ಬಿತ್ತನೆ ಬೀಜ, ರಸಗೊಬ್ಬರ, ನೀರಿಗೆ ಕೊರತೆಯಾಗದಂತೆ ಎಚ್ಚರವಹಿಸಿ: ಸಿಎಂ ಸಿದ್ದರಾಮಯ್ಯ ತಾಕೀತು

KannadaprabhaNewsNetwork | Updated : May 25 2024, 12:46 AM IST

ಸಾರಾಂಶ

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಏರ್ಪಡಿಸ ಲಾಗಿದ್ದ ವಿಡಿಯೋ ಸಂವಾದದಲ್ಲಿ ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜನಸಾಮಾನ್ಯರ ನಿತ್ಯ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಮುಂಗಾರು ಹಾಗೂ ಪೂರ್ವ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ರಸ ಗೊಬ್ಬರ ಮತ್ತು ಔಷಧಿ ಸೇರಿ ಯಾವುದೇ ಕೊರತೆಯಾಗದಂತೆ ಜಿಲ್ಲಾಧಿಕಾರಿಗಳು ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಾಕೀತು ಮಾಡಿದ್ದಾರೆ.

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಏರ್ಪಡಿಸ ಲಾಗಿದ್ದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಅನುದಾನವನ್ನು ತುರ್ತು ಕೆಲಸ-ಕಾರ್ಯಗಳು, ನೀರು ಮತ್ತು ಬರ ನಿರ್ವಹಣೆ, ಜಾನುವಾರುಗಳಿಗೆ ಮೇವಿನ ಸರಬರಾಜು ಮುಂತಾದ ಕಾರ್ಯಗಳಿಗೆ ಬಳಸಿಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಈ ತುರ್ತು ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವರ್ತನಯನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದವರು ಎಚ್ಚರಿಸಿದರು. ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ದಾಸ್ತಾನು ಮಾಡಿಕೊಳ್ಳಬೇಕು. ಬೆಳೆಹಾನಿಗೊಳಗಾದ ರೈತರಿಗೆ ಸರ್ಕಾರದಿಂದ ಬಿಡುಗಡೆಗೊಳಿಸಲಾಗಿದ್ದ ಸಹಾಯಧನವನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಸೂಚಿಸಿದರು.

ತುರ್ತು ಹಾಗೂ ಸಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳುವಾಗ ಸ್ಥಳೀಯ ಸಚಿವರು, ಶಾಸಕರು ಹಾಗೂ ಚುನಾಯಿತ ಪ್ರತಿನಿಧಿಗಳ ಸಲಹೆ-ಸಹಕಾರವನ್ನು ಪಡೆದುಕೊಳ್ಳಬೇಕು.ಮಳೆಯ ಅನಾಹುತಗಳು ಸಂಭವಿಸುವ ಮುನ್ನ ಅದರ ನಿಯಂತ್ರಣ ಹಾಗೂ ಪರಿಹಾರ ಕ್ರಮಗಳನ್ನು ಅನುಸರಿಸುವಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸಿಎಂ ಸೂಚಿಸಿದರು.

ಕೆಲವು ಜಿಲ್ಲೆಗಳಲ್ಲಿ ಮೃತ ರೈತ ಕುಟುಂಬಗಳಿಗೆ ಪರಿಹಾರ ಕೊಡಿಸುವಲ್ಲಿ ಗಣನೀಯ ವಿಳಂಬವಾಗಿರುವುದು ಗಮನಕ್ಕೆ ಬಂದಿದೆ. ಆಗಿರುವ ಅನಗತ್ಯ ವಿಳಂಬಕ್ಕೆ ಕಾರಣ ಏನು ಎಂಬುದನ್ನು ಗಮನಿಸಿ, ಅತ್ಯಂತ ತ್ವರಿತಗತಿಯಲ್ಲಿ ಪರಿಹಾರಧನ ಒದಗಿಸಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ತಕ್ಷಣ ಸಭೆ ಕರೆದು ಸಂಬಂಧಿಸಿದ ಅಧಿಕಾರಿ-ಸಿಬ್ಬಂದಿ ಗಳಿಗೆ ಮಾಹಿತಿ ನೀಡಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕೆಂದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣದ ಮಳೆ ಬಂದಿದೆ. ಆದಾಗ್ಯೂ ಪ್ರಸ್ತುತ ಸಂದರ್ಭದಲ್ಲಿ ಜಿಲ್ಲೆಯ ಸುಮಾರು 75ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆ ಬಂದಲ್ಲಿ ಹಂತಹಂತವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗುವುದು. ಜಿಲ್ಲೆಯ 10 ಗೋಶಾಲೆಗಳಿಗೆ ಅಗತ್ಯ ನೀರು, ಮೇವು ಮತ್ತು ಜಾನುವಾರುಗಳ ಸಾಕಾಣಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಪೂರ್ವ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಹೊಸದುರ್ಗ ತಾಲೂಕಿನ ಸುಮಾರು 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಟಿ ಚಟುವಟಿಕೆಗಳು ಚುರುಕಾಗಿವೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿರುವ ರಸಗೊಬ್ಬರ ಹಾಗೂ ಔಷಧಗಳು ದಾಸ್ತಾನಿಕರಿಸಲಾಗಿದೆ ಅಲ್ಲದೇ ಯಾವುದೇ ಕೊರತೆ ಇರುವುದಿಲ್ಲ. ಸಕಾಲದಲ್ಲಿ ಮಳೆ ಬರುತ್ತಿರುವುದರಿಂದ ಜಲಮೂಲಗಳಿಗೆ ಗಣನೀಯ ಪ್ರಮಾಣದ ನೀರಿನ ಹರಿವು ಹೆಚ್ಚಳವಾಗಿದೆ ಎಂದರು.

Share this article