ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಡೆಯದಂತೆ ಎಚ್ಚರ ವಹಿಸಿ

KannadaprabhaNewsNetwork |  
Published : Nov 09, 2025, 03:15 AM IST
ಜಿಲ್ಲಾಧಿಕಾರಿ ಸಭೆ ನಡೆಸಿದರು  | Kannada Prabha

ಸಾರಾಂಶ

ಜಿಲ್ಲೆಯಲ್ಲಿನ ಶಾಲೆಗಳು ಮತ್ತು ಕಾಲೇಜುಗಳ 100 ಮೀ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ, ಪ್ರದರ್ಶನ ಮತ್ತು ಸೇವನೆ ನಡೆಯದಂತೆ ಕಟ್ಟುನಿಟ್ಟಿನ ಎಚ್ಚರವಹಿಸಿ, ಇದನ್ನು ಉಲ್ಲಂಘಿಸುವವರ ವಿರುದ್ಧ ಕೋಟ್ಪಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು.

ಜಿಲ್ಲಾಧಿಕಾರಿ ಸೂಚನೆ, ಆರೋಗ್ಯ ಇಲಾಖೆ ವಿವಿಧ ಸಮಿತಿ ಸಭೆ

ಕನ್ನಡಪ್ರಭ ವಾರ್ತೆ ಕಾರವಾರ

ಜಿಲ್ಲೆಯಲ್ಲಿನ ಶಾಲೆಗಳು ಮತ್ತು ಕಾಲೇಜುಗಳ 100 ಮೀ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ, ಪ್ರದರ್ಶನ ಮತ್ತು ಸೇವನೆ ನಡೆಯದಂತೆ ಕಟ್ಟುನಿಟ್ಟಿನ ಎಚ್ಚರವಹಿಸಿ, ಇದನ್ನು ಉಲ್ಲಂಘಿಸುವವರ ವಿರುದ್ಧ ಕೋಟ್ಪಾ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಂಬಾಕು ಉತ್ಪನ್ನಗಳ ಬಳಕೆಯ ದುಷ್ಪರಿಣಾಮಗಳ ಕುರಿತಂತೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ, ತಂಬಾಕು ವ್ಯಸನಗಳಿಗೆ ಬಳಲುತ್ತಿರುವ ವಿದ್ಯಾರ್ಥಿಗಳು ಕಂಡು ಬಂದಲ್ಲಿ ಅವರನ್ನು ವ್ಯಸನಮುಕ್ತರನ್ನಾಗಿ ಮಾಡಲು ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದರು.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೋಟ್ಪಾ ಕಾಯ್ದೆಯ ಉಲ್ಲಂಘನೆಯ ಕುರಿತಂತೆ ಪರಿಶೀಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ದಾಳಿ ನಡೆಸಬೇಕು ಮತ್ತು ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಮೆಗಾ ದಾಳಿ ನಡೆಸುವಂತೆ ಸೂಚಿಸಿದರು.

ಪ್ರಸಕ್ತ ಸಾಲಿನ ಅಕ್ಟೋಬರ್ ವರೆಗೆ ಜಿಲ್ಲೆಯಲ್ಲಿ ಕೋಟ್ಪಾ ಅಡಿಯಲ್ಲಿ 675 ಪ್ರಕರಣ ದಾಖಲಿಸಿ, ₹88,900 ದಂಡ ಸಂಗ್ರಹಿಸಿದ್ದು, ತಂಬಾಕು ಉತ್ಪನ್ನ ಮಾರಾಟ ಷರತ್ತು ಉಲ್ಲಂಘಿಸಿದಲ್ಲಿ ಪರವಾನಗಿ ರದ್ದುಪಡಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕುರಿತಂತೆ ಈ ವರ್ಷದಲ್ಲಿ 9 ಪ್ರಕರಣ ಕಂಡು ಬಂದಿದ್ದು, 3 ಸಾವು ಸಂಭವಿಸಿದೆ. ಈ ಕಾಯಿಲೆಯ ಕುರಿತು ಮುನ್ನೆಚ್ಚರಿಕೆ ವಹಿಸಬೇಕಾದ ಕ್ರಮಗಳ ಕುರಿತಂತೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಆಯೋಜಿಸುವಂತೆ ಮತ್ತು ಅಗತ್ಯ ಸಂಖ್ಯೆಯ ಡೇಪಾ ತೈಲದ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದರು.

ಪ್ರಸವ ಪೂರ್ವದಲ್ಲಿ ಗರ್ಭಿಣಿಯರ ಆರೈಕೆ ಕುರಿತಂತೆ ಆಶಾ ಕಾರ್ಯಕರ್ತೆಯರ ಮೂಲಕ ಹೆಚ್ಚಿನ ಅರಿವು ಮೂಡಿಸಬೇಕು. ನವಜಾತ ಶಿಶು ಮರಣ ತಪ್ಪಿಸಲು ಪ್ರಸವದ ನಂತರ ಶಿಶುವಿನ ಆರೈಕೆ ವಿಧಾನಗಳ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್, ಆರ್.ಸಿ.ಎಚ್. ಅಧಿಕಾರಿ ಡಾ. ನಟರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಅರ್ಚನಾ ನಾಯಕ, ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಶಂಕರ್ ರಾವ್, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಹರ್ಷಾ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕ್ಯಾಪ್ಟನ್ ಡಾ. ರಮೇಶ್ ರಾವ್ ಇದ್ದರು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