ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ತೆರಿಗೆ ವಿನಾಯ್ತಿ ನೀಡಿ ಜನಹಿತದ ಬಜೆಟ್ ಕೊಟ್ಟಿದೆ. ಕಾಂಗ್ರೆಸ್ ಸರ್ಕಾರದಂತೆ ಎಲ್ಲೂ ಹೊಸ ತೆರಿಗೆಗಳನ್ನು ಹಾಕಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರುಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ತೆರಿಗೆ ವಿನಾಯ್ತಿ ನೀಡಿ ಜನಹಿತದ ಬಜೆಟ್ ಕೊಟ್ಟಿದೆ. ಕಾಂಗ್ರೆಸ್ ಸರ್ಕಾರದಂತೆ ಎಲ್ಲೂ ಹೊಸ ತೆರಿಗೆಗಳನ್ನು ಹಾಕಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಭಾನುವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 9ನೇ ಬಜೆಟ್ ಜನಪ್ರಿಯತೆಗಿಂತ ಹೆಚ್ಚಾಗಿ ಜನಹಿತದ ಬಜೆಟ್ ಆಗಿದೆ. ಜನರ ಬದುಕಿನ ನಿತ್ಯದ ಸಮಸ್ಯೆಗಳಿಗೆ ಅವರು ಸ್ಪಂದಿಸಿದ್ದಾರೆ ಎಂದರು.ಕೇಂದ್ರ ಸರ್ಕಾರದಿಂದ ಪ್ರತಿ ಜಿಲ್ಲೆಗಳಲ್ಲಿ ಬಾಲಕಿಯರ ಹಾಸ್ಟೆಲ್ ನಿರ್ಮಿಸುವುದು ಮೊದಲ ಬಾರಿಯ ಕ್ರಮವಾಗಿದ್ದು, ಇದರಿಂದ ಮಹಿಳೆಯರ ಶಿಕ್ಷಣಕ್ಕೆ ಒತ್ತು ದೊರೆತಿದೆ. ಶ್ರೀಗಂಧದ ನಾಡು ಕರ್ನಾಟಕದ ಬಗ್ಗೆ ಹಿಂದಿನ ಸರ್ಕಾರಗಳು ಹೇಳಿರಲಿಲ್ಲ. ಶ್ರೀಗಂಧ ಬೆಳೆಯಲು ಈ ಬಜೆಟ್ ಉತ್ತೇಜನ ನೀಡಲಿದೆ. ಕೋಲಾರ, ತುಮಕೂರು, ಮೈಸೂರು, ಮಲೆನಾಡು ಭಾಗಗಳಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತದೆ. ಈ ಬೆಳೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹ ಸಿಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಬೆಂಗಳೂರಿಂದ ಹೈದ್ರಾಬಾದ್‌ಗೆ ಬಸ್ ಪ್ರಯಾಣ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿ ಹೈಸ್ಪೀಡ್ ರೈಲು ಯೋಜನೆ ನೀಡಲಾಗಿದೆ. ಯೋಜನೆಯಡಿ ಹೈದ್ರಾಬಾದ್-ಬೆಂಗಳೂರು, ಚೆನ್ನೈ-ಬೆಂಗಳೂರು ನಡುವೆ ಹೈಸ್ಪೀಡ್ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಹೈಸ್ಪೀಡ್ ರೈಲ್ವೆ ಕಾರಿಡಾರ್‌ನಿಂದ ಆರ್ಥಿಕ ಚಟುವಟಿಕೆಗಳಿಗೆ ವೇಗ ಸಿಗುತ್ತದೆ. ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಇದೇ ನಿಜವಾದ ಬ್ರ್ಯಾಂಡ್ ಬೆಂಗಳೂರು ಎಂದು ಅಶೋಕ್ ಹೇಳಿದರು.
