ರೋಗಿಗಳ ಜತೆ ಸೌಜನ್ಯದಿಂದ ವರ್ತಿಸಿ: ಡಾ. ನಾಗಲಕ್ಷ್ಮಿ ಚೌಧರಿ

KannadaprabhaNewsNetwork |  
Published : Aug 08, 2025, 01:02 AM IST
ಹಾವೇರಿ ಜಿಲ್ಲಾಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ಮಹಿಳೆಯರ ಸಮಸ್ಯೆ ಆಲಿಸಿದರು. | Kannada Prabha

ಸಾರಾಂಶ

ಡಾ. ನಾಗಲಕ್ಷ್ಮಿ ಚೌಧರಿ ಅವರು ನಗರದ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಗುರುವಾರ ಭೇಟಿ ನೀಡಿ, ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ಮಹಿಳೆ ಹಾಗೂ ಮಕ್ಕಳನ್ನು ಆತ್ಮೀಯವಾಗಿ ಮಾತನಾಡಿಸಿದರು.

ಹಾವೇರಿ: ಆಸ್ಪತ್ರೆಗೆ ಬರುವ ಮಹಿಳೆಯರು ಹಾಗೂ ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡಬೇಕು ಹಾಗೂ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸೂಚಿಸಿದರು.ನಗರದ ಜಿಲ್ಲಾಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್‌ಗೆ ಗುರುವಾರ ಭೇಟಿ ನೀಡಿ, ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ಮಹಿಳೆ ಹಾಗೂ ಮಕ್ಕಳನ್ನು ಆತ್ಮೀಯವಾಗಿ ಮಾತನಾಡಿಸಿದ ಅವರು, ವೈದ್ಯರು ಚೆನ್ನಾಗಿ ಚಿಕಿತ್ಸೆ ಕೊಡುತ್ತಾರೆಯೇ?, ಸುಮ್ಮನೆ ಅಲೆದಾಡಿಸುತ್ತಾರಾ ಎಂದು ಮಹಿಳೆಯರನ್ನು ಪ್ರಶ್ನಿಸಿದರು. ಆಗ ಮಹಿಳೆಯರು ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಾರೆ ಹಾಗೂ ಸುಮ್ಮನೆ ಅಲೆದಾಡಿಸುವುದಿಲ್ಲ ಎಂದು ಅಧ್ಯಕ್ಷರಿಗೆ ಹೇಳಿದರು. ಶಸ್ತ್ರಚಿಕಿತ್ಸೆ ವಿಭಾಗ, ಹೆರಿಗೆ ವಿಭಾಗಕ್ಕೆ ತೆರಳಿ, ಬಾಣಂತಿ ಹಾಗೂ ಮಕ್ಕಳ ಆರೋಗ್ಯ ವಿಚಾರಿಸಿದರು, ಹಸುಗೂಸುಗಳನ್ನು ಎತ್ತಿಕೊಂಡು ಮುದ್ದಾಡಿದರು. ಮಾತೃವಂದನಾ ಸೌಲಭ್ಯ ಪಡೆಯುತ್ತಿರುವ ಬಗ್ಗೆ ವಿಚಾರಿಸಿದರು ಹಾಗೂ ಮಕ್ಕಳನ್ನು ಚೆನ್ನಾಗಿ ಓದಿಸುವಂತೆ ತಾಯಂದಿರಿಗೆ ಸಲಹೆ ನೀಡಿದರು.ಆಸ್ಪತ್ರೆಗೆ ಬರುವ ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ಕುಡಿಯುವ ನೀರು ಪೂರೈಕೆ ಮಾಡುವಂತೆ ಸೂಚಿಸಿದ ಅವರು, ಶೌಚಾಲಯ ಸ್ವಚ್ಛತೆ ಪರಿಶೀಲನೆ ಮಾಡಿದರು. ಸಖಿ ಒನ್ ಸ್ಟಾಪ್‌ ಸೆಂಟರ್‌ನಲ್ಲಿ ದೌರ್ಜನ್ಯ, ಪೋಕ್ಸೊ ಪ್ರಕರಣ ಸೇರಿದಂತೆ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಕ್ತಿ ಸದನಕ್ಕೆ ಭೇಟಿ: ಶಿವಾಜಿ ನಗರದಲ್ಲಿರುವ ನೊಂದ ಮಹಿಳೆಯರು ವಾಸವಿರುವ ಶಕ್ತಿ ಸದನಕ್ಕೆ ಭೇಟಿ ನೀಡಿ, ನೊಂದ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದ ಅವರು, ಧೈರ್ಯವಾಗಿ ಬದುಕು ಕಟ್ಟಿಕೊಳ್ಳಬೇಕು ಹಾಗೂ ಅನ್ಯಾಯದ ವಿರುದ್ಧ ಹೋರಾಡಬೇಕು ಎಂದು ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಯಾನಂದ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಡಾ. ಚುರ್ಚಿಹಾಳ, ಶಕ್ತಿ ಸದನದ ಪರಿಮಳಾ ಜೈನ್ ಇತರರಿದ್ದರು.

PREV

Recommended Stories

ಲಾಕ್‌ಡೌನ್‌ನಿಂದಾಗಿ ಪಂಚರ್ ಅಂಗಡಿ ಮುಚ್ಚಿ ಬೆಲ್ಲದ ಉದ್ಯಮಿಯಾದರು
ಇನ್ನೂ 2 ದಿನ ಮಳೆಯ ಅಬ್ಬರ: ಭಾನುವಾರದ ಬಳಿಕ ಇಳಿಮುಖ