ನಾಡು, ನುಡಿ ಬಗ್ಗೆ ಅಭಿಮಾನವಿರಲಿ: ಡಾ.ಶಿವಕುಮಾರ ಸ್ವಾಮೀಜಿ

KannadaprabhaNewsNetwork |  
Published : Jan 24, 2024, 02:03 AM IST
ಚಿತ್ರ 23ಬಿಡಿಆರ್3ಬೀದರ್‌ನ ಸಿದ್ದಾರೂಢ ಮಹಿಳಾ ಪದವಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಚಿದಂಬರಾಶ್ರಮದ ಡಾ. ಶಿವಕುಮಾರ ಸ್ವಾಮಿಗಳು ಮಾತನಾಡಿದರು. | Kannada Prabha

ಸಾರಾಂಶ

ಬೀದರ್‌ನಲ್ಲಿ ನಡೆದ 50 ಕಡೆ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಗುರುನಾಥ ಕೊಳ್ಳುರು ಚಾಲನೆ. ಕಸಾಪ ಯುವ ಘಟಕದ ನೇತೃತ್ವದಲ್ಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಬೀದರ್‌

ಕನ್ನಡ ನಾಡಿನ ಅಸ್ಮಿತೆ, ಶ್ರೀಮಂತಿಕೆ, ಗತವೈಭವ, ಕನ್ನಡ ಕಟ್ಟಲು ಶ್ರಮಿಸಿದ ಮಹಾನ್ ಚೇತನಗಳ ಕಾರ್ಯವನ್ನು ಸ್ಮರಿಸಿಕೊಳ್ಳಬೇಕು ಈ ದಿಸೆಯಲ್ಲಿ ಹೆಚ್ಚಿನ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದ್ದು ಈ ನಾಡಿನ ಸಂಸ್ಕೃತಿ ಪರಂಪರೆ ಅರಿಯಬೇಕಾಗಿದೆ ಎಂದು ನಗರದ ಚಿದಂಬರಾಶ್ರಮದ ಡಾ. ಶಿವಕುಮಾರ ಸ್ವಾಮಿಗಳು ಹೇಳಿದರು.

ನಗರದ ಸಿದ್ದಾರೂಢ ಮಹಿಳಾ ಪದವಿ ಕಾಲೇನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕದ ನೇತೃತ್ವದಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನ ಹಾಗೂ ಸಮರ್ಥ ಸೇವಾ ಸಂಸ್ಥೆಯ ಸಹಯೋಗದಲ್ಲಿ ನಡೆದ ಕರ್ನಾಟಕ ಸಂಭ್ರಮ- 50ರ ಪ್ರಯುಕ್ತ 50 ಕಡೆ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಟಲ್ ಫೌಂಡೇಶನ್ ಅಧ್ಯಕ್ಷರಾದ ಗುರುನಾಥ ಕೊಳ್ಳುರು ಈ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಈ ಹಿಂದೆ ಅಮೃತ ಮಹೋತ್ಸವದ ನಿಮಿತ್ತ ದೇಶಾಭಿಮಾನ ಮೂಡಿಸಲು ಜಿಲ್ಲೆಯಾದ್ಯಂತ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದ್ದರು. ಈಗ ಮತ್ತೆ 50 ಕಡೆ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಅಭಿನಂದನಾರ್ಹ. ಇದರಿಂದ ಯುವಕರಲ್ಲಿ ಜಾಗೃತಿ ಮೂಡುವುದರ ಜೊತೆಗೆ ಸಾಮಾಜಿಕ ಕಳಕಳಿ ಹೆಚ್ಚುತ್ತದೆ. ಇಂತಹ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಸಲಹೆ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಕರ್ನಾಟಕ ಸಂಭ್ರಮ-50ರ ನಿಮಿತ್ತ ಕನ್ನಡ ನಾಡಿನ ಗತವೈಭವ ಸ್ಮರಿಸಬೇಕು ಮತ್ತು ಹೆಮ್ಮೆಪಡಬೇಕು. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದಕ್ಕೆ ಹಲ್ಮಿಡಿ ಶಾಸನವೆ ಸಾಕ್ಷಿ, ಶ್ರೀವಿಜಯ ಹೇಳಿದಂತೆ ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ನಾಡು ಇತ್ತೆಂದು ಅದನ್ನು ಇಂದಿನ ಯುವ ಪೀಳಿಗೆಯು ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಕಸಾಪ ಯುವ ಘಟಕವು ಯಾವುದೇ ಫಲಾಪೇಕ್ಷೆಯಿಲ್ಲದೆ 50 ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಂಡು ನಾಡು ನುಡಿಯ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕಸಾಪ ಯುವ ಘಟಕದ ಅದ್ಯಕ್ಷರಾದ ಗುರುನಾಥ ರಾಜಗೀರಾ ಆಶಯ ನುಡಿಗಳನ್ನಾಡಿ, ಇಂದಿನ ಯುವ ಸಮೂಹ ಕೇವಲ ಒದಿಗಷ್ಟೆ ಸೀಮಿತರಾಗದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಜೊತೆಗೆ ನಾಡು, ನುಡಿ, ದೇಶದ ಬಗ್ಗೆ ಕಾಳಜಿ ಹೊಂದಿರಬೇಕು ಎಂದರು.

ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಯ ಮುಖಂಡರಾದ ವಿರುಪಾಕ್ಷ ಗಾದಗಿ, ಚಿದಂಬರಾಶ್ರಮ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್‌ ಮೈಲಾರೆ, ಜಿಲ್ಲಾ ಕಸಾಪ ಕೋಶಾದ್ಯಕ್ಷ ಶಿವಶಂಕರ ಟೋಕರೆ, ಕಸಾಪ ಯುವ ಘಟಕದ ಗೌರವ ಕಾರ್ಯದರ್ಶಿ ವೀರೇಶ ಸ್ವಾಮಿ, ಕಾಲೇಜಿನ ಪ್ರಾಚಾರ್ಯರಾದ ನಾಗೇಶ ಜಾನಕನೋರ, ಆಕಾಶ ಮಮದಾಪೂರೆ ಸೇರಿದಂತೆ ಇತರರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