ಕುಕನೂರು:
ಸಾಮಾಜಿಕ ಜಾಲತಾಣ ದುರುಪಯೋಗ ಪಡಿಸಿಕೊಂಡು ಜನರನ್ನು ಶೋಷಣೆಗೆ ದೂಡುವ ಹೇಯ ಕೃತ್ಯಗಳು ಜರುಗುತ್ತಿವೆ. ಇಂತಹ ಘಟನೆಗಳಿಗೆ ಕಡಿವಾಣ ಹಾಗೂ ಜಾಗೃತೆ ಅವಶ್ಯವೆಂದು ಯಲಬುರ್ಗಾ ಹಿರಿಯ ಸಿವಿಲ್ ನ್ಯಾಯಾಧೀಶ ರಂಗಸ್ವಾಮಿ ಜಿ. ಹೇಳಿದರು.ತಾಲೂಕಿನ ತಳಕಲ್ಲ ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಪೊಲೀಸ್ ಇಲಾಖೆ ಮತ್ತು ಅಭಿಯೋಜನೆ ಇಲಾಖೆ ಆಶ್ರಯದಲ್ಲಿ ಜರುಗಿದ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವ ಕಳ್ಳ ಸಾಗಾಣಿಕೆ ಜಾಗತಿಕ ಮಟ್ಟದ ಸಮಸ್ಯೆಯಾಗಿದ್ದು ವಾಟ್ಸ್‌ಆ್ಯಪ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ಮುಖಾಂತರ ಪರಿಚಯಿಸಿಕೊಂಡು ಶೋಷಣೆಗೆ ಒಳಪಡಿಸಲಾಗುತ್ತಿದ್ದು ನಾವು ಎಚ್ಚೆತ್ತುಕೊಳ್ಳಬೇಕು ಎಂದರು.ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವನ್ನು ಅವಶ್ಯಕತೆಗೆ ತಕ್ಕಷ್ಟು ಮಾತ್ರ ಬಳಕೆ ಮಾಡಬೇಕು. ಅಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕು. ಸತತ ಓದು, ಉತ್ತಮ ಗುರಿ ಉನ್ನತ ಜೀವನ ನೀಡುತ್ತದೆ. ಎಂದಿಗೂ ಅಭ್ಯಾಸದಲ್ಲಿ ನಿಷ್ಕಾಳಜಿ ತಾಳಬಾರದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಡಿಡಿಪಿಒ ಸೋಮನಗೌಡ ಪಾಟೀಲ್ ಮಾತನಾಡಿ, ಸಾಮಾಜಿಕ ಜಾಲತಾಣ ಎಷ್ಟು ಪೂರಕವೋ ಅಷ್ಟೇ ಮಾರಕಗಳಾಗಿವೆ. ವಿದ್ಯಾರ್ಥಿಗಳು ಪ್ರತಿ ಹಂತದಲ್ಲಿ ಜಾಗೃತರಾಗಿರಬೇಕು. ಮೊಬೈಲ್ ಹೆಚ್ಚಾಗಿ ಬಳಕೆ ಮಾಡಬಾರದು ಎಂದು ಕಿವಿಮಾತು ಹೇಳಿದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಸಂಜುಕುಮಾರ ಪಚ್ಚೆಪೂರೆ, ಉಪ ತಹಸೀಲ್ದಾರ್ ಮುರುಳಿಧರಾವ್ ಕುಲಕರ್ಣಿ, ಅಪಾರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ಕಾರ್ಯದರ್ಶಿ ಮಹಾಂತೇಶ ಈಟಿ, ಜಂಟಿ ಕಾರ್ಯದರ್ಶಿ ಹಸನಸಾಬ್ ನದಾಫ್, ವಕೀಲರಾದ ಎ.ಎಂ. ಪಾಟೀಲ್, ಮಹೇಶ್ವರಿ ಸಾವಳಗಿಮಠ, ಮುಖ್ಯಶಿಕ್ಷಕ ವಿ.ಎನ್. ಸಜ್ಜನ, ಶಿಕ್ಷಕರಾದ ಪ್ರಮೋದ ರಡ್ಡಿ, ಫಕೀರಪ್ಪ ವಾಲ್ಮೀಕಿ, ಸಮಿತಿ ಸಿಬ್ಬಂದಿ ರಾಘವೇಂದ್ರ ಕೋಳಿಹಾಳ್ ಇದ್ದರು.