ಮಕ್ಕಳ ಸುರಕ್ಷತಾ ಮುಂಜಾಗ್ರತಾ ಕ್ರಮಗಳ ಕುರಿತು ಕಾರ್ಯಾಗಾರ
ಬಸವೇಶ್ವರ ಗ್ರಾಮ ಅಭಿವೃದ್ಧಿ ಸಮಿತಿ, ಲೊಯೋಲ ವಿಕಾಸ ಕೇಂದ್ರ ಹಾಗೂ ಗ್ರಾಪಂ ಚವಡಳ್ಳಿ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಎಬಿಸಿಡಿ ಅನುಸರಣಾ ತರಬೇತಿ ಮತ್ತು ಮಕ್ಕಳ ಸುರಕ್ಷತಾ ಮುಂಜಾಗ್ರತಾ ಕ್ರಮಗಳ ಕುರಿತು ಕಾರ್ಯಾಗಾರ ತಾಲೂಕಿನ ಚವಡಳ್ಳಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಜರುಗಿತು.
ಪೊಲೀಸ್ ಇಲಾಖೆ ಠಾಣೆ ಎಎಸ್‌ಐ ಗಂಗಾಧರ ಹೊಂಗಲ ಮಾತನಾಡಿ, ಅಪರಿಚಿತರೊಡನೆ ವ್ಯವಹರಿಸುವಾಗ ಎಚ್ಚರಿಕೆ ವಹಿಸುವುದು, ತುರ್ತು ಸಂದರ್ಭದಲ್ಲಿ ಪೋಲಿಸರ ಸಹಾಯ ಪಡೆಯುವುದು, ಸೈಬರ್ ಅಪರಾಧಗಳಿಂದ ರಕ್ಷಿಸಿಕೊಳ್ಳುವುದು, ಯಾವುದೇ ವ್ಯಕ್ತಿ ಪೋನ್ ಕರೆ ಮಾಡಿ ಬ್ಯಾಂಕ್ ಖಾತೆ ಸಂಖ್ಯೆ ಹೇಳಬಾರದು, ಬಾಲ್ಯ ವಿವಾಹ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟುವುದು, ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತಾ ಮುನ್ನೆಚ್ಚರಿಕೆ ಪಾಲಿಸುವುದು, ಮಕ್ಕಳ ಸಹಯವಾಣಿ ೧೦೯೮ ಕರೆ ಮಾಡುವುದು, ತೊಂದರೆಗೊಳಗಾದ ಸಂದರ್ಭ ೧೧೨ ಕರೆ ಮಾಡಿದಾಗ ನಿಮಗೆ ಸ್ಪಂದನೆ ನೀಡುತ್ತೇವೆ ಎಂದು ತಿಳಿಸಿದರು.ಈ ತರಬೇತಿಯ ಸಂಯೋಜಕ ಲಕ್ಷ್ಮಣ ಮೂಳೆ ಮಾತನಾಡಿ, ಗ್ರಾಮ ಅಭಿವೃದ್ಧಿ ಸಮಿತಿ ಸಾಮರ್ಥ್ಯ ಹೆಚ್ಚಿಸಲು ಹಾಗೂ ಸುಸ್ಥಿರತೆಯತ್ತ ಕೊಂಡೊಯ್ಯಲು, ಗ್ರಾಮದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು, ಎಲ್‌ವಿಕೆ ಸಂಸ್ಥೆಯು ಸುಸ್ಥಿರ ಅಭಿವೃದ್ಧಿ ಯೋಜನೆಯಲ್ಲಿ ಎಬಿಸಿಡಿ ತರಬೇತಿ ಆಯೋಜಿಸಿದೆ ಎಂದರು.
ಮಂಗಳೂರಿನಿಂದ ಸೆಂಟ್ ಅಲೋಶಿಯಸ್ ಡೀಮ್ಡ್-ಟು-ಬಿ-ಯೂನಿವರ್ಸಿಟಿ ಕಾಲೇಜಿನಿಂದ ಬಂದಂತ ಎಂಎಸ್ ಡಬ್ಲೂ ವಿದ್ಯಾರ್ಥಿಗಳಿಂದ ಮಕ್ಕಳ ಹಕ್ಕು, ಬಾಲ್ಯ ವಿವಾಹ, ಮಕ್ಕಳ ಸುರಕ್ಷತೆ, ಮಕ್ಕಳ ಜನನ ಪ್ರಮಾಣ ಪತ್ರ, ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳಿಗೆ ಚಚ್ಚುಮದ್ದು ಹಾಕಿಸುವ ದೃಶ್ಯಾವಳಿ ಕಣ್ಮುಂದೆ ಪ್ರದರ್ಶನ ಮಾಡಿ ಜನರ ಮನಸೆಳೆದರು. ಗ್ರಾಪಂ ಪಿಡಿಒ ಗಣಪತಿ ಪಿಲ್ಲೋಜಿ ಉದ್ಘಾಟಿಸಿ ಮಾತನಾಡಿದರು.