ಕೆಲಸವಾಗಲಿ, ಗುರಿಯಾಗಲಿ ನಿರಂತರ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ: ಬಿ.ಎಸ್.ಚಂದನ್

KannadaprabhaNewsNetwork |  
Published : May 22, 2024, 12:55 AM IST
21ಕೆಎಂಎನ್ ಡಿ24 | Kannada Prabha

ಸಾರಾಂಶ

ನಿರಂತರ ಪ್ರಯತ್ನ ಮಾಡುತ್ತಿದ್ದರೆ ಮಾತ್ರ ನಮ್ಮ ಮುಂದಿನ ಜೀವನ ಸಫಲವಾಗುವುದರಲ್ಲಿ ಸಂದೇಹವಿಲ್ಲ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ಹಳ್ಳಿ ಜನರು ಎಂಬ ಕೀಳಿರಿಮೆ ಬಿಡಬೇಕು. ಜೀವನದಲ್ಲಿ ಸೋಲು- ಗೆಲುವು ಸಾಮಾನ್ಯ. ನಮ್ಮಲ್ಲಿ ಯಾವುದಾದರೂ ಒಂದು ಪ್ರತಿಭೆ ಇರುತ್ತದೆ. ಸಾಧನೆ ಮಾಡುವ ಛಲ ಇದ್ದರೆ ಧೃತಿಗೆಡದೆ ಮುನ್ನುಗ್ಗಬೇಕು.

ಕನ್ನಡಪ್ರಭ ವಾರ್ತೆ ಹಲಗೂರು

ಯಾವುದೇ ಕೆಲಸವಾಗಲಿ, ಗುರಿಯಾಗಲಿ ನಿರಂತರ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧಿಸಬಹುದು ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 731ನೇ ರ್‍ಯಾಂಕ್ ಪಡೆದ ಬಿ.ಎಸ್.ಚಂದನ್ ತಿಳಿಸಿದರು.

ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಹಲಗೂರು ಹೋಬಳಿಯ ಸಮಸ್ತ ನಾಗರೀಕರು ಸಾಧಕ ಅಭಿಮಾನಿಗಳು ಹಾಗೂ ಗುರು ವೃಂದದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಗುರಿ ಸಾಧನೆಗೆ ಒಳ್ಳೆಯ ದಾರಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿರಂತರ ಪ್ರಯತ್ನ ಮಾಡುತ್ತಿದ್ದರೆ ಮಾತ್ರ ನಮ್ಮ ಮುಂದಿನ ಜೀವನ ಸಫಲವಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ಹಳ್ಳಿ ಜನರು ಎಂಬ ಕೀಳಿರಿಮೆ ಬಿಡಬೇಕು. ಜೀವನದಲ್ಲಿ ಸೋಲು- ಗೆಲುವು ಸಾಮಾನ್ಯ. ನಮ್ಮಲ್ಲಿ ಯಾವುದಾದರೂ ಒಂದು ಪ್ರತಿಭೆ ಇರುತ್ತದೆ. ಸಾಧನೆ ಮಾಡುವ ಛಲ ಇದ್ದರೆ ಧೃತಿಗೆಡದೆ ಮುನ್ನುಗ್ಗಬೇಕು ಎಂದರು.

ನಮ್ಮ ತಾಯಿ ಹಾಗೂ ಅಣ್ಣನ ಪ್ರೇರೇಪಣೆಯಿಂದ ನಾನು ಈ ಮಟ್ಟಕ್ಕೆ ಬರಲು ಸಾಧ್ಯವಾಗಿದೆ. ನನಗೆ ಸನ್ಮಾನಿಸಿ ಅಭಿನಂದಿಸುವುದು ತುಂಬಾ ಸಂತೋಷವಾಗಿದೆ. ನನಗೆ ವಿದ್ಯೆ ಬುದ್ಧಿ ಹಾಗೂ ಉತ್ತಮ ನಡೆ ಮಾರ್ಗ ಕಲಿಸಿಕೊಟ್ಟ ಗುರುಗಳಿಗೆ ಚಿರಋಣಿಯಾಗಿದ್ದೇನೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ಚಂದನ್ ಹಾಗೂ ತಾಯಿ ಸವಿತಾ ಹಾಗೂ ಅಣ್ಣ ಚೇತನ್ ಅವರನ್ನು ಬೆಳ್ಳಿರಥದ ಸಾರೋಟಿನಲ್ಲಿ ಪಬ್ಲಿಕ್ ಶಾಲಾ ಅವರಣದಿಂದ ಕುಂಭ ಮೇಳದೊಡನೆ ದೇವರ ಕುಣಿತದ ಜೊತೆಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಕಾರ್ಯಕ್ರಮಕ್ಕೆ ಕರೆ ತರಲಾಯಿತು.

ಸಮಾರಂಭದಲ್ಲಿ ವಿವಿಧ ಸಂಘಟನೆಗಳು ಹಾಗೂ ಚಂದನ್ ಅವರ ಅಭಿಮಾನಿಗಳಿಂದ ಮೈಸೂರು ಪೇಟ ತೊಡಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜ್, ಡಾ. ಲಕ್ಷ್ಮಿ ಅಶ್ವಿನ್ ಗೌಡ, ಎ.ಎಸ್.ದೇವರಾಜು, ಎ,ಟಿ.ಶ್ರೀನಿವಾಸ್, ಬಸವರಾಜು, ಪುಟ್ಟಸ್ವಾಮಿ, ಕೃಷ್ಣ, ಮನೋಹರ, ಬಿ.ಕೆ.ಕೆಂಪು, ಮುನಿರಾಜು, ಎನ್.ಕೆ.ಕುಮಾರ್, ಸುರೇಶ್, ಭಾಸ್ಕರ್ ಸೇರಿದಂತೆ ಹಲವರು ಇದ್ದರು.

PREV