ಅಡುಗೆ ಅನಿಲ ಬಳಸುವಾಗ ಎಚ್ಚರವಿರಲಿ: ಎಚ್.ಎಸ್.ಮಂಜು

KannadaprabhaNewsNetwork | Published : Dec 2, 2024 1:19 AM

ಸಾರಾಂಶ

ಅಡುಗೆ ಮಾಡುವ ಸಮಯದಲ್ಲಿ ಮನಸ್ಸು ಎಲ್ಲೋ ಇರಬಾರದು. ಸ್ಟೌವ್ ಹಚ್ಚುವ ಮುನ್ನವೇ ಅನಿಲ ಸೋರಿಕೆಯಾಗುತ್ತಿದೆಯೇ, ಪೈಪ್‌ಗಳು ಸುರಕ್ಷಿತವಾಗಿವೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಅಡುಗೆ ಅನಿಲ ಸೋರಿಕೆಯಾಗುವುದು ಕಂಡುಬಂದ ಕೂಡಲೇ ವಿತರಕರಿಗೆ ತಿಳಿಸಿ ಸರಿಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಅಡುಗೆ ಅನಿಲ ಬಳಸುವ ವೇಳೆ ಮಹಿಳೆಯರು ಸದಾ ಎಚ್ಚರಿಕೆಯಿಂದ ಇರಬೇಕು. ಕೊಂಚ ನಿರ್ಲಕ್ಷ್ಯ ವಹಿಸಿದರೂ ಅಪಾಯ ನಿಶ್ಚಿತ ಎಂದು ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಹೇಳಿದರು.

ಎಚ್‌ಪಿ ಗ್ಯಾಸ್ ವಿತರಕರ ನೆರವಿನೊಂದಿಗೆ ನಗರದ ಶ್ರೀಲಕ್ಷ್ಮೀಜನಾರ್ದನ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ನಮ್ಮ ಅಡುಗೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಡುಗೆ ಮಾಡುವ ಸಮಯದಲ್ಲಿ ಮನಸ್ಸು ಎಲ್ಲೋ ಇರಬಾರದು. ಸ್ಟೌವ್ ಹಚ್ಚುವ ಮುನ್ನವೇ ಅನಿಲ ಸೋರಿಕೆಯಾಗುತ್ತಿದೆಯೇ, ಪೈಪ್‌ಗಳು ಸುರಕ್ಷಿತವಾಗಿವೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಅಡುಗೆ ಅನಿಲ ಸೋರಿಕೆಯಾಗುವುದು ಕಂಡುಬಂದ ಕೂಡಲೇ ವಿತರಕರಿಗೆ ತಿಳಿಸಿ ಸರಿಪಡಿಸಿಕೊಳ್ಳಬೇಕು. ಅನಿಲ ಸೋರಿಕೆ ಪರಿಶೀಲಿಸುವಾಗಲೂ ಬೆಂಕಿ ಕಡ್ಡಿ ಹಚ್ಚುವುದು ಅಥವಾ ಮೊಬೈಲ್ ಟಾರ್ಚ್ ಆನ್ ಮಾಡಬಾರದು. ಅದರಿಂದಲೂ ಅಪಾಯ ಸಂಭವಿಸುತ್ತದೆ ಎಂದು ಎಚ್ಚರಿಸಿದರು.

ಎಚ್‌ಪಿ ಗ್ಯಾಸ್‌ನ ದತ್ತೇಶ್ ಸೋನಿ ಅವರು ಉಪನ್ಯಾಸ ನೀಡಿ, ಅಡುಗೆ ಒಲೆ ಸದಾಕಾಲ ಮೇಲಿರಬೇಕು. ಅಡುಗೆ ಅನಿಲ ಸಿಲಿಂಡರ ಕೆಳಭಾಗದಲ್ಲಿರಬೇಕು. ಕೆಲವರು ಅಡುಗೆ ಒಲೆಯನ್ನು ಕೆಳಗಿಟ್ಟು ಸಿಲಿಂಡರ್‌ನ್ನು ಪಕ್ಕದಲ್ಲಿರಿಸಿ ಅಡುಗೆ ಮಾಡುವುದೂ ಉಂಟು. ಅಡುಗೆ ಅನಿಲ ಪೂರೈಕೆಯ ಪ್ರಮಾಣವನ್ನು ರೆಗ್ಯುಲೇಟರ್ ನಿಯಂತ್ರಿಸುತ್ತಿರುತ್ತದೆ. ಅಡುಗೆ ಒಲೆಯನ್ನು ಕೆಳಗಿಟ್ಟ ಸಮಯದಲ್ಲಿ ಕೆಲವೊಮ್ಮೆ ಅನಿಲದ ಒತ್ತಡ ಹೆಚ್ಚಾಗಿ ಅಪಾಯ ಎದುರಾಗುವ ಸಾಧ್ಯತೆಗಳಿರುತ್ತವೆ ಎಂದರು.

ಕಂಪನಿಯಿಂದ ಪೂರೈಕೆಯಾಗುವ ರಬ್ಬರ್ ಪೈಪ್ ಮತ್ತು ರೆಗ್ಯುಲೇಟರ್‌ಗಳನ್ನೇ ಬಳಸಬೇಕು. ಕಡಿಮೆ ಬೆಲೆಗೆ ಸಿಗುವುದೆಂಬ ಕಾರಣಕ್ಕೆ ಬೇರೆ ರೆಗ್ಯುಲೇಟರ್‌ಗಳನ್ನು ಬಳಸಬಾರದು. ಅವು ಅಡುಗೆ ಅನಿಲ ಸಿಲಿಂಡರ್‌ಗೆ ಸರಿಯಾಗಿ ಕೂರದೆ ಅನಿಲ ಸೋರಿಕೆಯಾಗುವ, ಅಪಾಯ ಸೃಷ್ಟಿಸುವ ಸಾಧ್ಯತೆಗಳೂ ಇವೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಅಡುಗೆ ಅನಿಲ ಸಿಲಿಂಡರ್ ಸುರಕ್ಷತೆ ತಪಾಸಣೆ ಮಾಡುವ ವಿತರಕರಿಗೆ ನೆನಪಿನ ಕಾಣಿಕೆಗಳನ್ನು ನೀಡಲಾಆಯಿತು. ಅಡುಗೆ ಸ್ಪರ್ಧೆಯಲ್ಲಿ ವಿಜೇತರಾದ ರಂಜಿತಾ (ಪ್ರಥಮ), ಲಕ್ಷ್ಮೀ (ದ್ವಿತೀಯ), ಎಂ.ಪಿ.ಶ್ವೇತಾ (ತೃತೀಯ) ಅವರಿಗೆ ಬಹುಮಾನಗಳನ್ನು ನೀಡಲಾಯಿತು.

ಮುಡಾ ಅಧ್ಯಕ್ಷ ನಹೀಂ, ನಗರಸಭೆ ಸದಸ್ಯ ಎಚ್.ಎನ್.ರವಿ, ಶ್ರೀ ಲಕ್ಷ್ಮೀಜನಾರ್ದನ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಂಜನಾ, ಆಹಾರ ಇಲಾಖೆ ಅಧಿಕಾರಿ ರೇಣುಕಾ, ಎಚ್‌ಪಿ ಗ್ಯಾಸ್ ವ್ಯವಸ್ಥಾಪಕ ಶೇಖ್ ಮಸ್ತಾನ್, ಕೆ.ಪಿ.ಅರುಣಕುಮಾರಿ ಇತರರಿದ್ದರು.

Share this article