ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಯಾವುದೇ ಕೆಲಸ ಕಾರ್ಯ ಮಾಡಿದರೂ ಅವುಗಳ ಬಗ್ಗೆ ಕ್ಷಿಪ್ರಗತಿಯಲ್ಲಿ ಮಾಹಿತಿ ನೀಡಬೇಕು, ಗ್ರಾಮೀಣ ಭಾಗದ ಜನರು ಸರ್ಕಾರದಿಂದ ಯಾವುದೇ ಸೌಲಭ್ಯ ವಿಲ್ಲವೆಂದು ಕೊರಗುವಂತಾಗಬಾರದು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಳೆದ ಕೆಲವು ತಿಂಗಳುಗಳಿಂದ ಮಳೆ ವೈಫಲ್ಯದಿಂದ ಚಳ್ಳಕೆರೆ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದ್ದು, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಜನತೆಗೆ ತಲುಪಿಸುವ ಜೊತೆಗೆ ಸರ್ಕಾರದಿಂದ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಚರ್ಚಿಸಲು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ಸಭೆಯನ್ನು ಗುರುವಾರ ನಡೆಸಲಾಯಿತು.
ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರದ ಕಂದಾಯಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಈಗಾಗಲೇ ಹಲವಾರು ದೂರುಗಳು ಬಂದಿವೆ. ಯಾವುದೇ ಗ್ರಾಮೀಣ ಪ್ರದೇಶದಲ್ಲಾಗಲಿ ಕುಡಿ ಯುವ ನೀರು ಸಿಗದೇ ಇದ್ದ ಸಂದರ್ಭದಲ್ಲಿ ಸರ್ಕಾರದಿಂದ ಹೆಚ್ಚುವರಿಯಾಗಿ ಬೋರ್ ಕೊರೆಸಬೇಕು, ಇಲ್ಲವಾದಲ್ಲಿ ಖಾಸಗಿ ಬೋರ್‌ಗಳಲ್ಲಿ ನೀರು ಲಭ್ಯವಿದ್ದರೆ ಅವರೊಡನೆ ಮಾತನಾಡಿ ನಿಗದಿತ ಶುಲ್ಕ ನೀಡಿ ನೀರು ಪಡೆದು ಸಾರ್ವಜನಿಕರಿಗೆ ಒದಗಿಸಬೇಕು ಎಂದರು.ಗ್ರಾಮೀಣ ಭಾಗಗಳ ಗೋಶಾಲೆಗಳಲ್ಲಿ ಇರುವ ದೇವರ ಎತ್ತುಗಳು ಸೇರಿದಂತೆ ಎಲ್ಲಾ ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಒದಗಿಸಬೇಕು. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ್ದಲ್ಲಿ ಅವುಗಳಿಂದ ಜಿಪಿಎಸ್ ಫೊಟೋ ಕಡ್ಡಾಯವಾಗಿ ಒದಗಿಸಬೇಕು ಎಂದರು.
ತಾಲ್ಲೂಕು ನೋಡಲ್ ಅಧಿಕಾರಿ ಹಾಗೂ ಎಡಿಎಲ್‌ಆರ್ ರಾಮಾಂಜನೇಯ ಮಾತನಾಡಿ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನರ ಸಂಕಷ್ಟಗಳಿಗೆ ನೆರವಾಗಲು ಅಧಿಕಾರಿವರ್ಗಕ್ಕೆ ಸಾಗ್ಯವಾಗಿಲ್ಲ. ಆದರೆ, ಚುನಾವಣೆ ಮುಗಿದಿದ್ದು, ಕೂಡಲೇ ಸರ್ಕಾರದ ಅಧಿಕಾರಿಗಳು ಗ್ರಾಮೀಣ ಜನರ ಸಮಸ್ಯೆಯತ್ತ ಗಮನಹರಿಸಬೇಕು ಎಂದರು. ತಾಲ್ಲೂಕಿನಾದ್ಯಂತ ಖಾಲಿ ಇರುವ ಶಿಕ್ಷಕ ಹುದ್ದೆ ಹಾಗೂ ಕಟ್ಟಡಗಳ ಶಿಥಿಲತೆಯ ಬಗ್ಗೆ ಸಂಬಂಧಪಟ್ಟ ಮುಖ್ಯೋಪಾಧ್ಯಾಯ ರೊಂದಿಗೆ ಚರ್ಚೆ ನಡೆಸಿ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಇಒ ಬಿ.ಎಸ್.ಲಕ್ಷ್ಮಣ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಪಶು ವೈದ್ಯಾಧಿಕಾರಿ ಡಾ.ರೇವಣ್ಣ, ಗ್ರಾಮೀಣ ಕುಡಿಯುವ ನೀರು ವಿಭಾಗದ ಎಇಇ ದಯಾನಂದ, ಶಿರಸ್ತೇದಾರ್ ಸದಾಶಿವಪ್ಪ, ಕಂದಾಯಾಧಿಕಾರಿ ಲಿಂಗೇಗೌಡ, ರಾಜೇಶ್, ಮಂಜುನಾಥ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.