ಪುರುಷ ಪ್ರಯತ್ನ, ದೇವರ ಅನುಗ್ರಹದಿಂದ ಯಶಸ್ಸು ಸಾಧ್ಯ: ಸ್ವರ್ಣವಲ್ಲೀ‌ ಶ್ರೀ

KannadaprabhaNewsNetwork |  
Published : Aug 23, 2026, 02:30 AM IST
ಬೆಳಗಿನಿಂದ ಮಾತೆಯರು ಶಂಕರಾಚರ್ಯರ ಸ್ತೋತ್ರ,ಗೀತಾ ಪಠಣ, ಕುಂಕುಮಾರ್ಚನೆ ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನದಲ್ಲಿ ತೊಡಗಿಕೊಂಡರು. ಈ ಸಂದರ್ಭದಲ್ಲಿ ಮೆಣಸಿ ಸೀಮೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾಪುರ್ಸ್ಕಾರ ಕಾರ್ಯಕ್ರಮವೂ ಶ್ರೀಗಳಿದ ಜರುಗಿತು. ರಾಜಾರಾಮ ಹೆಗಡೆ, ನಾರಾಯಣ ಹೆಗಡೆ, ದಿನೇಶ ಹೆಗಡೆ ಹಾಗೂ ಇತರರು ಇದ್ದರು. | Kannada Prabha

ಸಾರಾಂಶ

ಪುರುಷ ಪ್ರಯತ್ನ ಮತ್ತು ದೇವರ ಅನುಗ್ರಹದಿಂದ ಜೀವನದಲ್ಲಿ ಯಶಸ್ಸು ಸಾಧ್ಯ. ನಮ್ಮ ಜೀವನ ಪ್ರಾರ್ಥನೆ, ಪ್ರಯತ್ನಗಳ ಮಿಶ್ರಣವಾಗಬೇಕು.

ಕನ್ನಡಪ್ರಭ ವಾರ್ತೆ ಶಿರಸಿ

ಪುರುಷ ಪ್ರಯತ್ನ ಮತ್ತು ದೇವರ ಅನುಗ್ರಹದಿಂದ ಜೀವನದಲ್ಲಿ ಯಶಸ್ಸು ಸಾಧ್ಯ. ನಮ್ಮ ಜೀವನ ಪ್ರಾರ್ಥನೆ, ಪ್ರಯತ್ನಗಳ ಮಿಶ್ರಣವಾಗಬೇಕು ಎಂದು ಸೋಂದಾ ಸ್ವರ್ಣವಲ್ಲೀ‌ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮಿಗಳು ನುಡಿದರು.

ಚಾತುರ್ಮಾಸ್ಯದ ಸಂದರ್ಭ ಜಪ-ಅರ್ಚನೆ, ಪೂಜೆ, ಅಭಿಷೇಕ ಮುಂತಾದ ಸೇವೆಗಳನ್ನು ಶ್ರದ್ಧೆಯಿಂದ ಸಲ್ಲಿಸಿದ ಮೆಣಸಿ ಸೀಮೆಯ ಭಕ್ತಜನರು ಹಾಗೂ ಮಾತೆಯರನ್ನು ಉದ್ದೇಶಿಸಿ ಆಶೀರ್ವಚನ ನುಡಿದರು. ಮನುಷ್ಯನ ಜೀವನದ ಯಶಸ್ಸಿಗೆ ಕಾರಣವೇನು ಎಂಬ ಮೂಲಭೂತ ಮತ್ತು ಗಂಭೀರ ಪ್ರಶ್ನೆಗೆ ಶ್ರೀಗಳು ಶಾಸ್ತ್ರಧಾರಿತವಾಗಿ ವಿವರಿಸಿದ ಶ್ರೀಗಳು, ಮಾನವ ಜೀವನದಲ್ಲಿ ಯಶಸ್ಸು ಹೇಗೆ ದೊರೆಯುತ್ತದೆ ಎಂಬ ವಿಷಯದಲ್ಲಿ ಸಮಾಜದಲ್ಲಿ ಎರಡು ವಿಭಿನ್ನ ದೃಷ್ಟಿಕೋನಗಳನ್ನು ಕಾಣಬಹುದಾಗಿದೆ. ಅವು ಪುರುಷ ಪ್ರಯತ್ನ ಮತ್ತು ದೈವಾನುಗ್ರಹ ಎಂದರು.

ಸತತ ಪ್ರಯತ್ನಶೀಲನಾದವನಿಗೆ ಅಂದರೆ ಪುರುಷಸಿಂಹನಿಗೆ ಯಶಸ್ಸೆಂಬ ಲಕ್ಷ್ಮಿ ತಾನಾಗಿಯೇ ಒಲಿದು ಬರುತ್ತಾಳೆ. ಎಲ್ಲವೂ ದೈವಬಲದಿಂದಲೇ ಸಿಗಬೇಕು ಎಂದು ಹೇಳುತ್ತಾರೆ. ಆದ್ದರಿಂದ ದೈವವನ್ನು ಬದಿಗೊತ್ತಿ ನಿನ್ನ ಆತ್ಮಶಕ್ತಿಯಿಂದ ಪುರುಷಪ್ರಯತ್ನ ಮಾಡು; ಶ್ರಮವಹಿಸಿ ಪ್ರಯತ್ನಿಸಿದ ಮೇಲೂ ಕಾರ್ಯ ಸಿದ್ಧಿಸದಿದ್ದರೆ ಅದರ ಬಗ್ಗೆ ಬೇಸರಿಸುವ ಅಗತ್ಯವಿಲ್ಲ. ಇದು ಒಂದು ದೃಷ್ಟಿಕೋನ ಎಂದು ವಿವರಿಸಿದರು.

ಇದಕ್ಕೆ ವಿರುದ್ಧವಾಗಿ, ಕೇವಲ ಸ್ವಪ್ರಯತ್ನದಿಂದ ಏನೂ ಸಾಧ್ಯವಿಲ್ಲ, ಭಗವಂತನ ಇಚ್ಛೆ ಅಥವಾ ದೈವಬಲವಿದ್ದರೆ ಮಾತ್ರ ಕಾರ್ಯಗಳು ಯಶಸ್ವಿಯಾಗುತ್ತವೆ ಎಂದು ಪ್ರತಿಪಾದಿಸುವ ಮತ್ತೊಂದು ವರ್ಗವಿದೆ ಎಂದರು.

ಹೀಗೆ ಎರಡೂ ವಾದಗಳು ಲೋಕದಲ್ಲಿ ಇರುವುದನ್ನು ನಾವು ಕಾಣುತ್ತೇವೆ. ಆದರೆ ಭಗವಂತ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ನಮ್ಮ ಪ್ರಯತ್ನವೂ ಬೇಕು, ದೇವರ ಅನುಗ್ರಹವೂ ಬೇಕು. ಈ ಎರಡೂ ಕೂಡಿದಾಗಲೇ ಸರಿಯಾದ ಯಶಸ್ಸು ಎಂದು. ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಪುರುಷ ಪ್ರಯತ್ನ ಮತ್ತು ದೈವಾನುಗ್ರಹ ಎರಡೂ ಒಟ್ಟಿಗೆ ಇರಬೇಕು ಎಂದರು.

ಮನುಷ್ಯ ಪ್ರಯತ್ನಕ್ಕೆ ದೈವಕೃಪೆ ಮೇಳೈಸಿದಾಗ ಮಾತ್ರ ಸತ್ಫಲ ದೊರೆಯುತ್ತದೆ. ಅಲ್ಲಿಯವರೆಗೆ ತಾಳ್ಮೆಯಿಂದ ಇರಬೇಕು. ಆದ್ದರಿಂದ ಎಲ್ಲರೂ ಮೂಲಸತ್ವವಾದ ಪರಮಾತ್ಮನನ್ನು ಸದಾ ನೆನಪಿನಲ್ಲಿಟ್ಟುಕೊಂಡು, ಶಾಸ್ತ್ರೋಕ್ತವಾದ ಕ್ರಮಬದ್ಧ ಪ್ರಯತ್ನ ಹಾಗೂ ಈಶ್ವರ ಪ್ರಾರ್ಥನೆಗಳ ಮೂಲಕ ಪ್ರಾರಬ್ಧವನ್ನು ದಾಟಿ ಜೀವನದಲ್ಲಿ ವಿಜಯವನ್ನು ಸಾಧಿಸಬೇಕು ಎಂದರು.

ಬೆಳಗಿನಿಂದ ಮಾತೆಯರು ಶಂಕರಾಚರ್ಯರ ಸ್ತೋತ್ರ, ಗೀತಾ ಪಠಣ, ಕುಂಕುಮಾರ್ಚನೆ ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನದಲ್ಲಿ ತೊಡಗಿಕೊಂಡರು. ಈ ಸಂದರ್ಭ ಮೆಣಸಿ ಸೀಮೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ಜರುಗಿತು. ರಾಜಾರಾಮ ಹೆಗಡೆ, ನಾರಾಯಣ ಹೆಗಡೆ, ದಿನೇಶ ಹೆಗಡೆ ಹಾಗೂ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸ: ಪೊನ್ನಣ್ಣ
ಸದ್ಗುಣಗಳೇ ಮಾನವನ ಧೀಶಕ್ತಿಯಾಗಲಿ: ದಿನೇಶ ಪೂಜಾರ