ಸವಣೂರು: ಪಂಚ ಗ್ಯಾರಂಟಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಭಾಸ ಮಜ್ಜಗಿ ತಿಳಿಸಿದರು.ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಪಂಚ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ಪ್ರತಿಯೊಂದು ಹಳ್ಳಿಯ ಪ್ರತಿ ಕಟ್ಟ ಕಡೆ ವ್ಯಕ್ತಿಗೂ ತಲುಪುವ ಕೆಲಸವಾಗಬೇಕಿದೆ. ಅಧಿಕಾರಿಗಳೊಂದಿಗೆ ಸಮಿತಿ ಸದಸ್ಯರು ಸಹ ಕೈಜೋಡಿಸಲು ಸನ್ನದ್ಧರಾಗಿ ಪಂಚ ಗ್ಯಾರಂಟಿಗಳನ್ನು ಪ್ರತಿ ಮನೆಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು. ತಾಲೂಕಿನಲ್ಲಿ ಬಿಪಿಎಲ್, ಅಂತ್ಯೋದಯ, ಎಪಿಎಲ್ ಸೇರಿದಂತೆ ಒಟ್ಟು 42190 ಕಾರ್ಡ್‌ಗಳಿವೆ. ಅದರಲ್ಲಿ ಕೇವಲ 39310 ಕಾರ್ಡ್‌ಗಳಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. ಇನ್ನುಳಿದ ಕಾರ್ಡ್‌ಗಳಿಗೆ ಇನ್ನೂವರೆಗೂ ಏಕೆ ಯೋಜನೆಯ ಲಾಭ ಮುಟ್ಟುತ್ತಿಲ್ಲ ಎಂದು ಪ್ರಶ್ನಿಸಿದರು.
ಪಾಲನೆಯಾಗದ ಅನುಪಾಲನೆ:
ಕಳೆದ ಮೂರು ಸಭೆಗಳಲ್ಲಿ ಹೂವಿನಶಿಗ್ಲಿ ಗ್ರಾಮದ ಮಾರ್ಗಕ್ಕೆ ಬಸ್ ಆರಂಭಿಸಲು ಸೂಚಿಸಿದರೂ ಪಾಲನೆಯಾಗಿಲ್ಲ. ಪಕ್ಕದಲ್ಲಿರುವ ನಾಯಿಕೆರೂರು ಗ್ರಾಮಕ್ಕೆ ಹೊಸ ಮಾರ್ಗ ಮಾಡಲು ವಿಭಾಗೀಯ ವ್ಯವಸ್ಥಾಪಕರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಅವರ ಆದೇಶದ ನಂತರ ಹೊಸ ಮಾರ್ಗಕ್ಕೆ ಬಸ್ ಸಂಚಾರಗೊಳಲಿದೆ ಎಂದರು.ಹಿರೇಮೂಗದೂರ ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದ ಗ್ರಾಮ ಪಂಚಾಯಿತಿಯಿಂದ ಒಪ್ಪಿಗೆ ನೀಡಿದಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಘಟಕ ವ್ಯವಸ್ಥಾಪಕರು ತಿಳಿಸಿದರು.
ತವರಮೆಳ್ಳಿಹಳ್ಳಿ ಗ್ರಾಮದ ಟಿಸಿಯನ್ನು ಸ್ಥಳಾಂತರ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಹೆಸ್ಕಾಂ ಇಲಾಖೆಯಲ್ಲಿ ಬಜೆಟ್ ಇಲ್ಲ. ಸಂಬಂಧಿಸಿದ ಗ್ರಾಹಕರು ಅದರ ವೆಚ್ಚ ಭರಿಸಬೇಕಾಗುತ್ತದೆ. ಗೃಹಜ್ಯೋತಿ ಯೋಜನೆಯಡಿಯಲ್ಲಿ 39293 ಗ್ರಾಹಕರಲ್ಲಿ 37733 ಗ್ರಾಹಕರು ಅರ್ಹ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ವಿದ್ಯುತ್ ಕಂಬ ಎಲ್ಲೆಂದರಲ್ಲಿ ಅಳವಡಿಸದೇ ಸಂಬಂಧಿಸಿದ ಪಿಆರ್‌ಡಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಸರಿಯಾದ ಮಾಹಿತಿ ಪಡೆದು ಕಂಬ ಅಳವಡಿಸಲು ಸೂಚಿಸಲಾಯಿತು.