ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರ ವಹಿಸಿ-ಡಾ. ಗಿರಡ್ಡಿ

KannadaprabhaNewsNetwork | Published : May 13, 2025 1:12 AM
Follow Us

ಸಾರಾಂಶ

ಗದಗ-ಬೆಟಗೇರಿ ನಗರಸಭೆ ಪೌರ ಕಾರ್ಮಿಕರಿಗೆ ಡೆಂಘೀ ಮತ್ತು ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.

ಗದಗ:ಗದಗ-ಬೆಟಗೇರಿ ನಗರಸಭೆ ಪೌರ ಕಾರ್ಮಿಕರಿಗೆ ಡೆಂಘೀ ಮತ್ತು ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.

ಗದಗ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಎಚ್.ಎಲ್. ಗಿರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಗದಗ ಜಿಲ್ಲೆ ಪೌರಕಾರ್ಮಿಕರ ಶ್ರಮದಿಂದ ಸ್ವಚ್ಛತೆಯಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದರು.

ವಾರ್ಡ್‌ಗಳಲ್ಲಿ ಪೌರ ಕಾರ್ಮಿಕರು ತಮ್ಮ ದೈನಂದಿನ ಕಾರ್ಯಗಳಲ್ಲಿ ಟೈರ್‌ಗಳು, ಟ್ಯೂಬ್, ಪ್ಲಾಸ್ಟಿಕ್ ತ್ಯಾಜ್ಯಗಳು, ವಿಲೇವಾರಿ ಮಾಡುವುದು, ಮಳೆಗಾಲದಲ್ಲಿ ನಿಂತ ನೀರುಗಳನ್ನು ಸರಾಗವಾಗಿ ಹರಿಯುವಂತೆ ಮಾಡುವುದು, ಚರಂಡಿಗಳನ್ನು ಸ್ವಚ್ಛಗೊಳಿಸುವುದು ಮತ್ತು ಮೊಡ್ಕಾ ವಸ್ತುಗಳಾದ ಒಡೆದ ಬಕೆಟ್, ಡಬ್ಬಿಗಳು, ಕೊಡಗಳು, ಇತ್ಯಾದಿ ಘನ ತ್ಯಾಜ್ಯ ವಸ್ತುಗಳನ್ನು ಗುಜರಿ ಅಂಗಡಿ ಮಾಲೀಕರಿಗೆ ಸ್ಥಳಾಂತರಗೊಳಿಸಲು ಸೂಚಿಸುವುದು. ಮಳೆಗಾಲದಲ್ಲಿ ಸಾರ್ವಜನಿಕರಿಗೆ ಡೆಂಘೀ ಕುರಿತು ನಗರಸಭೆಯ ಕಸದ ವಾಹನದಲ್ಲಿ ಆಡಿಯೋ ಕ್ಲಿಪ್‌ಗಳಲ್ಲಿ ಸಾರ್ವಜನಿಕರಿಗೆ ಮನ ಮುಟ್ಟುವಂತೆ ಪ್ರಚುರ ಪಡಿಸಬೇಕು ಎಂದರು.

ಜಿಲ್ಲೆಯ ಕೀಟಜನ್ಯ ಶಾಸ್ತ್ರಜ್ಞರಾದ ಅನ್ನಪೂರ್ಣಾ ಶೆಟ್ಟರ ಈಡೀಸ್ ಸೊಳ್ಳೆಗಳು ಉತ್ಪತ್ತಿ ಹಾಗೂ ನಿಯಂತ್ರಣ ಕುರಿತು ವಿವರಿಸಿದರು. ಈಡೀಸ್ ಜಾತಿಯ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ಶುದ್ಧವಾದ ನೀರಿನಲ್ಲಿ ಮತ್ತು ನೀರು ಶೇಖರಣಾ ಪರಿಕರಗಳು ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ನೀರಿನಲ್ಲಿ ವಂಶಾಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ಈಡೀಸ್ ಸೊಳ್ಳೆಗಳು, ಮೊಟ್ಟೆಗಳು ಸುಪ್ತಾವಸ್ಥೆಯಲ್ಲೇ ತಿಂಗಳಗಟ್ಟಲೆ ಇರುತ್ತವೆ. ಫೈರ್ ಬಕೆಟ್‌ಗಳಲ್ಲಿ, ಸಂಗ್ರಹವಿರುವ ನೀರಿನಲ್ಲಿ ಈಡೀಸ್ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಟೈರ್‌ಗಳನ್ನು ಮಳೆ ನೀರು ಸಂಗ್ರಹವಾಗದಂತಹ ಪ್ರದೇಶಗಳಲ್ಲಿ ಇಡಬಾರದು. ಲಾರ್ವಾ ನಾಶಕ ಬಳಸಬೇಕು. ಪ್ಲಾಸ್ಟಿಕ್ ಹೋದಿಕೆಯಿಂದ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಕಾರ್ಮಿಕರು ಸೊಳ್ಳೆ ನಿರೋಧಕಗಳನ್ನು ಬಳಸಬೇಕು ಎಂದು ಹೇಳಿದರು.

ಗದಗ-ಬೆಟಗೇರಿ ನಗರಸಭೆ ಆಯುಕ್ತ ರಾಜಾರಾಂ ಪವಾರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿ, ಪ್ರಾಥಮಿಕ ಸುರಕ್ಷಾಧಿಕಾರಿಗಳು, ಮಲೇರಿಯಾ ಲಿಂಕ್ ವರ್ಕರ್ಸ್ ಹಾಗೂ ಪೌರಕಾರ್ಮಿಕರು ಹಾಜರಿದ್ದರು. ಇಬ್ರಾಹಿಂ ಮಕಾಂದಾರ ಸ್ವಾಗತಿಸಿದರು. ಈರಣ್ಣ ಚಲ್ಮಿ ಕಾರ್ಯಕ್ರಮ ನಿರೂಪಿಸಿದರು. ರಿಯಾಜ್ ಖಾ. ಘೂಡುನಾಯ್ಕರ ವಂದಿಸಿದರು.