ನದಿಯಲ್ಲಿ ಸ್ನಾನಕ್ಕೆ ಹೋದ ತಾಯಿ ​ಮಗಳು ನೀರು ಪಾಲು

KannadaprabhaNewsNetwork |  
Published : Aug 23, 2026, 02:30 AM IST
ಫೋಟೋವಿವರ- (22ಎಚ್‌ಪಿಟಿ1) ಹಂಪಿಯಲ್ಲಿ ಶನಿವಾರ ತಾಯಿ ಮಗಳು ತುಂಗಭದ್ರಾ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಮೃತ ದೇಹಗಳ ಶೋಧನೆ ನಡೆಸುತ್ತಿರುವುದು | Kannada Prabha

ಸಾರಾಂಶ

ಪ್ರವಾಸಕ್ಕೆಂದು ಹಂಪಿಗೆ ಬಂದಿದ್ದ ತಾಯಿ, ಮಗಳು ಸ್ನಾನಘಟ್ಟದ ತುಂಗಭದ್ರಾ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ಶನಿವಾರ ಹಂಪಿಯಲ್ಲಿ ನಡೆದಿದೆ.

ಹೊಸಪೇಟೆ: ಪ್ರವಾಸಕ್ಕೆಂದು ಹಂಪಿಗೆ ಬಂದಿದ್ದ ತಾಯಿ​, ಮಗಳು ಸ್ನಾನಘಟ್ಟದ ತುಂಗಭದ್ರಾ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ಶನಿವಾರ ಹಂಪಿಯಲ್ಲಿ ನಡೆದಿದೆ.

ಕರ್ನೂಲು ಜಿಲ್ಲೆಯ ಸೂಳೆಕೆರೆ ಗ್ರಾಮದ ಶಾಹೀನ್ (38) ಹಾಗೂ ಅವರ ಪುತ್ರಿ ಯಾಸ್ಮೀನ್ (13) ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ತಾಯಿ ಮಗಳಾಗಿದ್ದಾರೆ. ಇವರು ತಮ್ಮ ಸಂಬಂಧಿಕರೊಂದಿಗೆ ಹಂಪಿಗೆ ಪ್ರವಾಸಕ್ಕೆ ಬಂದಿದ್ದರು. ಸುಮಾರು 20 ಜನರು ಪ್ರವಾಸಕ್ಕೆಂದು ಬಂದಾಗ ಬೆಳಗ್ಗೆ ಅಡುಗೆ ಮಾಡಿದ ಬಳಿಕ ತುಂಗಭದ್ರಾ ನದಿಯ ಸ್ನಾನಘಟ್ಟದಲ್ಲಿ ಸ್ನಾನಕ್ಕೆಂದು ತೆರಳಿದ ವೇಳೆ ತಾಯಿ, ​ಮಗಳು ಕಾಲುಜಾರಿ ನದಿಗೆ ಬಿದ್ದು ನೀರಿನಲ್ಲಿ ಕಣ್ಮರೆಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸಂಬಂಧಿಕರು ಆತಂಕಗೊಂಡು ನೀರಿನಲ್ಲಿ ಕೊಚ್ಚಿಹೋದ ತಾಯಿ​-ಮಗಳಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದರು. ತಕ್ಷಣವೇ ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ಪೊಲೀಸರು, ಅಗ್ನಿ ಶಾಮಕದಳ ಸಿಬ್ಬಂದಿ, ಸ್ಥಳೀಯ ಈಜುಗಾರರು, ಬೋಟಿಂಗ್‌ ನಡೆಸುವರು ಸೇರಿದಂತೆ ಸುಮಾರು 20 ಜನ ಶೋಧನಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ತುಂಗಭದ್ರಾ ನದಿಯ ನೀರಿನ ಹರಿವು ಈಗ ಹೆಚ್ಚಾಗಿದೆ. ಶಾಹೀನ್ ಪತಿ ಸ್ಥಳಕ್ಕೆ ಆಗಮಿಸಿದ್ದು, ಪತ್ನಿ, ಮಗಳನ್ನು ನೆನೆದು ರೋಧಿಸುತ್ತಿದ್ದರು.

ತಾಯಿ ಶವ ಪತ್ತೆ

ಹಂಪಿಯ ತುಂಗಭದ್ರಾ ನದಿಯಲ್ಲಿ ಕೊಚ್ಚಿ ಹೋಗಿದ್ದ ತಾಯಿ-ಮಗಳ ಪೈಕಿ ತಾಯಿಯ ಶವ ಶನಿವಾರ ಸಂಜೆ ಪತ್ತೆಯಾಗಿದೆ. ಮಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ದಾವಣಗೇರೆಯಿಂದ ನುರಿತ ಈಜುಗಾರರು, ಎಸ್‌ಡಿಆರ್‌ಎಫ್ ತಂಡ ಶನಿವಾರ ರಾತ್ರಿ ಹಂಪಿಗೆ ಆಗಮಿಸಿದ್ದು, ಭಾನುವಾರ ಬೆಳಗ್ಗೆಯಿಂದಲೇ ಶೋಧ ಕಾರ್ಯ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಂಪಿ ಪ್ರವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನ ನಡೆದಿದೆ.

