ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಪ್ರಸ್ತುತ ಜಾಗತಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲು ಜೀವ ವಿಜ್ಞಾನವನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಮೈಸೂರಿನ ಲೈಫ್ ಸೈನ್ಸಸ್ ಮತ್ತು ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ ಮುಖ್ಯಸ್ಥ ಪ್ರೊ.ಕೆ.ಎ.ರವೀಶ್ ಅಭಿಪ್ರಾಯಪಟ್ಟರು.ಭಾರತೀ ವಿದ್ಯಾ ಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಭಾರತೀ ಕಾಲೇಜಿನ (ಸ್ವಾಯತ್ತ) ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಜೀವ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ ಮತ್ತು ಆಹಾರ ವಿಜ್ಞಾನ ಮತ್ತು ಪೌಷ್ಠಿಕಾಂಶ ವಿಭಾಗಗಳು ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಇಂಟಿಗ್ರೆಟಿವ್ ಅಪ್ರೂಚೆಸ್ ಇನ್ ಬಯಾಲಾಜಿಕಲ್ ಸೈನ್ಸ್ ಫಾರ್ ಗ್ಲೋಬಲ್ ಚಾಲೆಂಜಸ್ ಎಂಬ ವಿಷಯ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಂಶೋಧನಾ ವಿದ್ಯಾರ್ಥಿಗಳು ಜೀವ ವಿಜ್ಞಾನದ ಕೊಡುಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಜಾಗತಿಕ ಸವಾಲು ನಿವಾರಿಸಲು ಜೀವ ವಿಜ್ಞಾನ ಮತ್ತು ಇತರೆ ಅನ್ವಯಿಕ ವಿಷಯಗಳೊಂದಿಗೆ ಅದರ ಏಕೀಕರಣವು ಜಾಗತಿಕ ಸವಾಲು ಎದುರಿಸುವ ಏಕೈಕ ಮಾರ್ಗವಾಗಿದೆ ಎಂದರು.ಮಹಾರಾಷ್ಟ್ರದ ಅಹಮದ್‌ನಗರ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಇವಾನ್ ಅರಾನ್ಹಾ ಅವರು, ಮಾನವನ ಆರೋಗ್ಯದ ಮೇಲೆ ಮೈಕ್ರೋಪ್ಲಾಸ್ಟಿಕ್‌ಗಳ ಪರಿಣಾಮಗಳು, ಪರಿಸರ ವಿಜ್ಞಾನದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕರಾದ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಚೇರ್‍ಮನ್ ಡಾ.ಟಿ.ಎಸ್.ಹರ್ಷ - ಜಗತ್ತು ಎದುರಿಸುತ್ತಿರುವ ಹವಾಮಾನದಲ್ಲಿನ ಪ್ರಸ್ತುತ ಬದಲಾವಣೆಗಳು, ಏರುತ್ತಿರುವ ಜಾಗತಿಕ ತಾಪಮಾನ ಹಾಗೂ ದುಷ್ಪರಿಣಾಮಗಳಿಗೆ ಜನಸಂಖ್ಯಾ ಸ್ಫೋಟವು ಪ್ರಮುಖ ಕಾರಣ ಎಂಬ ವಿಷಯದ ಬಗ್ಗೆ ಮಾತನಾಡಿದರು.
ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿ ಸುಮಾರು 50ಕ್ಕೂ ಹೆಚ್ಚು ವಿವಿಧ ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು.ಕಾರ್ಯಕ್ರಮದಲ್ಲಿ ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಭಾರತೀ ಕಾಲೇಜಿನ ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ಕೇಂದ್ರದ ಡೀನ್ ಮತ್ತು ನಿರ್ದೇಶಕ ಪ್ರೊ.ಎಸ್.ನಾಗರಾಜು, ಐಕ್ಯುಎಸಿ ಸಂಯೋಜಕ ಮತು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಪಿ.ತೇಜಸ್ ಕುಮಾರ್, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪಿ.ಪುನೀತ್ ಮತ್ತು ವಿವಿಧ ವಿಭಾಗಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.