- ಅಮರಾವತಿಯಲ್ಲಿ ಸೇಂಟ್ ಅಲೋಶಿಯಸ್ ಇಂಟರ್ ನ್ಯಾಷನಲ್ ಸ್ಕೂಲ್ ಉದ್ಘಾಟನೆ ಕಾರ್ಯಕ್ರಮ
- ಬಲಹೀನರ ಸೇವೆಗೆ ದುಡಿದ ಸಂತ ಅಲೋಶಿಯಸ್ ಗೊಂಜಾಗ: ಥಾವರ್ ಚಂದ್ ಗೆಹ್ಲೋಟ್ - - - ಕನ್ನಡಪ್ರಭ ವಾರ್ತೆ ಹರಿಹರಜಲ, ವಾಯು, ಅರಣ್ಯ ಸಂರಕ್ಷಣೆಗೆ ಕಟಿಬದ್ಧರಾಗಬೇಕೆಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ನಗರ ಸಮೀಪದ ಅಮರಾವತಿಯ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಮಂಗಳವಾರ ನೂತನವಾಗಿ ಆರಂಭಿಸಿರುವ ಸೇಂಟ್ ಅಲೋಶಿಯಸ್ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ಸಂತ ಅಲೋಶಿಯಸ್ ಗೊಂಜಾಗ ಅವರ ೪೫೭ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮನುಷ್ಯ ಹಾಗೂ ಜೀವರಾಶಿಯ ಉಳಿವಿನ ರಹಸ್ಯ ಅಡಗಿರುವುದು ಜಲ, ವಾಯು, ಅರಣ್ಯದಲ್ಲಿ. ಈ ಅಂಶಗಳ ಉಳಿವಿಗೆ ನಾವು ಶಕ್ತಿ ಮೀರಿ ಪ್ರಯತ್ನಿಸಬೇಕಿದೆ. ಪ್ರಾಣಿ, ಪಕ್ಷಿಗಳು ಸಹಜವಾಗಿ ಬದುಕುವ, ಅರಳುವ ವಾತಾವರಣ ನಿರ್ಮಿಸಬೇಕಿದೆ ಎಂದರು.
ಬಹು ಹಿಂದೆಯೆ ಭಾರತ ಶಿಕ್ಷಣ, ಜ್ಞಾನದ ವಿಷಯದಲ್ಲಿ ಜಗತ್ತಿನ ಗುರುವಾಗಿತ್ತು. ನಳಂದ, ತಕ್ಷಶಿಲಾ, ವಿಶ್ವಶಿಲಾ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಮಾಡಲು ವಿದ್ಯಾರ್ಥಿಗಳು ವಿಶ್ವದೆಲ್ಲೆಡೆಯಿಂದ ಆಗಮಿಸುತ್ತಿದ್ದರು. ಗತಕಾಲದ ವೈಭವ ಮರಳಿಸಲು ಪ್ರಧಾನಿ ಮೋದಿ ಮುಖಂಡತ್ವದಲ್ಲಿ ಭಾರತ ಸರ್ಕಾರವು ಈಗ ನಳಂದ ವಿಶ್ವವಿದ್ಯಾನಿಲಯದ ಪರಿಸರದಲ್ಲಿಯೆ ನಳಂದ ವಿಶ್ವವಿದ್ಯಾಲಯ ಆರಂಭಿಸುವ ಕಾರ್ಯಕ್ಕೆ ಮುನ್ನುಡಿ ಇಟ್ಟಿದೆ ಎಂದರು.ಸಂತ ಅಲೋಶಿಯಸ್ ಗೊಂಜಾಗ ಅವರು ಬಲಹೀನರ ಸೇವೆಗೆ ಜೀವನ ಮುಡುಪಾಗಿಟ್ಟಿದ್ದರು. ಅವರ ಹೆಸರಲ್ಲಿ ಆರಂಭಿಸಿರುವ ಈ ಶಿಕ್ಷಣ ಸಂಸ್ಥೆಯು ೫೦೦ ವರ್ಷಗಳಿಂದ ಜಗತ್ತಿನ ೧೦೫ ದೇಶಗಳಲ್ಲಿ ಶಿಕ್ಷಣ ಪ್ರಸಾರದ ಕಾರ್ಯ ಮಾಡುತ್ತಿರುವುದು ಅಭಿನಂದನೀಯ ಕಾರ್ಯ. ಈ ಸಂಸ್ಥೆಯು ಬಡವರ್ಗದವರಿಗೆ ಶಿಕ್ಷಣ ಸೌಲಭ್ಯ ನೀಡುತ್ತಿದೆ ಎಂದರು.
