುವವರ ಬಳಿ ಎರಡರಷ್ಟು ಕಂದಾಯ ಕಟ್ಟಿಸುವ ಆಗಬೇಕು ಎಂದು ಸಲಹೆ ನೀಡಿದರು. ಆಶ್ರಯ ಸಮಿತಿ ಸದಸ್ಯ ರೇಣುಕಾ ಪ್ರಸಾದ್ ಮಾತನಾಡಿ ಪಟ್ಟಣದಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಪ್ರತ್ಯೇಕ ಜಾಗವನ್ನು ತಹಸೀಲ್ದಾರ್ ಅವರು ಹುಡುಕಿ ಕೊಟ್ಟಿದ್ದು, ಬರ್ನಿಂಗ್ ವ್ಯವಸ್ಥೆಗೆ ಕಾಮಗಾರಿ ಆರಂಭಿಸಲಾಗಿದೆ, ಪಟ್ಟಣದ ಅಭಿವೃದ್ಧಿಗೆ ಅಗತ್ಯವಿರುವ ಜನಪ್ರತಿನಿಧಿಗಳಿಂದ ಅನುದಾನವನ್ನು ಹಾಕಿಸಿ ಅಭಿವೃದ್ಧಿ ಮಾಡುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು. ಈ ಸಭೆಯಲ್ಲಿ ಎಂಜಿನಿಯರ್ ಬಿಂದುಸಾರಾ, ತಾಲೂಕು ವೈದ್ಯಾಧಿಕಾರಿ ಡಾ. ಬಿಂದುಮಾಧವ,ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಸನ್ನ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.