ಸ್ಮಯೋರ್‌ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು

ಮರಿಯಮ್ಮನಹಳ್ಳಿ: ಕಾರ್ಖಾನೆಯಲ್ಲಿ ಸುರಕ್ಷತಾ ಸಾಧನಗಳಿಲ್ಲದೆ ಕಾರ್ಯನಿರ್ವಹಿಸಿದ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ಗಾಳೆಮ್ಮನಗುಡಿ ಸಮೀಪದಲ್ಲಿರುವ ಸ್ಮಯೋರ್‌ ಕಾರ್ಖಾನೆಯಲ್ಲಿ ಶುಕ್ರವಾರ ನಡೆದಿದೆ. ಸಂಡೂರಿನ ನಿವಾಸಿ ರಮೇಶ್ (27) ಮೃತ ಕಾರ್ಮಿಕ. ಸ್ಮಯೋರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಹಾಗೂ ಇತರೆ ಕಾರ್ಮಿಕರಿಗೆ ಸುರಕ್ಷಿತ ಸಾಧನ ಸಲಕರಣೆಗಳನ್ನು ನೀಡದೇ ಕನ್ವೇರ್ ಬೆಲ್ಟ್ ಎಳೆಯುತ್ತಿರುವಾಗ ಎಡ ಮಗ್ಗುಲಾಗಿ ಬಿದ್ದು ಎಚ್ಚರ ತಪ್ಪಿದ್ದ. ತಕ್ಷಣವೇ ಹೊಸಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನಿಗೆ ಸುರಕ್ಷತಾ ಪರಿಕರಗಳನ್ನು ನೀಡದೇ ಕೆಲಸ ಮಾಡಿಸಿದ್ದರಿಂದ ಮೃತಪಟ್ಟಿದ್ದಾನೆ ಎಂದು ಮೃತನ ತಂದೆ ಪ್ರಹ್ಲಾದ್ ನೀಡಿದ ದೂರಿನ ಮೇರೆಗೆ ಸ್ಮಯೋರ್‌ ಕಾರ್ಖಾನೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಧ್ಯಕ್ಷರು, ನಿರ್ದೇಶಕರ ಕಿರುಕುಳಕ್ಕೆ ಬೇಸತ್ತು ಕಾರ್ಯದರ್ಶಿ ಆತ್ಮಹತ್ಯೆ

ಹೊಸಪೇಟೆ: ನಗರದ ಚಿತ್ತವಾಡ್ಗಿಯ ಕೃಷಿ ಸೊಸೈಟಿ ಅಧ್ಯಕ್ಷರು ಹಾಗೂ ನಿರ್ದೇಶಕರ ಕಿರುಕುಳಕ್ಕೆ ಬೇಸತ್ತು ವಿವಿಧೋದ್ದೇಶ ಕೃಷಿ ಗ್ರಾಮೀಣ ಸೊಸೈಟಿ ಕಾರ್ಯದರ್ಶಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ.ಸ್ಥಳೀಯ ಚಿತ್ತವಾಡಿಯ ವಿವಿಧೋದ್ದೇಶ ಕೃಷಿ ಗ್ರಾಮೀಣ ಸೊಸೈಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಿ.ನಿಂಗಪ್ಪ (55) ಕಚೇರಿಯಲ್ಲಿಯೇ ಶುಕ್ರವಾರ ವಿಷ ಸೇವಿಸಿದ್ದಾರೆ. ಸೊಸೈಟಿ ಸಿಬ್ಬಂದಿ ತಕ್ಷಣ ನಿಂಗಪ್ಪನನ್ನು ನಗರದ ನೂರು ಹಾಸಿಗೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಚಿತ್ತವಾಡಿಯ ಸೊಸೈಟಿಯ ನಿರ್ದೇಶಕ ಸೀನಪ್ಪ ಮತ್ತು ಅಧ್ಯಕ್ಷ ಸತೀಶ್‌ ಇಬ್ಬರೂ ಲೆಕ್ಕಪತ್ರ ವಿಚಾರದಲ್ಲಿ ಪದೇ ಪದೇ ಕಿರಿಕಿರಿ ಮಾಡುತ್ತಿದ್ದರು. ಶುಕ್ರವಾರ ಸಹ ಕಿರಿಕಿರಿ ಮಾಡಿದ್ದು. ಇದರಿಂದ ಬೇಸತ್ತ ನಿಂಗಪ್ಪ ಕಚೇರಿಯಲ್ಲೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಹಾಗೂ ರೈತ ಮುಖಂಡರು ಹಾಗೂ ಕುಟುಂಬಸ್ಥರು ಒತ್ತಾಯಿಸಿದ್ದಾರೆ.ಈ ಕುರಿತು ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸ: ಪೊನ್ನಣ್ಣ
ಸದ್ಗುಣಗಳೇ ಮಾನವನ ಧೀಶಕ್ತಿಯಾಗಲಿ: ದಿನೇಶ ಪೂಜಾರ