ಶಿವಮೊಗ್ಗ ಧರ್ಮಕ್ಷೇತ್ರದ ಬಿಷಪ್ ರೆವೆರೆಂಡ್ ಡಾ.ಫ್ರಾನ್ಸಿಸ್ ಸೆರಾವೊ ಎಸ್.ಜೆ. ಮಾತನಾಡಿ, ಗುಣಮಟ್ಟದ ಹಾಗೂ ಸಮಾಜಮುಖಿ ಶಿಕ್ಷಣ ನೀಡಲು ಖ್ಯಾತವಾಗಿರುವ ಈ ಸಂಸ್ಥೆ ಅಂತರ ರಾಷ್ಟ್ರೀಯ ಗುಣಮಟ್ಟದೊಂದಿಗೆ ಆರಂಭಿಸುವ ಶಾಲೆಯಿಂದಾಗಿ ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿದೆ ಎಂದರು.ಶಾಸಕ ಬಿ.ಪಿ.ಹರೀಶ್ ಮಾತನಾಡಿ, ರಾಜ್ಯಪಾಲರು ಬಹು ಹಿಂದೆಯೇ ಹರಿಹರ ಸಮೀಪದ ಬಿರ್ಲಾ ಕಂಪನಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದವರು. ಆ ಹಳೆಯ ನೆನಪುಗಳ ಜೊತೆಗೆ ಅವರು ಹರಿಹರಕ್ಕೆ ಬಂದಿದ್ದಾರೆ. ಆ ಕಾರ್ಖಾನೆಯ ಅಧಿಕಾರಿಗಳನ್ನು ಭೇಟಿ ಮಡುವ ಹಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ಈಗ ಶಿಕ್ಷಣ ಎಂಬುದು ವ್ಯಾಪಾರೀಕರಣವಾಗಿದೆ. ಶ್ರೀಮತರಿಗಷ್ಟೆ ಶಿಕ್ಷಣ ಪಡೆಯಲು ಸಾಧ್ಯ ಎಂಬ ವಾತಾವರಣ ಸೃಷ್ಟಿಯಾಗಿದೆ. ಬಡವರ ಶಿಕ್ಷಣಕ್ಕೆ ಮಹತ್ವ ನೀಡುವ ಈ ವಿದ್ಯಾಸಂಸ್ಥೆಯು ಈ ಭಾಗದಲ್ಲಿ ಶಾಲೆ ಆರಂಭಿಸಿರುವುದು ಸೂಕ್ತವಾಗಿದೆ, ತಾಂತ್ರಿಕ ಶಿಕ್ಷಣದ ಕೋರ್ಸ್ಗಳನ್ನು ಆರಂಭಿಸುವತ್ತ ಈ ಸಂಸ್ಥೆಯ ಮುಖ್ಯಸ್ಥರು ಆಧ್ಯತೆ ನೀಡಬೇಕೆಂದು ಸಲಹೆ ನೀಡಿದರು.ಫಾ.ಮ್ಯಾಕ್ಸಿಮ್ ರಸ್ಕೀನ ಎಸ್.ಜೆ. ಹಾಗೂ ೧೨ ವಿದ್ಯಾಭಿಮಾನಿಗಳು, ಪೋಷಕರನ್ನೂ ಗೌರವಿಸಲಾಯಿತು. ರೆವೆರೆಂಡ್ ಫಾ.ಡಯಾನೀಶಿಯಸ್ ವಜ್ ಎಸ್.ಜೆ, ಮಂಗಳೂರಿನ ಸಂತ ಅಲೋಶಿಯಸ್ ಮಾತೃಸಂಸ್ಥೆ ರೆಕ್ಟರ್ ಆಗಿರುವ ಫಾದರ್ ಮೆಲ್ವಿನ್ ಪಿಂಟೋ ಎಸ್.ಜೆ., ಫಾ.ಎರಿಕ್ ಮಥಾಯಸ್, ಫಾ.ಮೆಲ್ವಿನ್ ಪಿಂಟೊ, ಚಂದ್ರಕಾಂತ್, ಶಾಲೆಯ ಪ್ರಾಂಶುಪಾಲೆ ರೀನಾ ಪಿಂಟೋ, ಬ್ಯಾಪ್ಟಿಸ್ಟ್ ಸನ್ನಿ ಗುಡಿನೋ ಹಾಗೂ ಮತ್ತಿತರರಿದ್ದರು.
- - - -೨೫ಎಚ್‌ಆರ್‌ಆರ್೧:ಹರಿಹರದ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಮಂಗಳವಾರ ನೂತನವಾಗಿ ಆರಂಭಿಸಿರುವ ಸೇಂಟ್ ಅಲೋಶಿಯಸ್ ಇಂಟರ್ ನ್ಯಾಷನಲ್ ಸ್ಕೂಲ್ ಹಾಗೂ ಸಂತ ಅಲೋಶಿಯಸ್ ಗೊಂಜಾಗ ಅವರ ೪೫೭ನೇ ಜಯಂತಿ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು.