ಕನ್ನಡಪ್ರಭ ವಾರ್ತೆ ಸಿಂಧನೂರು
ಅಕ್ರಮವಾಗಿ ಭಾರತ ದೇಶಕ್ಕೆ ಬಂದು ನೆಲೆಸಿದ ಬಾಂಗ್ಲಾ ದೇಶದ ಆರೋಪಿಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರು. ದಂಡ ವಿಧಿಸಿ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶೆ ರೂಪಾ ಸಿ.ವಗ್ಗಾ ಅವರು ಆದೇಶ ನೀಡಿದ್ದಾರೆ.ಆರೋಪಿಯು ಬಾಂಗ್ಲಾ ದೇಶದ ನಾಗರಿಕನಾಗಿದ್ದು, ಸುಮಾರು 10-12 ವರ್ಷಗಳ ಹಿಂದೆ ಅಕ್ರಮವಾಗಿ ಗಡಿದಾಟಿ ಭಾರತ ದೇಶಕ್ಕೆ ಬಂದು ಸಿಂಧನೂರು ತಾಲ್ಲೂಕಿನ ಆರ್.ಎಚ್.ನಂ.3 ಕ್ಯಾಂಪಿನಲ್ಲಿ ಅನಧಿಕೃತವಾಗಿ ವಾಸವಾಗಿದ್ದನು. ನಂತರ ಆರೋಪಿತನು ಪುನಃ ತನ್ನ ತಂದೆ, ತಾಯಿಯನ್ನು ನೋಡಿಕೊಂಡು ಬರಲು ಬಾಂಗ್ಲಾ ದೇಶಕ್ಕೆ ಹೋಗುವ ಕುರಿತು ತಾನು ಭಾರತದ ಪ್ರಜೆ ಎಂಬು ಸಾಬೀತು ಪಡಿಸಲು ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಬರೋಡಾ ಬ್ಯಾಂಕಿನಲ್ಲಿ ಖಾತೆ ಹೊಂದಿ ಅವುಗಳ ಆಧಾರದ ಮೇಲೆ ಪಾಸ್ಪೋರ್ಟ್ ಪಡೆಯಲು ಮಾರ್ಚ್ 5, 2018 ರಂದು ಅರ್ಜಿ ಸಲ್ಲಿಸಿ ಏಪ್ರಿಲ್ 5, 2018 ರಿಂದ ಏಪ್ರಿಲ್ 4, 2028 ರವರೆಗೆ ಪಾಸ್ಪೋರ್ಟ್ ನಂ.ಎಸ್1611909 ಪಡೆದು ಮರಳಿ ಬಾಂಗ್ಲಾ ದೇಶಕ್ಕೆ ಹೋಗುವಾಗ ಜೂನ್ 17, 2018 ರಂದು ಚೀಫ್ ಇಮುಗ್ರೇಷನ್ ಆಫೀಸರ್ ಅವರು ಪಾಸ್ಪೋರ್ಟ್ ಪರಿಶೀಲನೆ ಮಾಡಿ ಆರೋಪಿ ಶೋರನಜೀತ್ ಮಂಡಲ್ ಅಧಿಕೃತವಾಗಿ ಭಾರತ ಪ್ರಜೆ ಅಲ್ಲವೆಂದು ಅವನಲ್ಲಿದ್ದ ಪಾಸ್ಪೋರ್ಟ್ ಪಡೆದುಕೊಂಡಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಅಂದಿನ ತನಿಖಾಧಿಕಾರಿ ಸಬ್ಇನ್ಸ್‌ಪೆಕ್ಟರ್‌ಗಳಾದ ಸಿದ್ದರಾಮೇಶ್ವರ ಗಡೇದ್ ಮತ್ತು ರಾಘವೇಂದ್ರ ಅವರು ತನಿಖೆ ಕೈಗೊಂಡು ಆರೋಪಿತನ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದಾರೆ.ನಂತರ ಪ್ರಕರಣದ ವಾದ ವಿವಾದಗಳನ್ನು ಆಲಿಸಿದ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ರೂಪಾ ಸಿ.ವಗ್ಗಾ ಅವರು ಸಾಕ್ಷ್ಯಾಧಾರಗಳನ್ನು ಪರಾಮರ್ಶಿಸಿ ಆರೋಪಿ ಶೋರನಜೀತ್ ಮಂಡಲ್‌ಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರು.ದಂಡ ವಿಧಿಸಿ ಆದೇಶಿಸಿದ್ದಾರೆ. ಆರೋಪಿಯು ಮೂಲತಃ ಬಾಂಗ್ಲಾ ದೇಶದ ಪ್ರಜೆ ಆಗಿರುವುದರಿಂದ ಆತನಿಗೆ ನೀಡಿದ ಶಿಕ್ಷೆಯ ಅವಧಿಯು ಪೂರ್ಣಗೊಂಡ ನಂತರ ಆತನನ್ನು ಬಾಂಗ್ಲಾ ದೇಶಕ್ಕೆ ಕಳುಹಿಸಿ ಕೊಡಲು ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿ ಆದೇಶ ಹೊರಡಿಸಿದ್ದಾರೆ.ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರಾಗಲಪರ್ವಿ ಹನುಮೇಶ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದಾರೆ. ಪೊಲೀಸ್ ಸಿಬ್ಬಂದಿ ರಾಘವೇಂದ್ರ ಸರಿಯಾದ ಸಮಯಕ್ಕೆ ಸಾಕ್ಷಿದಾರರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.