ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ತರೀಕೆರೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 206 ರಸ್ತೆಯನ್ನು ಚತುಷ್ಪದ ರಸ್ತೆಯನ್ನಾಗಿ ಅಭಿವೃದ್ದಿಪಡಿಸಲು ಒಟ್ಟು 50 ಕೋಟಿ ರು. ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದ ಎ.ಆರ್.ಟಿ,ಒ. ಕಚೇರಿಯಿಂದ ಹಳಿಯೂರು ಕ್ರಾಸ್‌ವರೆಗೆ 3 ಕಿಮೀ ರಸ್ತೆ ಅಭಿವೃದ್ಧಿಗೊಳ್ಳಲಿದೆ. ಅಜ್ಜಂಪುರದ ಬಸ್ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ವಿವರಿಸಿದರು.ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂದಿಹೊಸಳ್ಳಿ, ಯರೇಹಳ್ಳಿ, ನಾರಣಾಪುರ ಗ್ರಾಮಗಳಲ್ಲಿ ನೂತನವಾಗಿ ಎಂ,ಯು.ಎಸ್.ಎಸ್. ಘಟಕ ಆರಂಭಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ, ಮತ್ತೊಂದು ಎಂ.ಯು.ಎಸ್.ಎಸ್. ಘಟಕ ಅಗತ್ಯವಿದ್ದರೆ ಗೋಪಾಲ ಅಥವಾ ರಂಗೇನಹಳ್ಳಿ ಭಾಗದಲ್ಲಿ 2 ಎಕರೆ ಜಾಗ ಗುರುತಿಸಿಕೊಟ್ಟರೆ ಕ್ಷೇತ್ರಕ್ಕೆ ಇನ್ನೂ ಒಂದು ಎಂ.ಯು.ಎಸ್,ಎಸ್ .ಘಟಕ ಮಂಜೂರು ಮಾಡಿಸಲಾಗುವುದು ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ಯಾವುದೇ ಸಭೆಯಿರಲಿ, ಅಧಿಕಾರಿಗಳು ತಮ್ಮ ಇಲಾಖೆ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಲೋಕೇಶಪ್ಪ ಮಾತನಾಡಿ, ಈ ಬಾರಿ ಮುಂಗಾರಿನಲ್ಲಿ ತರೀಕೆರೆಯಲ್ಲಿ ಶೇ.65 ರಷ್ಟು, ಅಜ್ಜಂಪುರದಲ್ಲಿ ಶೇ.70 ರಷ್ಟು ಮಳೆ ಕೊರತೆಯಾಗಿದೆ ಎಂದು ಮಾಹಿತಿ ನೀಡಿದರು.
ತಹಸೀಲ್ದಾರ್ ರಾಜೀವ್, ಅಜ್ಜಂಪುರ ತಹಸೀಲ್ದಾರ್ ಶಿವಶರಣಪ್ಪ, ತಾಪಂ ಆಡಳಿತಾಧಿಕಾರಿಗಳಾದ ಕೆ.ಸಿ.ಆನಂದ್, ಎನ್.ರಮೇಶ್‌ಬಾಬು, ತಾಪಂ ಇ,ಒ,ಗಣೇಶ್ ಮತ್ತಿತರರು ಭಾಗವಹಿಸಿದ್ದರು.
ತರೀಕೆರೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಏರ್ಪಡಿಸಲಾಗಿತ್ತು. ತಹಸೀಲ್ದಾರ್ ರಾಜೀವ್, ಅಜ್ಜಂಪುರ ತಹಸೀಲ್ದಾರ್ ಶಿವಶರಣಪ್ಪ. ತಾಪಂ ಇ.ಒ.ಗಣೇಶ್ ಮತ್ತಿತರರು ಇದ್ದಾರೆ.